ಗುಣಪಡಿಸುವ ಕಾಯಿಲೆ ಕ್ಷಯರೋಗ;ಆತಂಕ ಬೇಡ

ಬಳ್ಳಾರಿ,ಮಾ.24 : ಬಳ್ಳಾರಿ ಜಿಲ್ಲೆಯನ್ನು ಸಂಪೂರ್ಣ ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ/ವಿಮ್ಸ್ ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸಿಬಿನ್ಯಾಟ್ ಮತ್ತು ಟ್ರ್ಯೂನಾಟ್ ಮಶೀನ್‍ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಮೊಬೈಲ್ ಸಿಬಿನ್ಯಾಟ್ ಮಶೀನ್ ಮತ್ತು 07 ಟ್ರ್ಯೂನಾಟ್ ಮಶೀನ್‍ಗಳನ್ನು ಖರೀದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ಕ್ಷಯರೋಗ ದಿನಾಚರಣೆ ಅಂಗವಾಗಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ 80ಲಕ್ಷ ರೂ.ವೆಚ್ಚದಲ್ಲಿ ಕ್ಷಯರೋಗದ ತ್ವರಿತ ಪತ್ತೆಗೆ ಮೊಬೈಲ್(ಸಂಚಾರಿ) ಸಿಬಿನ್ಯಾಟ್ ಯಂತ್ರದ ವಾಹನ ಖರೀದಿಸಲಾಗುತ್ತಿದ್ದು,ಒಂದೆರಡು ತಿಂಗಳಲ್ಲಿ ಬಳ್ಳಾರಿಗೆ ಬರಲಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಈ ಮೊಬೈಲ್ ಸಿಬಿನ್ಯಾಟ್ ಮಶೀನ್ ವಾಹನವು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ಬರದ ಕ್ಷಯರೋಗದ ಲಕ್ಷಣಗಳಿಂದ ಬಳಲುತ್ತಿರುವವವರನ್ನು ಗುರುತಿಸಿ ಕ್ಷಯರೋಗ ಪತ್ತೆ ಹಚ್ಚಲಾಗುವುದು; ಈ ಮಶೀನ್ ಮೂಲಕ ಎರಡು ಗಂಟೆಗಳಲ್ಲಿ ವರದಿ ಕೈಸೆರಲಿದ್ದು,ಅದರನುಸಾರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು. ಕ್ಷಯರೋಗದ ತಪಾಸಣೆಗೆ ಸಂಬಂಧಿಸಿದಂತೆ ಹಳ್ಳಿಗಳಲ್ಲಿ ವಿಶೇಷ ಅಭಿಯಾನ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿ ತಪಾಸಣೆಗೆ ಒಳಪಡಿಸಲಾಗುವುದು ಎಂದರು.


ಈಗಾಗಲೇ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಟ್ರ್ಯೂನಾಟ್ ಮಶೀನ್‍ಗಳನ್ನು ಅಳವಡಿಸಲಾಗಿದ್ದು,ತಪಾಸಣೆ ಮಾಡಲಾಗುತ್ತಿದೆ.ಹೋಬಳಿ ಹಂತದಲ್ಲಿಯೂ ತ್ವರಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಉದ್ದೇಶದಿಂದ 07 ಟ್ರ್ಯೂನಾಟ್ ಮಶೀನ್‍ಗಳನ್ನು ಖರೀದಿಸಲಾಗುತ್ತಿದೆ ಎಂದರು. ಕ್ಷಯರೋಗವು ಗುಣಪಡಿಸುವ ಕಾಯಿಲೆಯಾಗಿದ್ದು,ಯಾರು ಆತಂಕಪಡಬೇಕಿಲ್ಲ; ಎರಡು ವಾರಗಳ ಕಾಲ ಹೆಚ್ಚು ಅವಧಿಯ ಕೆಮ್ಮು,ಸಂಜೆ ವೇಳೆ ಜ್ವರ,ರಾತ್ರಿ ವೇಳೆ ಬೆವರುವುದು,ಕಫ,ಕಫದಲ್ಲಿ ರಕ್ತ ಬೀಳುವುದು,ಎದೆ ನೋವು,ಹಸಿವಾಗದಿರುವುದು,ತೂಕ ಇಳಿಕೆ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಬಂದು ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿರುವ ಪ್ರಮುಖ ಕೈಗಾರಿಕೆಗಳ ಜತೆ ಸಮನ್ವಯ ಸಾಧಿಸಿ ಅಲ್ಲಿನ ಕಾರ್ಮಿಕರನ್ನು ತಪಾಸಣೆ ಅಭಿಯಾನ ನಡೆಸಿ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕ್ಷಯರೋಗಿಗಳಲ್ಲಿ ಶೇ.36ರಷ್ಟು ಮಹಿಳೆಯರೇ ಇರುವುದು ಅತಂಕಕಾರಿ ಸಂಗತಿ ಎಂದು ಹೇಳಿದ ಡಿಸಿ ಮಾಲಪಾಟಿ ಅವರು ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯೇ ಕ್ಷಯರೋಗದಿಂದ ಗುಣಮುಖರಾಗುವ ಮಾರ್ಗ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ, ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಯೋಜನಾ ನಿರ್ವಾಹಕಿ ಡಾ.ತೇಜಸ್ವಿನಿ ಹಿರೇಮಠ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top