ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ -2024ಕ್ಕೆ ವಿಧಾನ ಸಭೆ ಅನುಮೋದನೆ.

ಇನ್ನುಮುಂದೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ.

ವಿಧಾನ ಸಭೆ – ಬೆಂಗಳೂರು :  ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ –2024 ವನ್ನು ಇಂದು ಕರ್ನಾಟಕ ವಿಧಾನ ಸಭೆಯು ಅಂಗೀಕರಿಸಿತು. ಸದನದಲ್ಲಿ ವಿಧೇಯಕವನ್ನು ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ವಿಧೇಯಕದ 17ನೇ ಪ್ರಕರಣದಲ್ಲಿ (06) ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40 ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ. ಈ ಹಿಂದೆ ಇದನ್ನು ಶೇ.50:50 ಎಂದು ಆದೇಶ ಹೊರಡಿಸಲಾಗಿತ್ತು ಎಂದು ವಿವರಿಸಿದರು.

 

ಇದಲ್ಲದೆ, ವಿಧೇಯಕದ 07 (02) ರಲ್ಲಿ ಜಾರಿ ಸಮಿತಿಯಲ್ಲಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಸಂಚಾಲಕರೆಂದು ಯೋಜಿಸಲಾಗಿತ್ತು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಸಾಕಷ್ಟು ಹೊಣೆಗಾರಿಕೆಗಳಿದ್ದು, ಸಂಚಾಲಕರಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗುವುದರಿಂದ ಅವರನ್ನು ಸದಸ್ಯರನ್ನಾಗಿ ಮಾಡಿ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರನ್ನು ಸಂಚಾಲಕರನ್ನಾಗಿ ಪ್ರತಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ತಿದ್ದುಪಡಿ ವಿಧೇಯಕವನ್ನು ಸ್ವಾಗತ ಮಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಈ ತಿದ್ದುಪಡಿ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ನನಗೆ ಇರುವ ಆತಂಕವೇನೆಂದರೆ, ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಮಾಲ್ಗಳು, ಇವನ್ನು ಪಾಲಿಸುತ್ತವೆಯೇ? ದೊಡ್ಡ ಮೊತ್ತದ ದಂಡ ಹಾಕಿದಾಗ ಮಾತ್ರ ಅವು ಹೆದರುತ್ತವೆಯೇ ಹೊರತು. ನೋಟಿಸ್ ಗಳಿಗೆ ಹೆದರುವುದಿಲ್ಲ. ಆದ್ದರಿಂದ ನಿಯಮ ರೂಪಿಸುವಾಗ ಈ ಆದೇಶವನ್ನು ಪಾಲಿಸದ ಸಂಸ್ಥೆಗಳಿಗೆ ದೊಡ್ಡ ಮೊತ್ತದ ದಂಡವನ್ನು ಹಾಕಬೇಕು. ಸಾಧ್ಯವಾದರೆ ಪೊಲೀಸ್ ಅಧಿಕಾರಿಗಳು ಸಮಿತಿಯಲ್ಲಿರಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ ಎಂದರು.

ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕನ್ನಡ ಭಾಷೆ ಬಳಕೆಗೆ ವಿಧೇಯಕವನ್ನು ಮಂಡನೆ ಮಾಡುತ್ತಿರುವ ಸಂದರ್ಭ ಎದುರಾಗಿರುವುದು ನನಗೆ ಅತೀವ ಬೇಸರವುಂಟು ಮಾಡಿದೆ. ನಮ್ಮ ಮನಸ್ಥಿತಿಗಳನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಇತರ ಭಾಷಿಕರಿಗೆ ಬೆಂಗಳೂರಿನ ಬಗ್ಗೆ ಲಸ್ಟ್ ಇದೆ, ಲವ್ ಇಲ್ಲ ಇಂತಹ ಕೆಟ್ಟ ಮನಸ್ಥಿತಿ ಬದಲಾಗಬೇಕಿದೆ. ಇನ್ನು ಮುಂದಾದರೂ ಕನ್ನಡ ಭಾಷಾ ಅನುಷ್ಠಾನ ಸಮರ್ಪಕವಾಗಲಿ ಎಂದರು.

ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಸಹ ತಿದ್ದುಪಡಿ ವಿಧೇಯಕ ಮಂಡನೆಯನ್ನು ಸ್ವಾಗತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿಯವರು ಸದನದಲ್ಲಿ ಶಾಸಕರು ವ್ಯಕ್ತಪಡಿಸಿದ ಎಲ್ಲಾ ಅಭಿಪ್ರಾಯಗಳನ್ನು ಗೌರವಿಸುತ್ತೇನೆ ಹಾಗೂ ಅವರ ಸಲಹೆಗಳನ್ನು ನಿಯಮ ರೂಪಿಸುವಾಗ ಅಳವಡಿಸಿಕೊಳ್ಳುತ್ತೇವೆ ಎಂದರು. ನಾವು ಈಗಾಗಲೇ ನಿಯಮ ರೂಪಿಸಲು ಒಂದು ಸಮಿತಿ ರಚನೆ ಮಾಡಿ, ಹಲವು ಸುತ್ತಿನ ಚರ್ಚೆಗಳನ್ನು ಮಾಡಿದ್ದೇವೆ. ಒಂದು ಎನ್ಫೋರ್ಸ್ಮೆಂಟ್ ವಿಂಗ್ (ಜಾರಿ ಘಟಕ) ಅನ್ನು ಮಾಡಲಾಗುತ್ತದೆ. ಜಾರಿ ಅಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳು ಇದರಲ್ಲಿರುತ್ತಾರೆ. ಇವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ದೊಡ್ಡ ಮಟ್ಟದ ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶ ಮಾಡಲಾಗುತ್ತಿದೆ. ಒಂದು ವೇಳೆ ಆದೇಶಕ್ಕೆ ಗೌರವ ನೀಡದೇ ಹೋದರೆ ಅಂತಹ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರು. 

