ಬೆಂಗಳೂರು : ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಆಪ್ಷನ್ ನೋಡ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ, ಅಕ್ಕಿಯನ್ನ ಬೇರೆ ರಾಜ್ಯದಿಂದ ತರುವ ಬಗ್ಗೆ ಮಾತುಕತೆ ನಡೆದಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ತೇವೆ ಎಂದರು.
ಸಿಎಂ, ಸಚಿವರು ದೆಹಲಿಗೆ ಹೋಗಿ ಯಾರನ್ನ ಭೇಟಿಯಾಗಿದ್ದಾರೆ, ಏನು ಮಾಡಿದ್ದಾರೋ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ಹೋಗುವ ಟೈಮ್ ಬರುತ್ತದೆ, ಹೋಗ್ತೇನೆ ಎಂದು ಹೇಳಿದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಮೆದುಳು ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಉದ್ಯೋಗ ಸೃಷ್ಟಿ ಮಾಡ್ತೀನಿ, 15 ಲಕ್ಷ ಕೊಡ್ತೀನಿ, ಕಪ್ಪು ಹಣ ತರ್ತೀನಿ ಎಂದು ಮಾತಾಡಿದ್ರು. ಏಕೆ ಮಾತಾಡಿದ್ರು?. 5 ವರ್ಷದಲ್ಲಿ ಅವರ ಪ್ರಣಾಳಿಕೆ ಪೂರ್ಣ ಮಾಡಲಿಲ್ಲ. ನಾವು ಮಾಡ್ತಿದ್ದೇವೆ. ನಮಗೆ ಬಡವರ ಬಗ್ಗೆ ಕಾಳಜಿ ಇದೆ ಎಂದು ತಿರುಗೇಟು ಕೊಟ್ಟರು.ಕಾಂಗ್ರೆಸ್ ನಾಯಕರಿಗೆ ಜ್ಞಾನ ಇರಲಿಲ್ವಾ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮಗೆ ಖಂಡಿತ ಜ್ಞಾನ ಇರಲಿಲ್ಲ. ಕುಮಾರಣ್ಣಗೆ ಜ್ಞಾನ ಇತ್ತಲ್ಲಾ.. ಸಾಕು. ಪ್ರಧಾನಿ ತಮ್ಮ ಬಳಿ ಅಲ್ಲದಿದ್ರೂ, ವಿದೇಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನೀವು ಖುಷಿ ಪಡಿ ಎಂದು ಛೇಡಿಸಿದರು.
ಉಪನ್ಯಾಸಕರ ನೇಮಕಾತಿಯಲ್ಲಿ ತಮ್ಮನ್ನು ಪರಿಗಣಿಸುವಂತೆ ಅತಿಥಿ ಉಪನ್ಯಾಸಕರು ಇಂದು ಡಿಸಿಎಂ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದರು. ಅತಿಥಿ ಉಪನ್ಯಾಸಕರ ಮನವಿಗೆ ಡಿಸಿಎಂ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.