ಬೆಂಗಳೂರು : ಹಿಂದುಳಿದ ವರ್ಗಗಳ ನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟಿತವಾಗುತ್ತಿರುವ ವಿಶ್ವಕರ್ಮ ಸಮುದಾಯದಿಂದ ಜನವರಿ 28 ರಂದು ದೆಹಲಿಯಲ್ಲಿ ಸಮುದಾಯದ ಕೆನೆಪದರ ಸಭೆ ಆಯೋಜಿಸಿದೆ.
ರಘು ಆಚಾರ್ ಅವರ ಆಶಯದಂತೆ ವಿಶ್ವಕರ್ಮ ಸಮುದಾಯದ ಯುವ ಜನಾಂಗಕ್ಕೆ ಭವ್ಯ ಭವಿಷ್ಯದ ಹಾದಿ ತೋರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಳ ಚಿಂತನ-ಮಂಥನ ನಡೆಸಲು ಆಯೋಜಿಸಲಾಗುತ್ತಿರುವ ಈ ಸಮ್ಮೇಳನದಲ್ಲಿ ದೂರ ಸಂಪರ್ಕ ವಲಯದ ಹರಿಕಾರ ಹಾಗೂ ಚಿಂತಕ ಸ್ಯಾಮ್ ಪಿತ್ರೋಡ, ಖ್ಯಾತ ಚಿತ್ರನಟ ರಾಜ್ ಬಬ್ಬರ್ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ದೇಶದ ಪ್ರತಿ ರಾಜ್ಯದಿಂದಲೂ ಅಧಿಕಾರ ವರ್ಗ, ರಾಜಕಾರಣ, ಉದ್ಯಮ ಹಾಗೂ ಮನರಂಜನಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸಾಧನೆ ಮಾಡಿದ ಗಣ್ಯರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ವಿಶ್ವಕರ್ಮ ಸಮುದಾಯವನ್ನು ರಾಜಕೀಯ ಒಳಗೊಂಡಂತೆ ಎಲ್ಲಾ ರಂಗಗಳಲ್ಲೂ ಮಂಚೂಣಿಗೆ ತರುವ ಮಹತ್ವಾಕಾಂಕ್ಷೆಯನ್ನೂ ಈ ಸಭೆ ಹೊಂದಿದೆ.
ದೆಹಲಿಯ ಚಾಣಕ್ಯಪುರದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಇಡೀ ದಿನ ನಡೆಯುವ ಸಭೆಯಲ್ಲಿ ಸಮುದಾಯದ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಭವಿಷ್ಯ ಕುರಿತು ಚಿಂತನ – ಮಂಥನ ನಡೆಯಲಿದೆ. ವಿಶ್ವಕರ್ಮ ಸಮುದಾಯದ ಸ್ಯಾಮ್ ಪಿತ್ರೋಡ ಅವರು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮತ್ತು ಭವಿಷ್ಯ ಕುರಿತು ಮಾತನಾಡಲಿದ್ದಾರೆ. ರಾಜ್ ಬಬ್ಬರ್ ಅವರು ವಿಶ್ವಕರ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ, ದೇಶಕ್ಕೆ ಸಮುದಾಯದ ಕೊಡುಗೆ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಸಭೆಯಲ್ಲಿ ಸೇರಿದಂತೆ ಉನ್ನತ ಅಧಿಕಾರಿ ವರ್ಗ ಮತ್ತು ನಿವೃತ್ತ ಅಧಿಕಾರಿ ವರ್ಗದ ಪ್ರಮುಖರು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ಪ್ರಮುಖ ಜನಪ್ರತಿನಿಧಿಗಳು, ಉದ್ಯಮ ವಲಯದ ಗಣ್ಯರು, ಕಾರ್ಪೊರೆಟ್ ಸಂಸ್ಥೆಗಳ ದಿಗ್ಗಜರು, ವೈದ್ಯಕೀಯ ಕ್ಷೇತ್ರದ ಪ್ರಮುಖರು ಭಾಗಿಯಾಗಲಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದೇಶದ ಎಲ್ಲ ಭಾಗಗಳಲ್ಲಿ ತಮ್ಮ ಸ್ವಶಕ್ತಿಯಿಂದ ಉನ್ನತವಾದುದದನ್ನು ಸಾಧಿಸಿದ ವಿಶ್ವಕರ್ಮ ಸಮುದಾಯದ ಸಾಧಕರು ಆಗಮಿಸಲಿದ್ದಾರೆ.
ಪ್ರಮುಖ ನಿರ್ಣಯಗಳು, ವಿಶ್ವಕರ್ಮ ಸಮುದಾಯಕ್ಕೆ ಉನ್ನತ ವಿದ್ಯಾಭ್ಯಾಸದಲ್ಲಿ ಮಾರ್ಗದರ್ಶನ ಮಾಡಲು ಏನೇನು ಮಾಡಬೇಕು. ಅದರಲ್ಲೂ ವಿಶೇಷವಾಗಿ ಐಎಎಸ್ ಹಾಗೂ ಐಪಿಎಸ್ ನಂತಹ ಉನ್ನತ ಹುದ್ದೆಗೇರಲು ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ದೆಹಲಿಗೆ ಆಗಮಿಸುವ ಸಮುದಾಯದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ವಸತಿ ಸೌಕರ್ಯ ಕಲ್ಪಿಸುವ ಬೃಹತ್ ವಿಶ್ವಕರ್ಮ ಸಮುದಾಯ ನಿರ್ಮಾಣ ಮಾಡುವ ಬಗ್ಗೆ ಸಮಾವೇಶದಲ್ಲಿ ರೂಪರೇಷೆ ಸಿದ್ದವಾಗಲಿದೆ.
