ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತ ಕಾರ್ಯಾಗಾರ

ಬಳ್ಳಾರಿ,ಮಾ.24 : ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯದ ಹಂಚಿನಲ್ಲಿರುವ ದುರ್ಬಲವರ್ಗದ ಜನಸಂಖ್ಯೆ ಹೊಂದಿದೆ. ಎಚ್‍ಐವಿ ಸೊಂಕಿನಿಂದ ಬಳಲುತ್ತಿರುವವರ ಜೊತೆಗೆ ಗಣಿಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಹೆಚ್ಚಾಗಿದ್ದು, ಈ ಎಲ್ಲ ವರ್ಗದ ಜನರು ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗ ಗುರುತಿಸಿದೆ!.ಕೇಂದ್ರ ಕ್ಷಯ ವಿಭಾಗವು ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಅಡಿಯಲ್ಲಿಯೂ ಅಳವಡಿಸಿದೆ. 2021 ನೇ ಸಾಲಿನಲ್ಲಿ ಒಟ್ಟು 4626 ಕ್ಷಯರೋಗಿಗಳು ಜಿಲ್ಲೆಯಲ್ಲಿ ಕಂಡು ಬಂದಿದ್ದು,ಅದರಲ್ಲಿ ಶೇ.63.9ರಷ್ಟು ಪುರುಷರು ಮತ್ತು ಶೇ.36.1ರಷ್ಟು ಮಹಿಳೆಯರು, ಇಬ್ಬರು ಮಾತ್ರ ಮಂಗಳಮುಖಿಯರು ನೋಂದಣಿಯಾಗಿರುತ್ತಾರೆ. ಇದರಲ್ಲಿ ಒಟ್ಟು 211 ಮಕ್ಕಳಿಗೆ ಕ್ಷಯರೋಗ ಇರುವುದು ದೃಢಪಟ್ಟಿದ್ದು ಅದರಲ್ಲಿ ಶೇ.55.9ರಷ್ಟು ಗಂಡು ಮಕ್ಕಳು ಹಾಗೂ ಶೇ.44.1ರಷ್ಟು ಹೆಣ್ಣು ಮಕ್ಕಳು ಇರುವುದು ಗಮನಾರ್ಹ.

ಒಟ್ಟು ರೋಗಿಗಳಲ್ಲಿ 419 (9%) ರೋಗಿಗಳು ಮರಣ ಹೊಂದಿದ್ದು, ಅದರಲ್ಲಿ ಶೇ.74ರಷ್ಟು ಪುರುಷ ಕ್ಷಯರೋಗಿಗಳು ಮರಣ ಹೊಂದಿದ್ದಾರೆ ಎಂಬ ಸಂಗತಿಗಳನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅನಿಲಕುಮಾರ್ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಯೋಜನಾ ನಿರ್ವಾಹಕಿ ಡಾ.ತೇಜಸ್ವಿನಿ ಹಿರೇಮಠ ಅವರು ತಿಳಿಸಿದರು. ಜಿಲ್ಲಾಡಳಿತ,ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಹಾಗೂ ಸ್ಟಾಪ್ ಟಿಬಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಟಿಬಿ ಸೋಲಿಸಿ ದೇಶ ಗೆಲ್ಲಿಸಿ ಅಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಕ್ಷಯರೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡಿದರೆ ಅದರಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರು ಕಡಿಮೆ ಸಂಖ್ಯೆಯಲ್ಲಿರುವುದು ಸರಿಯೇ ಎನ್ನುವುದು ಪ್ರಶ್ನೆಯಾಗಿದೆ..? ಆದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗಕ್ಕೆ ತುತ್ತಾಗಲು ಹಲವು ಕಾರಣಗಳನ್ನು ನೋಡಬಹುದು ಎಂದು ವಿವರಿಸಿದ ಅವರು ಅದರಲ್ಲಿ ಪ್ರಮುಖವಾಗಿ ಪೌಷ್ಟಿಕತೆಯ ಪ್ರಮಾಣ, ಕಾರ್ಖಾನೆಗಳಲ್ಲಿ ಅಪಾಯದ ವಲಯದಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಹಾಗೂ ಪುರುಷ ಕ್ಷಯರೋಗಿಗಳ ಬೆಂಬಲ ಹಾಗೂ ಆರೈಕೆ ಸೇವೆಯಲ್ಲಿರುವ ಮಹಿಳೆಯರು ಅಥವಾ ಅವರಿಗೆ ಯಾವುದೇ ಸೇವಾ ಸೌಲಭ್ಯಗಳು ದೊರಕುತ್ತಿಲ್ಲವೇ ? ಎಂಬ ಅಂಶಗಳು ಕ್ಷೇತ್ರ ಭೇಟಿ ನೀಡಿದಾಗ ಕಂಡುಬಂದಿವೆ ಎಂದರು.

