ಬಳ್ಳಾರಿ,ಜ.25: ಬಳ್ಳಾರಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವರನ್ನಾಗಿ ನಮ್ಮ ಆತ್ಮೀಯರು, ಹಿತೈಷಿಗಳೂ ಆಗಿರುವ ರಾಜ್ಯದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ನೇಮಕ ಮಾಡಿರುವುದು ನನಗೆ ಅತ್ಯಂತ ಸಂತೋಷ, ಖುಷಿ ತಂದಿದ್ದು, ಸ್ವಾಗತಿಸುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವಂತೆ ನಾನು ಕಳೆದ ಅನೇಕ ತಿಂಗಳುಗಳಿಂದಲೂ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹಾಗೂ ಬಿಜೆಪಿ ವರಿಷ್ಠರನ್ನು ಮನವಿ ಮಾಡುತ್ತಾ ಬಂದಿದ್ದೇನೆ. ಮುಖ್ಯಮಂತ್ರಿಗಳು ಕಡೆಗೂ ನಮ್ಮ ಮನವಿಗೆ, ಹಂಬಲದ ಬೇಡಿಕೆಗೆ ಬೆಂಬಲ ನೀಡಿ ಸ್ಪಂದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಶ್ರೀರಾಮುಲು ಅವರನ್ನು ನೇಮಿಸಿರುವುದು ತುಂಬಾ ಹರುಷ, ಆನಂದವನ್ನುಂಟುಮಾಡಿದೆ ಎಂದಿದ್ದಾರೆ.
‘ಕನ್ನಡನಾಡು’ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕ ಜಿ.ಸೋಮಶೇಖರರೆಡ್ಡಿಯವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀರಾಮುಲು ನೇಮಕಗೊಂಡಿರುವುದರಿಂದ, ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ. ಅದರಲ್ಲಿಯೂ ಬಳ್ಳಾರಿ ನಗರವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಲಿದೆ. ಎಲ್ಲಾ ಅಭಿವೃದ್ಧಿ ಕಾಮಗಾರಿಗಳೂ ಕೈಗೂಡಲಿವೆ, ಹೆಚ್ಚಿನ ವೇಗ ಪಡೆದುಕೊಳ್ಳಲಿವೆ ಎನ್ನುವ ವಿಶ್ವಾಸ ನನಗಿದೆ ಎಂದರು. ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ಎಂದೋ ಸಿಕ್ಕಬೇಕಾಗಿತ್ತು. ಅದು ಈಗ ಈಡೇರಿದೆ. ಇದಕ್ಕಾಗಿ ಬಿಜೆಪಿ ಹೈಕಮಾಂಡ್‌ಗೆ, ಸಿಎಂ ಬೊಮ್ಮಾಯಿ ಹಾಗೂ ಎಲ್ಲಾ ಧುರೀಣರಿಗೂ ಕೃತಜ್ಞತಾ ವಂದನೆಗಳನ್ನು ತಿಳಿಸುತ್ತೇನೆ. ಬಳ್ಳಾರಿ ನಗರದ ಸರ್ವತೋಮುಖ ಪ್ರಗತಿಗೆ ಹೆಚ್ಚಿನ ಗಮನ ಹರಿಸಿ, ಸಚಿವ ಶ್ರೀರಾಮುಲು ಅವರ ಸಹಕಾರದೊಂದಿಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸೋಮಶೇಖರರೆಡ್ಡಿ ಸ್ಪಷ್ಟವಾಗಿ ನುಡಿದರು.