ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ವಂಚಿತ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

ಸೆಪ್ಟಂಬರ್ 11ರಿಂದ 16ರವರೆಗೆ ಎರಡನೇ ಹಂತದ ಪರಿಣಾಮಕಾರಿ ಇಂಧ್ರಧನುಷ್ ಲಸಿಕಾ ಅಭಿಯಾನ ಆರಂಭ

ಬಳ್ಳಾರಿ: ಜಿಲ್ಲೆಯಲ್ಲಿ ಸೆಪ್ಟಂಬರ್ 11ರಿಂದ 16ರವರೆಗೆ ಆರು ದಿನಗಳವರೆಗೆ ಎರಡನೇ ಹಂತದ ಪರಿಣಾಮಕಾರಿ ಇಂಧ್ರಧನುಷ್ ಲಸಿಕಾ ಅಭಿಯಾನ ಆರಂಭವಾಗುತ್ತಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸದೇ ಬಿಟ್ಟು ಹೋದ, ತಪ್ಪಿಹೋದ ಹಾಗೂ ಲಸಿಕೆ ವಂಚಿತ ಮಕ್ಕಳಿಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನದಡಿ ಪೋಷಕರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು ಅವರು ಮನವಿ ಮಾಡಿದ್ದಾರೆ.

 

          ಸಾಮಾನ್ಯವಾಗಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಗ್ರಾಮದ ವಾರ್ಡ್‍ಗಳಲ್ಲಿ ಪ್ರತಿ ಗುರುವಾರ ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಪ್ರತಿದಿನ ಮಕ್ಕಳಿಗೆ ಬಾಲ್ಯದಲ್ಲಿ ಕಂಡು ಬರುವ 12 ಮಾರಕ ರೋಗಗಳ ವಿರುದ್ಧ ನಿರಂತರವಾಗಿ ಲಸಿಕೆಗಳನ್ನು ಹಾಕಲಾಗುತ್ತಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಿದೆ ಇರುವ ಸನ್ನಿವೇಶಗಳು ಉಂಟಾಗಿ ಅಂತಹ ಮಕ್ಕಳು ಮಾರಕ ರೋಗಗಳಿಗೆ ತುತ್ತಾಬಾರದು ಎಂಬ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಇಂದ್ರಧನುಷ್ ಲಸಿಕಾ ಅಭಿಯಾನವನ್ನು 2014ರಲ್ಲಿ ಆರಂಭಿಸಿತು ಎಂದು ತಿಳಿಸಿದ್ದಾರೆ.

ಪ್ರಸ್ತುತ ಐದನೇ ಬಾರಿ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಇಡಿ ರಾಷ್ಟ್ರದಾದ್ಯಂತ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಲಸಿಕೆ ವಂಚಿತ, ಲಸಿಕೆ ಬಿಟ್ಟು ಹೋದ ಅಥವಾ ಲಸಿಕೆ ತಪ್ಪಿದ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಟಿಡಿ ಲಸಿಕೆಯನ್ನು ಸಹ ಹಾಕಲಾಗುವುದು. ದಯವಿಟ್ಟು ಸಾರ್ವಜನಿಕರು ತಮ್ಮ ಮಕ್ಕಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗದಿಪಡಿಸಿದ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಲಸಿಕೆಯನ್ನು ಹಾಕಿಸಿಕೊಳ್ಳಲು ಡಿಹೆಚ್‍ಒ ಅವರು ಮನವಿ ಮಾಡಿದ್ದಾರೆ.