ಕ್ಷೇತ್ರ ಭೇಟಿ ನೀಡಿದಾಗ ಕಂಡು ಬಂದಿರುವ ಪ್ರಕಾರ ಕಾರಣಗಳನ್ನು ಪರಿಶೀಲಿಸಲಾಗಿ ಕ್ಷಯರೋಗದ ಕಳಂಕ ಅಥವಾ ತಾರತಮ್ಯದಿಂದಾಗಿ ಕ್ಷಯರೋಗದ ಸೇವಾ ಸೌಲಭ್ಯಗಳಿಂದ ಮಹಿಳೆಯರು ಮತ್ತು ಕಿಶೋರಿಯರು ವಂಚಿತರಾಗಿರುವುದು ಕಂಡುಬಂದಿದೆ ಎಂದು ವಿವರಿಸಿದ ಅವರು ಕ್ಷಯರೋಗ ಇದೆ ಎಂದು ಖಚಿತವಾಗಿರುವ ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಪುರುಷರಿಗಿಂತ ಬಹಳ ಗಂಭೀರವಾದ ಕಳಂಕ ಅಥವಾ ತಾರತಮ್ಯದಿಂದ ಕ್ಷಯರೋಗದ ಚಿಕಿತ್ಸೆ ತೆಗೆದುಕೊಂಡು ಗುಣಮುಖರಾಗಲು ಬಹಳ ಪ್ರಯತ್ನ ಮಾಡಬೇಕಾಗಿದೆ ಎಂದರು. ಪ್ರಸ್ತುತ ಕ್ಷಯ ಮುಕ್ತ ಮಾಡಲು ಸಮಾಜ ಹಾಗೂ ಸಮುದಾಯದಲ್ಲಿರುವ ಮಹಿಳೆಯರು ಹಾಗೂ ಕಿಶೋರಿಯರ ಬಗ್ಗೆ ಇರುವ ಕಳಂಕ ಅಥವಾ ತಾರತಮ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಜೊತೆಗೆ ಸಮುದಾಯದ ಸಹಭಾಗಿತ್ವದೊಂದಿಗೆ ಕೈಜೋಡಿಸಿ ಕ್ಷಯ ಮುಕ್ತ ಭಾರತವನ್ನು ಮಾಡಲು ನಿರಂತರವಾದ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು. ಟಿ.ಬಿ, ಸೋಲಿಸಿ ದೇಶ ಗೆಲ್ಲಿಸಿ ಎಂಬ ಮಹತ್ವಪೂರ್ಣ ಅಭಿಯಾನದ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್, ಫ್ಯಾಮಿಲಿ ಟಾಸ್ಕ್ ಫೋರ್ಸ್ ಹಾಗೂ ಸ್ವಸಹಾಯ ಗುಂಪುಗಳ ಸಹಕಾರದಿಂದ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರಂತರವಾಗಿ ಮಾಡುತ್ತಿದೆ ಎಂದರು.


ಕ್ಷಯರೋಗದ ಲಕ್ಷಣಗಳಿವು:
1. ಕ್ಷಯರೋಗವು ಮೈಕ್ರೋಬ್ಯಾಕ್ಟೀರಿಯಾ ಟ್ಯೂಬರ್‍ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಎರಡು ವಾರಗಳ ಕಾಲ ಹೆಚ್ಚು ಅವಧಿಯ ಕೆಮ್ಮು,ಸಂಜೆ ವೇಳೆ ಜ್ವರ,ರಾತ್ರಿ ವೇಳೆ ಬೆವರುವುದು,ಕಫ,ಕಫದಲ್ಲಿ ರಕ್ತ ಬೀಳುವುದು,ಎದೆ ನೋವು,ಹಸಿವಾಗದಿರುವುದು,ತೂಕ ಇಳಿಕೆ ಕ್ಷಯರೋಗದ ಲಕ್ಷಣಗಳಾಗಿವೆ.
2. ರೋಗಿಯು ಕೆಮ್ಮಿದಾಗ,ಸೀನಿದಾಗ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.ಕ್ಷಯರೋಗಿಯನ್ನು ಮುಟ್ಟುವುದರಿಂದ,ಕೈಕುಲುಕುವುದರಿಂದ ಕ್ಷಯರೋಗ ಹರಡುವುದಿಲ್ಲ. ಕ್ಷಯರೋಗ ತ್ವರಿತ ಪತ್ತೆಗಾಗಿ ಜಿಲ್ಲಾಸ್ಪತ್ರೆ/ವಿಮ್ಸ್‍ನಲ್ಲಿ ಸಿಬಿನ್ಯಾಟ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಟ್ರ್ಯೂನಾಟ್ ಯಂತ್ರಗಳನ್ನು ಪೂರೈಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ  ಸಂಪೂರ್ಣ ಉಚಿತ. ಹತ್ತಿರದ ಡಾಟ್ಸ್ ಕೇಂದ್ರಗಳಲ್ಲಿಯೂ ಕ್ಷಯರೋಗದ ಔಷಧಿಗಳು ದೊರೆಯುತ್ತವೆ ಎಂದು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಯೋಜನಾ ನಿರ್ವಾಹಕಿ ಡಾ.ತೇಜಸ್ವಿನಿ ಹಿರೇಮಠ ಅವರು ತಿಳಿಸಿದರು.
3. ಕ್ಷಯರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರದಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ, ಸೋಪಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ,ಎಲ್ಲೆಂದರಲ್ಲಿ ಕಫ ಉಗುಳಬೇಡಿ,ಗಾಳಿ,ಬೆಳಕು ಸರಾಗವಾಗಿ ಬರುವಂತೆ ಮಾಡಲು ಮನೆಗಳ ಕಿಟಗಿ ಬಾಗಿಲುಗಳನ್ನು ತೆರೆದಿಡಿ ಎಂದು ಅವರು ಸಲಹೆ ನೀಡಿದರು.
4. ಕ್ಷಯರೋಗಿಗಳಿಗೆ ನಿಕ್ಷಯ ಪೋಷಣ ಯೋಜನೆ ಅಡಿ ಡಿಬಿಟಿ ಬೆಂಬಲ ನೀಡಲಾಗುತ್ತದೆ.ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರಕ್ಕಾಗಿ ಮಾಸಿಕ ರೂ.500 ಪ್ರೋತ್ಸಾಹಧನವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top