ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಯತ್ನಾಳ್: ಯತ್ನಾಳ್ ಬಣದಿಂದ ಶಸ್ತ್ರತ್ಯಾಗ

Kannada Nadu
ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಯತ್ನಾಳ್: ಯತ್ನಾಳ್ ಬಣದಿಂದ ಶಸ್ತ್ರತ್ಯಾಗ

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರರನ್ನು ಬದಲಿಸಬೇಕು ಎಂದು ಸಮರ ಸಾರಿ, ಭಿನ್ನಮತೀಯರ ಗುಂಪು ಕಟ್ಟಿಕೊಂಡು ದೆಹಲಿ ಯಾತ್ರೆ ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡ ಸದ್ಯ ಮೌನಕ್ಕೆ ಶರಣಾಗಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಬೀಸುವ ದೊಣ್ಣೆಯಿಂದ ಪಾರಾಗಲು ಯತ್ನಿಸುತ್ತಿದ್ದಾರೆ.

ಈವರೆಗೂ ಬಿಜೆಪಿ ಅಧ್ಯಕ್ಷೀಯ ಚುನಾವಣೆ ನಡೆದರೆ ನಾನು ಇಲ್ಲವೇ ನಮ್ಮ ಬಣದಿಂದ ಸ್ಪರ್ಧೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಅಬ್ಬರಿಸುತ್ತಿದ್ದ ಯತ್ನಾಳ್ ಅವರ ಬಣದ ಮಾತು ದಿನ ಕಳೆದಂತೆ ಬದಲಾಗುತ್ತಿದೆ. ಅಂದರೆ ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಎನ್ನುವಂತೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ ಎಂಬ ಹೊಸ ರಾಗ ಪ್ರಾರಂಭಿಸಿದ್ದಾರೆ.

‘ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಹೈಕಮಾಂಡ್‌ನ ಆ ಒಂದೇ ಒಂದು ನೋಟಿಸ್‌ಗೆ ಕೊನೆಗೂ ರೆಬಲ್ ತಂಡ ತಣ್ಣಗಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗುವ ಬಗ್ಗೆ ಬಿಜೆಪಿ ರೆಬೆಲ್ ಬಣದಲ್ಲಿ ಗೊಂದಲ ಪ್ರಾರಂಭವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದೆ ಸರಿಯುವ ಬಗ್ಗೆರೆಬೆಲ್ ಬಣ ಯೋಚಿಸುತ್ತಿದೆ.

ರೆಬೆಲ್ ನಾಯಕರ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರೇ ತೆಗೆದುಕೊಳ್ಳಲಿದ್ದಾರೆ. ಆದರೆ ಸದ್ಯಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ಯೋಚನೆಯನ್ನು ಬಿಡುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಪಕ್ಷದಲ್ಲಿ ಸಂಪೂರ್ಣ ಸಹಕಾರ ಸಿಗದಿರುವುದು ಹಾಗೂ ಕೆಲವು ತಟಸ್ಥ ಬಣದವರು ಬೆಂಬಲ ನೀಡಲು ಹಿಂದೇಟು ಹಾಕುತ್ತಿರುವುದು ರೆಬೆಲ್ ಬಣ ಹಿಂದೆ ಸರಿಯುವ ನಿರ್ಧಾರಕ್ಕೆ ಕಾರಣವಾಗಿದೆ. ಇದಲ್ಲದೆ ಹೈಕಮಾಂಡ್‌ ನಿಂದ ಬಂದಿರುವ ಖಡಕ್ ಎಚ್ಚರಿಕೆ ಮತ್ತು ಯತ್ನಾಳ್‌ಗೆ ನೀಡಿರುವ ನೋಟಿಸ್ ಕೂಡ ರೆಬೆಲ್ ಬಣವನ್ನು ಚಿಂತೆಗೀಡು ಮಾಡಿದೆ.

ಪಕ್ಷದಲ್ಲಿನ ತಟಸ್ಥ ಬಣದವರ ಬೆಂಬಲ ಇಲ್ಲದೆ ಯತ್ನಾಳ್ ಬಣ ಏಕಾಂಗಿಯಾಗಿ ಹೋರಾಟ ಮಾಡುವಂತಾಗಿದೆ. ಪದೇ ಪದೇ ತಮ್ಮ ಬಣವನ್ನು ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರವೂ ರೆಬೆಲ್ ಬಣದಲ್ಲಿದೆ. ವರಿಷ್ಠರ ಬೆಂಬಲ ಮತ್ತು ತಟಸ್ಥ ಬಣದ ಬೆಂಬಲ ಇಲ್ಲದೆ ಮುಂದೆ ಹೋದರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಭೀತಿಯೂ ರೆಬೆಲ್ ಬಣವನ್ನು ಕಾಡುತ್ತಿದೆ. ಹೀಗಾಗಿ ತಟಸ್ಥನಿಲುವು ತಾಳಿ, ಪಕ್ಷದಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪ್ರತ್ಯೇಕವಾಗಿಯೇ ಕೆಲಸ ಮಾಡಲು ರೆಬೆಲ್ ಬಣ ಮುಂದಾಗಿದೆ.

ಬಿಜೆಪಿ ನಾಯಕ ಯತ್ನಾಳ್ ಮೈಸೂರಿಗೆ ತೆರಳಿದ್ದು, ಚಾಮುಂಡಿ ತಾಯಿಯ ಮೊರೆ ಹೋಗಿದ್ದಾರೆ. ವಿಜಯೇಂದ್ರ ವಿರುದ್ಧ ಯತ್ನಾಳ್ ಅಸಮಾಧಾನ ಮುಂದುವರೆದಿದೆ. ಕೇಂದ್ರ ಬಿಜೆಪಿಯಿಂದ ಶಿಸ್ತು ಕ್ರಮದ ನೋಟಿಸ್ ಬಂದ ಮೇಲೆ ಚಾಮುಂಡಿ ತಾಯಿ ದರ್ಶನಕ್ಕೆ ಆಗಮಿಸಿದ್ದರು.

ಈ ವೇಳೆ ಚಾಮುಂಡಿ ಬೆಟ್ಟದಲ್ಲಿ ವಿಜಯೇಂದ್ರ ಪರ ಘೋಷಣೆಗಳು ಕೇಳಿಬಂದಿವೆ. ಯತ್ನಾಳ್ ಎದುರು ವಿಜಯೇಂದ್ರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಜೈ ವಿಜಯೇಂದ್ರ, ಜೈ ಬಿ.ಎಸ್.ವೈ ಎಂದೂ ಘೋಷಣೆ ಮೊಳಗಿವೆ. ಜೈ ವಿಜಯೇಂದ್ರ ಎಂಬ ಘೋಷಣೆ ಕೇಳಿದ ಯತ್ನಾಳ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಹೊರಟು ಹೋದರು. ಮಾಧ್ಯಮಗಳಿಂದ ದೂರ ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";