ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಲೂಟಿ, ಆದೇಶ ರದ್ದುಪಡಿಸಿ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ

ಪಶುಗಳ ಚಿಕಿತ್ಸೆಗೆ ಬೆಂಗಳೂರಿನಿಂದ ಹೊರಗಿನ ಕೆಂಗೇರಿಗೆ ಹೋಗಬೇಕೆ?

ಬೆಂಗಳೂರು : ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಿದೆ. ಈ ಆದೇಶವನ್ನು ಕೂಡಲೇ ರದ್ದು ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ಅಲ್ಪಸಂಖ್ಯಾತರನ್ನು ಓಲೈಸುವ ನಿರ್ಧಾರಗಳನ್ನೇ ಮಾಡುತ್ತಿದೆ. ಮತಕ್ಕಾಗಿ ಸರ್ಕಾರದ ಆಸ್ತಿಗಳನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ. ಕುವೆಂಪು ವಾಣಿ ತೆಗೆದುಹಾಕುವ, ನಾಡಗೀತೆ ಕಡ್ಡಾಯದಿಂದ ವಿನಾಯಿತಿ ನೀಡುವ, ಪಾಕಿಸ್ತಾನಕ್ಕೆ ಜೈಕಾರ ಹಾಕಲು ಅವಕಾಶ ಮಾಡುವಂತಹ ನೀಚ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

 

ಈಗ ಸುಮಾರು 500 ಕೋಟಿ ರೂ. ಬೆಲೆಬಾಳುವ, ಮೈಸೂರು ರಸ್ತೆಯ ಬಳಿಯಲ್ಲಿರುವ, ಚಾಮರಾಜಪೇಟೆಯ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ವಕ್ಫ್ ಮಂಡಳಿಯವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಲೂಟಿ ಹೊಡೆದಿದ್ದು, ಅದೇ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಬಹುದಿತ್ತು. ಅದನ್ನು ಬಿಟ್ಟು ಅಲ್ಪಸಂಖ್ಯಾತರನ್ನು ಓಲೈಸಲು ಪಶುಸಂಗೋಪನೆ ಇಲಾಖೆಯ ಜಾಗವನ್ನು ಲೂಟಿ ಮಾಡಬಾರದು‌ ಎಂದರು.

ಈಗಾಗಲೇ ದೇವಸ್ಥಾನಗಳ ಹುಂಡಿಯಿಂದ ಹಣ ತೆಗೆದಿದ್ದು, ಈಗ ಪಶುಸಂಗೋಪನೆ ಇಲಾಖೆಗೂ ಕನ್ನ ಹಾಕಲಾಗಿದೆ. ಹೀಗೆ ಮಾಡಿದರೆ ಪಶುಗಳ ಆರೈಕೆ, ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಪಶುಗಳ ಚಿಕಿತ್ಸೆಗೆ ದೂರದ ಕೆಂಗೇರಿಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು‌.

ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವುದರಿಂದ ಜಮೀನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗಾದರೆ ಮುಜರಾಯಿ ಇಲಾಖೆಯ ಜಾಗವನ್ನೂ ಬರೆದುಕೊಡುತ್ತಾರೆಯೇ? ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಸರ್ಕಾರ ಪದೇ ಪದೆ ಎಡವಟ್ಟು ಮಾಡುತ್ತಿದೆ. ಈ ಕುರಿತು ರಾಜ್ಯದ ಜನರು ಎಚ್ಚರದಿಂದಿರಬೇಕು. ಜನರ ಆಸ್ತಿಯನ್ನು ಕೂಡ ಅಲ್ಪಸಂಖ್ಯಾತ ಇಲಾಖೆಗೆ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಯಾರೇ ಭೂಮಿ ದಾನ ಮಾಡಿದರೂ ಅದು ಸರ್ಕಾರದ ಆಸ್ತಿಯಾಗಿರುತ್ತದೆ‌. ಅದನ್ನು ಹೀಗೆ ಬೇರೆ ಇಲಾಖೆಗೆ ನೀಡಬಾರದು. ಬೇರೆ ಖಾಲಿ ಜಮೀನುಗಳನ್ನು ನೀಡಲು ನಮ್ಮ ಆಕ್ಷೇಪ ಇಲ್ಲ. ಆದರೆ ಈಗಾಗಲೇ ಬಳಕೆಯಲ್ಲಿರುವ ಪಶುಸಂಗೋಪನೆ ಇಲಾಖೆಯ ಜಮೀನನ್ನು ನೀಡಬಾರದು ಎಂದರು‌.

 

ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಘಟನೆಯಲ್ಲಿ ಸರ್ಕಾರವೇ ಶಾಮೀಲಾಗಿದೆ. ಅದಕ್ಕಾಗಿಯೇ ಯಾರನ್ನೂ ಬಂಧಿಸಿಲ್ಲ ಎಂದು ದೂರಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top