ನಿಂತ ಬೆಳೆಗಳಿಗೆ, ಕುಡಿಯುವ ನೀರು ಕಾಯ್ದಿರಿಸಲು ಕಾಲುವೆಗೆ ನೀರು: ಸಚಿವರಾದ ಶಿವರಾಜ್ ತಂಗಡಗಿ

121ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆ

ಹೊಸಪೇಟೆ (ವಿಜಯನಗರ): ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಯೋಜನೆಯ 121ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

 

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಫೆ.23ರಂದು ನಡೆದ ಸಭೆಯಲ್ಲಿ, ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸುವ ಕುರಿತಂತೆ ಸಭೆಯಲ್ಲಿದ್ದ ಸಚಿವರು, ಶಾಸಕರು, ಸಂಸದರು ಹಾಗೂ ಸದಸ್ಯರು ಮತ್ತು ನೀರಾವರಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ನೀರನ್ನು ಒದಗಿಸುವ ಕಾಲಾವಧಿಯ ಬಗ್ಗೆ ನಿರ್ಣಯಿಸಲಾಯಿತು.

ಸಭೆಯ ನಿರ್ಣಯ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಗಣೇಕಲ್ ಜಲಾಶಯ ಹಾಗೂ ಇತರೆ ಕೆರೆ ಕಟ್ಟೆಗಳಿಗೆ ಮಾ.5ರಿಂದ ಮಾ.16ರವರೆಗೆ 1200 ಕ್ಯೂಸೆಕ್ ನಂತೆ ಕುಡಿಯುವ ನೀರು ಹರಿಸಲಾಗುತ್ತದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಬಳ್ಳಾರಿ ಜಿಲ್ಲೆಗೆ ಹಾಗೂ ಇತರೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಾ.10ರಿಂದ ಮಾ.20ರವರೆಗೆ 100 ಕ್ಯೂಸೆಕ್ಸ್ ನಂತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾ.21ರಿಂದ ಮಾ.31ರವರೆಗೆ 100 ಕ್ಯೂಸೆಕ್ ನಂತೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು.

 

ರಾಯ ಬಸವಣ್ಣ ಕಾಲುವೆಯಿಂದ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.260 ಟಿಎಂಸಿ ನೀರಿನಲ್ಲಿ ಮಾ.1ರಿಂದ ಮೇ 30ರವರೆಗೆ 100 ಕ್ಯೂಸೆಕ್ಸ್ ನಂತೆ ಆನ್ ಆಫ್ ನಂತೆ ಕುಡಿಯುವ ನೀರೊಳಗೊಂಡು ಹರಿಸಬಹುದಾಗಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲಾಧಿಕಾರಿಗಳಿಗೆ ಸೂಚನೆ: ಈ ಸಮಯದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತನ್ನು ಪಡೆದು ಕುಡಿಯುವ ನೀರಿನ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಭೆಯಲ್ಲಿ ತಿಳಿಸಲಾಯಿತು.

 

ಕುಡಿಯುವ ನೀರಿಗೆ ಆದ್ಯತೆ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರಿಗೆ ಮಾತ್ರ ಆದ್ಯತೆ ಕೊಟ್ಟು ಜನರಿಗೆ ನೀರು ಒದಗಿಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಡಾ.ಶರಣ್‌ಪ್ರಕಾಶ್ ಪಾಟೀಲ್, ಬಿ.ನಾಗೇಂದ್ರ, ಶಾಸಕರಾದ ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ನಾ.ರಾ.ಭರತ್ ರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top