ನಮಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ, ನಮಗೂ ಆತ್ಮಸಾಕ್ಷಿ ಮತಗಳು ಬರುತ್ತವೆ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು : ನಮಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಅಡ್ಡಮತದಾನದ ಸೂಚನೆ ನೀಡಿರುವ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ;

 

ನಮಗೂ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ನೆಂಟಸ್ಥನ ಮಾಡುತ್ತಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ. ಬಿಜೆಪಿ ಮತ್ತು ಜೆಡಿಎಸ್ ನವರು ಸದಾ ಕುದುರೆ ವ್ಯಾಪಾರ ಮಾಡುತ್ತಾರೆ. ಅವರು ಅದಕ್ಕೆ ಹೆಸರುವಾಸಿ. ಫೆ. 27 ರಂದು ಎಲ್ಲವೂ ತಿಳಿಯಲಿದೆ. ಅವರು ಬಿಜೆಪಿಗೆ ಬಹಳ ಹತ್ತಿರವಾಗಿರುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ.

ಆ ಪಕ್ಷಗಳಿಂದ ನಿಮಗೆ ಎಷ್ಟು ಆತ್ಮಸಾಕ್ಷಿ ಮತಗಳು ಸಿಗಬಹುದು ಎಂದು ಕೇಳಿದಾಗ, “ಮತದಾನದ ನಂತರ ತಿಳಿಸುತ್ತೇವೆಎಂದರು.

ಮೈತ್ರಿಯಿಂದ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಿರುವ ಬಗ್ಗೆ ಕೇಳಿದಾಗ, “ಅವರು ಅವರ ಪ್ರಯತ್ನ ಮಾಡಲಿ. ನಾವು ನಮ್ಮ ಒಗ್ಗಟ್ಟಿನ ರಾಜಕಾರಣ ಮಾಡುತ್ತೇವೆಎಂದು ತಿಳಿಸಿದರು.

ನಮ್ಮ ಅಭ್ಯರ್ಥಿಗಳು ರಾಜ್ಯಸಭೆಯಲ್ಲಿ ಕರ್ನಾಟಕದ ಪರ ಧ್ವನಿ ಎತ್ತಲಿದ್ದಾರೆ:

ರಾಜ್ಯಸಭೆ ಅಭ್ಯರ್ಥಿಗಳ ವಿಚಾರವಾಗಿ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಬೆಂಬಲ ನೀಡಿದ್ದಾರೆ. ರಾಜ್ಯಸಭೆಗೆ ನಮ್ಮ ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇವರು ಆಯ್ಕೆಯಾಗಿ ರಾಜ್ಯಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂಬ ವಿಶ್ವಾಸವಿದೆಎಂದರು.

ಅಜಯ್ ಮಾಕೇನ್ ಅವರ ಆಯ್ಕೆ ವಿಚಾರವಾಗಿ ಕೇಳಿದಾಗ, “ಈ ಹಿಂದೆ ಬಿಜೆಪಿ, ಜೆಡಿಎಸ್ ನವರು ಕರೆದುಕೊಂಡು ಬಂದು ನಿಲ್ಲಿಸಿದ್ದರಲ್ಲ, ಅವರನ್ನು ಕೇಳಿ. ಅಜಯ್ ಮಾಕೇನ್ ಅವರ ಕುಟುಂಬ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಅನೇಕ ತ್ಯಾಗ ಮಾಡಿದೆ. ವಿದ್ಯಾರ್ಥಿ ನಾಯಕನಿಂದ ದೆಹಲಿವರೆಗೂ ಪಕ್ಷದ ಸಂಘಟನೆ ಮಾಡಿರುವ ಪಕ್ಷದ ಆಧಾರಸ್ತಂಭ ಇವರು. ಹೀಗಾಗಿ ಅವರನ್ನು ನಾವು ಬಹಳ ಸಂತೋಷದಿಂದ ಆಯ್ಕೆ ಮಾಡಿದ್ದೇವೆಎಂದರು.

ಪ್ರಜಾಪ್ರಭುತ್ವ ರಕ್ಷಣೆಗೆ ಸುಪ್ರೀಂ ಮಹತ್ವದ ನಿರ್ಧಾರ:

 

ಚುನಾವಣಾ ಬಾಂಡ್ ಗಳನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಕೇಳಿದಾಗ, “ದೇಶದ ಇತಿಹಾಸದಲ್ಲೇ ಇದೊಂದು ಮಹತ್ವದ ನಿರ್ಧಾರ. ಅವರ ಈ ಧೈರ್ಯವಾದ ನಿರ್ಧಾರಕ್ಕೆ ನಾನು ಅಭಿನಂದಿಸುತ್ತೇನೆ. ದೇಶದ ಪ್ರಜಾಪ್ರಭುತ್ವ ಉಳಿಸಲು ಇಂತಹ ಮಹತ್ವದ ನಿರ್ಧಾರಗಳು ಬೇಕು” ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top