ಜತೆಗೆ, ಸಮುದಾಯವನ್ನು ಮುಂದಿನ 10 ವರ್ಷಗಳಲ್ಲಿ ರಾಜಕೀಯಾಗಿ ಸಬಲೀಕರಣಗೊಳಿಸುವ, ರಾಜಕೀಯ ಅಧಿಕಾರ ಪಡೆಯುವ, ಸಮುದಾಯದ ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸಲು ಕೈಗೊಳ್ಳಬೇಕಾದ ಕಾರ್ಯಯೋಜನಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಲಿದೆ.
ರಘು ಆಚಾರ್ ಅವರ ಮಾರ್ಗದರ್ಶನದಲ್ಲಿ ಇಂಡಿಯನ್ ವಿಶ್ವಕರ್ಮ ಗ್ರೂಪ್ ಆಫ್ ಆಫಿಸರ್ಸ್ ಅಂಡ್ ಬುಸಿನೆಸ್ ಮನ್ ಎಂಬ ಸಂಘಟನೆ” ಅಸ್ಥಿತ್ವಕ್ಕೆ ಬಂದಿದೆ. ಈ ಸಂಘಟನೆ ಆಯೋಜಿಸಿರುವ ಈ ಸಭೆಯಲ್ಲಿ ಈ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಜ್ಞಾನಿ ಜೈಲ್ ಸಿಂಗ್ ಅವರ ಕುಟುಂಬವರ್ಗದವರು ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಆಂಧ್ರಪ್ರದೇಶದ ಅಮುಕ್ತ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಕೇಶವ, ದೆಹಲಿಯ ಮೈಕ್ರೋ ಮ್ಯಾಕ್ಸ್ ಕಂಪೆನಿಯ ಇಡಿ ಸಿಇಒ ರಾಹುಲ್ ಶರ್ಮಾ, ಎಲಿಗೆಮಟ್ ರೆಸಾರ್ಟ್ ಅಂಡ್ ಹೆಲ್ತ್ ಕ್ಲಬ್ ನ ವಿಜಯ್, ಜೆ. ಪಾಂಟುಬಲಾರ್ ಪ್ರೈವೈಟ್ ಲಿಮಿಟೆಡ್ ನ ಎಂ.ಡಿ. ಜಿಗ್ನೇಶ್ ಪಾಂಚಾಲ್, ದೆಹಲಿಯ ಜಾಂಗೀದ್ ಶಿಕ್ಷಣ ಸಂಸ್ಥೆಯ ವಿದ್ಯಾಗಾರ್, ಮಧ್ಯಪ್ರದೇಶದ ಕೈಗಾರಿಕೋದ್ಯಮಿಗಳಾದ ಕೈಲಾಶ್ ಜಾಂಗೀಯೋ, ಹರ್ಯಾಯಣದ ವಿಜಯೇಂದ್ರ ಶರ್ಮಾ, ವಿಕ್ರಮ್ ಪಾಂಚಾಲ್, ಸಚಿನ್ ಪಾಂಚಾಲ್, ಜೈಪುರದ ಶಿವ್ ಕುಲಾಸ್ ಹೋಟೆಲ್ಸ್ ನ ರಾಜ್ ಬಿಹಾರಿ ಜಾಂಗೀದ್, ಪಿಠೋಪಿಕರಣದ ಕೈಗಾರಿಕೋದ್ಯಮಿ ರಾಮ್ ಫಾಲ್ ಜಾಂಗೀದ್, ಚೆನ್ನೈನ ಕೈಗಾರಿಕೋದ್ಯಮಿ ಪರಂಧಾಮನ್, ಚೆನ್ನೈನ ಎಂ.ಡಿ. ಆಸ್ಪತ್ರೆಯ ಡಾ. ಕನಗರಾಜನ್, ಅಲಹಾಬಾದ್ ನ ವೈದ್ಯರಾದ ಡಾ. ಬಿಂದು, ದೆಹಲಿಯ ಚಿನ್ನ ಮತ್ತು ವಜ್ರದ ವ್ಯಾಪಾರಿ ಮಹೇಶ್ ಸೋನಿ, ಮುಂಬೈನ ಪೀಠೋಪಕರಣದ ವ್ಯಾಪಾರಿ ಬಾವರ್ ಲಾಲ್ ಖುಲರಿಯಾ, ರಾಜಸ್ಥಾನದ ಕೈಗಾರಿಕೋದ್ಯಮಿ ಗಿರಿಧರಿ ಜಾಂಗದ್, ಗುರ್ ಗಾವ್ ನ ಮೆ. ಮಡೋಣ ಗ್ರೂಪ್ ನರೇಶ್ ತ್ರಿಚನ್, ತಮಿಳುನಾಡಿನ ಚಿನ್ನ ಮತ್ತು ವಜ್ರದ ವ್ಯಾಪಾರಿ ಭಾಸ್ಕರನ್, ದೆಹಲಿಯ ಸಿಎಎಸ್ ಆರ್ ಶೋರೂಂನ ಸುರೇಂದರ್ ಸಲ್ಮಾ, ದೆಹಲಿಯ ಸಾಹಿಲ್ ಆಟೋ ಮೊಬೈಲ್ಸ್ ನ ಸೋನಾಪೇಟ್ ಅವರು ಭಾಗವಹಿಸಲಿದ್ದಾರೆ.