ಬೆಂಗಳೂರೇ ದೊಡ್ಡ ಸಮಸ್ಯೆ ಕನ್ನಡ ಅನುಷ್ಠಾನದಲ್ಲಿ ಬೆಂಗಳೂರೇ ಮೊದಲ ಸಮಸ್ಯೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ಕನ್ನಡ ಬಳಕೆಯಾದರೆ ರಾಜ್ಯದ ಇತರ ಭಾಗಗಳಲ್ಲಿ ಇದು ಸುಲಭವಾಗುತ್ತದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟೂ ವಲಯಗಳ ಆಯುಕ್ತರ ನೇತೃತ್ವದಲ್ಲಿ ಎಂಟು ಜಾರಿ ಸಮಿತಿಯನ್ನು ರಚಿಸಲಾಗುವುದು. ಅವರ ಮೂಲಕ ಕನ್ನಡ ಅನುಷ್ಠಾನದ ಬಗ್ಗೆ ಕಠಿಣ ಕ್ರಮವಹಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಕನ್ನಡ ಕಣ್ಗಾವಲು ಆಪ್

 ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ಕನ್ನಡ ಕಣ್ಗಾವಲು ಎಂಬ ಆಪ್ ಅನ್ನು ರೂಪಿಸಲಾಗುತ್ತಿದೆ. ಇಲ್ಲಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಿ, ಅವರು ಆ ದೂರುಗಳ ಬಗ್ಗೆ ಕ್ರಮವಹಿಸುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸದನಕ್ಕೆ ಸಚಿವ ಶಿವರಾಜ ತಂಗಡಗಿ ಅವರು ವಿವರಿಸಿದರು.

ರಾಜ್ಯಪಾಲರ ನಡೆಯ ಬಗ್ಗೆ ಯಾವುದೇ ಆಕ್ಷೇಪ ಇಲ್ಲ

 

ಈ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸಲು ರಾಜ್ಯಪಾಲರಿಗೆ ಕಳುಹಿಸಿದಾಗ ಅವರು ಅದನ್ನು ಹಿಂತಿರುಗಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ರಾಜ್ಯಪಾಲರು ಕನ್ನಡ ಭಾಷೆಯ ಬಗೆಗಿನ ಅಗೌರವದಿಂದಾಗಲಿ ಅಥವಾ ಯಾವುದೇ ಬೇರೆ ರೀತಿಯ ಭಾವನೆಯಿಂದ ಹಿಂತಿರುಗಿಸಿರುವುದಿಲ್ಲ. ಸದನದ ದಿನಾಂಕ ಘೋಷಣೆಯಾದ ಕಾರಣ ಸದನದಲ್ಲೇ ಮಂಡನೆಯಾಗಲಿ ಎಂಬ ಸದುದ್ದೇಶದಿಂದ ಹಿಂತಿರುಗಿಸಿದ್ದಾರೆ. ಆ ಬಗ್ಗೆ ತಪ್ಪು ಕಲ್ಪನೆ ಜನರಿಗೆ ಹೋಗುವುದು ಬೇಡ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ ರಾಜ್ಯಪಾಲರ ನಡೆಯ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ನಾನೂ ಸಹ ಮಾಧ್ಯಮದವರಿಗೆ ರಾಜ್ಯಪಾಲರು ಯಾವುದೇ ಆಕ್ಷೇಪ ಅಥವಾ ವಿರೋಧ ವ್ಯಕ್ತಪಡಿಸಿ, ವಿಧೇಯಕವನ್ನು ಹಿಂತಿರುಗಿಸಿರುವುದಿಲ್ಲ. ಬದಲಾಗಿ ಸದನದ ಕಲಾಪದ ದಿನಾಂಕ ಪ್ರಕಟಣೆಯಾಗಿರುವುದರಿಂದ ಸದನದಲ್ಲೇ ಮಂಡನೆಯಾಗಿಲಿ ಎಂಬ ಸದುದ್ದೇಶದಿಂದಲೇ ವಿಧೇಯಕ ಹಿಂತಿರುಗಿಸಿದ್ದಾರೆ ಎಂದು ಹೇಳಿದ್ದೇನೆ. ಈ ಬಗ್ಗೆ ಯಾವುದೇ ಆಕ್ಷೇಪ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.

Facebook
Twitter
LinkedIn
Telegram
WhatsApp
Print
Email

Leave a Comment

Your email address will not be published. Required fields are marked *

Translate »
Scroll to Top