ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಮಿಂಚು, ಬಿರುಗಾಳಿ ಸಹಿತ ಮಳೆ

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಮಿಂಚು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋ ಮೀಟರ್ ತಲುಪುವ ಸಾಧ್ಯತೆ ಇದ್ದು, ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ.

ಕೊಡಗು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ರಾಯಚೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಭಾವ್ಯ ಮಳೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧತೆಗಳನ್ನು ಆರಂಭಿಸಿದೆ.

ನಿನ್ನೆ ನಡೆದ ಸಭೆಯಲ್ಲಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮುಂಗಾರು ಹಂಗಾಮಿನ ಸವಾಲುಗಳನ್ನು ನಿಭಾಯಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ-ಮೆಸ್ಕಾಂ ಅಡಿಯಲ್ಲಿನ ವಿದ್ಯುತ್ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಮಳೆ ಸಮಯದಲ್ಲಿ ವಿದ್ಯುತ್ ಸರಬರಾಜಿನ ವೈಫಲ್ಯ ಮಾತ್ರವಲ್ಲದೆ ಲೈವ್ ಕೇಬಲ್ಗಳು, ಧರೆಗುರುಳುವ ವಿದ್ಯುತ್ ಕಂಬಗಳು ಆತಂಕಕ್ಕೆ ಕಾರಣವಾಗಿವೆ. ಇದರಿಂದ ಪ್ರಾಣ ಮತ್ತು ಆಸ್ತಿಪಾಸ್ತಿಗೆ ಗಂಭೀರ ಹಾನಿಯಾಗುವುದರಿಂದ ಮೆಸ್ಕಾಂ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಮಳೆಗಾಲದಲ್ಲಿ ಡೆಂಘಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಚಾರ್ಮಡಿ ಘಾಟ್ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಪ್ರದೇಶಗಳನ್ನು ಪಟ್ಟಿ ಮಾಡಬೇಕು. ಘಾಟ್ ಪ್ರದೇಶಗಳಲ್ಲಿನ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು, ಮಳೆಯಿಂದ ಉಂಟಾಗುವ ನೆರೆ, ಸಿಡಿಲು ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪಗಳಲ್ಲಿ ಜೀವಹಾನಿ ಹಾಗೂ ಹೆಚ್ಚಿನ ಆಸ್ತಿ-ಪಾಸ್ತಿ ಹಾನಿ ಉಂಟಾಗದಂತೆ ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಪೂರ್ವ ಹಾಗೂ ಮುಂಗಾರಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಸೇರಿದಂತೆ ಮತ್ತಿತರ ಪರಿಸ್ಥಿತಿಗಳನ್ನು ಎದುರಿಸಲು ಎಲ್ಲಾ ಇಲಾಖಾ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚಿಸಿದ್ದಾರೆ.

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಇಟ್ಟುಕೊಂಡಿರಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

 

ಭೂ ಕುಸಿತವಾಗುವಂತಹ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಭೂ ಕುಸಿತ ಆಗದಂತೆ ಎಚ್ಚರವಹಿಸಬೇಕು. ಆಕಸ್ಮಿಕವಾಗಿ ಭೂ ಕುಸಿತ ಸಂಭವಿಸುವ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top