ಶಿಶು ಆರೈಕೆಗೆ ವಿಶೇಷ ಕಾಳಜಿ ವಹಿಸಿ: ಶಶಿಧರ್ ಕೋಸಂಬೆ

ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ

ಬಳ್ಳಾರಿ: ಆಸ್ಪತ್ರೆಗಳಲ್ಲಿ ಜನಿಸುವಂತಹ ನವಜಾತ ಶಿಶುಗಳ ಹಾಗೂ ಇತರೆ ನೂನ್ಯತೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುವ ಶಿಶುಗಳ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

          ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್‍ನ  ನಜೀರ್‍ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಭಾಗೀದಾರರೊಂದಿಗೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.

 

          ಹೆರಿಗೆಯಾದ ಸಂದರ್ಭದಲ್ಲಿ ತಾಯಿಗೆ ಗುಣಮಟ್ಟ ಪೌಷ್ಟಿಕ ಆಹಾರ ನೀಡಬೇಕು ಹಾಗೂ ನವಜಾತ ಶಿಶುವಿನ ತೂಕ ಮತ್ತು ಆರೋಗ್ಯವನ್ನು ನೋಡಿಕೊಳ್ಳಬೇಕು. ಬಾಣಂತಿಯರಿಗೆ ಅಗತ್ಯ ಶೌಚಾಲಯ ವ್ಯವಸ್ಥೆ ಮತ್ತು ಬಿಸಿ ನೀರಿನ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ನವಜಾತ ಶಿಶುವಿನ ತುರ್ತು ಚಿಕಿತ್ಸಾ ಘಟಕ, ಹೆರಿಗೆ ಘಟಕಗಳ ಸುಧಾರಣೆ, ತಾಯಿ ಮಗು ಆರೋಗ್ಯಕ್ಕೆ ವಿಶೇಷ ಗಮನ ನೀಡುವ ಮೂಲಕ ತಾಯಿ- ಮಗು ಆರೈಕೆಗೆ ವಿಶೇಷ ಕಾಳಜಿ ನೀಡಬೇಕು. ಅಪೌಷ್ಟಿಕ ನಿವಾರಣಾ ಪುನಃಶ್ಚೇತನ ಘಟಕಗಳ ವ್ಯವಸ್ಥೆ ಸುಧಾರಿಸಬೇಕು. ಅವಶ್ಯಕ ಔಷಧ ದಾಸ್ತಾನು ಸಂಗ್ರಹಣೆ ಇಟ್ಟುಕೊಳ್ಳಬೇಕು. ಹೊರಗಡೆ ಖರೀದಿಸಲು ಸೂಚಿಸಬಾರದು ಎಂದರು.

          ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಹೆಚ್ಚಳವಾಗಬೇಕು. ಹಾಜರಾತಿ ನಿರ್ವಹಣೆಯನ್ನು ಸಹ ಮಾಡುವಂತೆ ತಿಳಿಸಿದ ಅವರು, ಗುಣಾತ್ಮಕ ಶಿಕ್ಷಣ, ಬಿಸಿ ಊಟ ಯೋಜನೆಯಡಿ ಪೌಷ್ಟಿಕ ಆಹಾರ ಪೂರೈಕೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

          ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳ ವ್ಯವಸ್ಥೆಗಳನ್ನು ಸುಧಾರಿಸಬೇಕು. ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಪೌಷ್ಟಿಕ ಆಹಾರ ವಿತರಣೆಗೆ ಹಾಗೂ ಮಕ್ಕಳ ಉತ್ತಮ ಆರೋಗ್ಯಕ್ಕೆ ವಿಶೇಷ ಗಮನ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

          ಸರ್ಕಾರ ಮಕ್ಕಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದು, ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಆದ್ಯತೆ ಮೇಲೆ ಒದಗಿಸಬೇಕು. ವಿಶೇಷವಾಗಿ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಪೌಷ್ಟಿಕ ಆಹಾರ, ಗುಣಮಟ್ಟದ ದವಸ ಧಾನ್ಯ, ಹಾಜರಾತಿ ಸಮರ್ಪಕ ನಿರ್ವಹಣೆ, ಮಕ್ಕಳ ಆರೋಗ್ಯ ನಿರ್ವಹಣೆಗೆ ವಿಶೇಷ ಕಾಳಜಿ, ಮೆನು ಚಾರ್ಟ್ ಅನ್ವಯ ಉಪಹಾರ  ವಿತರಣೆ, ಪರಿಸರ ಸುಚಿತ್ವ, ದೂರು ಪೆಟ್ಟಿಗೆಗಳ ಸ್ಥಾಪನೆ, ಪಾಲಕರ ಮತ್ತು ಮಕ್ಕಳ ಸಮಕ್ಷಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕು ಎಂದರು.

ಮಕ್ಕಳ ಅನುಕೂಲಕ್ಕಾಗಿ 1098 ಹಾಗೂ 112 ಸಹಾಯವಾಣಿಗಳ ಸೂಕ್ತ ಮಾಹಿತಿ ಮತ್ತು ಅರಿವು ಮೂಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಆಯಾ ವಸತಿ ಶಾಲೆಗಳ ಹಾಗೂ ಶಾಲೆಗಳ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ, ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಿಕೊಂಡು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಾಲಾ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಹಕ್ಕುಗಳ ಕ್ಲಬ್ ರಚಿಸಬೇಕು. ಆಪ್ತ ಸಮಾಲೋಚನೆಗೆ ಶಿಕ್ಷಕರನ್ನು ನೇಮಿಸಬೇಕು, ಸಂಬಂಧಪಟ್ಟ ಅಧಿಕಾರಿಗಳು ನಿರಂತರ ಭೇಟಿ ನೀಡಿ ಎಲ್ಲ ಸೌಲಭ್ಯಗಳನ್ನು ಆದ್ಯತೆ ಮೇಲೆ ಒದಗಿಸುವಂತೆ ಸೂಚನೆ ನೀಡಿದರು.

          ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಹಾಗೂ ಬಾಲ್ಯ ವಿವಾಹ ಪದ್ಧತಿಗಳನ್ನು ಸಂಪೂರ್ಣ ತೊಡೆದು ಹಾಕಲು ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಾರ್ಮಿಕ ಇಲಾಖೆ  ಅಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರ, ಪೆÇಲೀಸ್ ಇಲಾಖೆ, ಅಬಕಾರಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ  ಸೇರಿದಂತೆ ಸಂಬಂಧ ಪಟ್ಟ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮಿತಿ ರಚಿಸಿಕೊಂಡು ಜಿಲ್ಲೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್, ಡಾಬಾ, ವೈನ್ ಶಾಪ್, ವಿವಿಧ ಉದ್ದಿಮೆಗಳಲ್ಲಿ ತೊಡಗಿರುವ ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಬೇಕು, ಅಂತಹ ಸ್ಥಳದಲ್ಲಿ ಮಕ್ಕಳು ಕಂಡುಬಂದಲ್ಲಿ  ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಬೇಕು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಿಳಿಸಿದರು.

          ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ತಕ್ಷಣ ಸಂಬಂದಿಸಿದ ಇಲಾಖೆಗಳು  ಸ್ಪಂದಿಸಬೇಕು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಸ್ಪಂದಿಸಬೇಕು ಎಂದರು.

          ನಗರದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳಿಗೆ ನಿಯಮದ ಪ್ರಕಾರ ಪೌಷ್ಟಿಕ ಆಹಾರ ಒದಗಿಸುವಂತೆ ಸೂಚಿಸಿದರು.

 

          ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಮಕೃಷ್ಣ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top