          ಪ್ರಸ್ತುತ ಸೆಪ್ಟೆಂಬರ್ 11 ರಿಂದ 16 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಲಸಿಕೆ ಹಾಕುವ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಎರಡು ವರ್ಷದೊಳಗಿನ 6541 ಮಕ್ಕಳು, ಎರಡರಿಂದ ಐದು ವರ್ಷದೊಳಗಿನ 128 ಮಕ್ಕಳು ಹಾಗೂ 1506 ಗರ್ಭಿಣಿಯರನ್ನು ಗುರ್ತಿಸಲಾಗಿದೆ. ಇದಕ್ಕಾಗಿ ಆರು ದಿನಗಳಲ್ಲಿ ಒಟ್ಟು 374 ಲಸಿಕಾ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

          ಕೊಳಚೆ ಪ್ರದೇಶ, ಕಟ್ಟಡ ಕಾಮಗಾರಿ ಪ್ರದೇಶ, ಇಟ್ಟಿಗೆ ಬಟ್ಟಿಗಳು, ಟೆಂಟ್ ಹಾಕಿಕೊಂಡು ತಾತ್ಕಾಲಿಕ ವಲಸೆ ಬಂದಿರುವ ಹಾಗೂ ಇತರೆ ವಲಸೆ ಪ್ರದೇಶಗಳು ಸೇರಿದಂತೆ 101 ಸ್ಥಳಗಳನ್ನು ಗುರ್ತಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯಯೋಜನೆ ಕುರಿತು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ, ಮಕ್ಕಳ ತಜ್ಞ ವೈದ್ಯರ ಸಂಘ, ವಿಮ್ಸ್ ಮಕ್ಕಳ ತಜ್ಞರೊಂದಿಗೆ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆಯು ನಡೆಸಲಾಗಿದೆ  ಹಾಗೂ ಈ ಅಭಿಯಾನದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

12 ಮಾರಕ ರೋಗಗಳ ವಿರುದ್ದ ನೀಡುವ ಲಸಿಕೆ ಈ ರೀತಿ ಇವೆ:

          ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಟ ವೈರಸ್, ಹೆಚ್ ಇನ್‍ಫ್ಲ್ಯುಯೆಂಜಾ, ಕಾಮಾಲೆ ಗಾಗಿ ಪೆಂಟಾವೈಲೆಂಟ್ ಲಸಿಕೆ, ರೋಟಾವೈರಸ್ ಅತಿಸಾರಬೇಧಿಗೆ ನಿಮೋಕಾಕಲ್ ಲಸಿಕೆ,  ಮೆದುಳು ಜ್ವರ ರೋಗಕ್ಕೆ ಜಾಪನೀಸ್ ಎನ್ಸ್‍ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ, ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು.

 

          ಕೆಲವು  ರೋಗಗಳಿಗೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ  ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು.

ಸಾರ್ವಜನಿಕರ ಜಾಗೃತಿಗಾಗಿ ಈಗಾಗಲೆ ಹಳ್ಳಿಗಳಲ್ಲಿ, ನಗರದ  ಲಸಿಕೆಗೆ ಆಯ್ಕೆ ಮಾಡಲಾದ ಪ್ರದೇಶಗಳಲ್ಲಿ ಮನೆ ಭೇಟಿ ನೀಡಿ ಜಾಗೃತಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ, ದೇವಸ್ಥಾನಗಳ ಮೈಕ್ ಮೂಲಕ, ಗ್ರಾಮ ಪಂಚಾಯತ್, ನಗರ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಮೈಕಿಂಗ್, ಡಂಗುರ ಮೂಲಕ, ಕಲಾ ತಂಡದ ಮೂಲಕ ಜಾಗೃತಿ, ಬ್ಯಾನರ್ ಹೊರ್ಡಿಂಗ್ಸ್  ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ.

 

          ದಯವಿಟ್ಟು ಸಾರ್ವಜನಿಕರು ತಮ್ಮ ಮನೆಗಳ ಹತ್ತಿರ ಲಸಿಕೆ ಹಾಕುವ ಸ್ಥಳಗಳಲ್ಲಿ ತಪ್ಪದೆ ತೆರಳಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು ಅವರು ಮನವಿ ಮಾಡಿದ್ದಾರೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top