ಪ್ರಜ್ವಲ್ ರೇವಣ್ಣ ಪ್ರಕರಣದ ಆಘಾತದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ವಲ್ಪ ಮಟ್ಟಿಗೆ ಹೊರ ಬರುತ್ತಿದ್ದಾರೆ

ಬೆಂಗಳೂರು:  ಪ್ರಜ್ವಲ್ ರೇವಣ್ಣ ಪ್ರಕರಣದ ಆಘಾತದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ವಲ್ಪ ಮಟ್ಟಿಗೆ ಹೊರ ಬರುತ್ತಿದ್ದಾರೆಮತ್ತೆ ಸಕ್ರಿಯ ರಾಜಕೀಯ ಚಟುವಟಿಕೆಗಳಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ.  ತಮ್ಮ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ದೊರೆತಿದ್ದು, ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರ ಬಂದ ನಂತರ ಗೌಡರು ಗೆಲುವಾಗಿದ್ದಾರೆ.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡರು, ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ವಿವೇಕಾನಂದ ಅವರಿಗೆ  ಬಿ ಫಾರಂ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಅವರನ್ನು ಎಲ್ಲರೂ ಒಪ್ಪಿದ್ದಾರೆ. ನಾಳೆ ಮಧ್ಯಾಹ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಎಚ್.ಡಿ.ರೇವಣ್ಣ ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಸ್ಐಟಿ ಮೂಲಕ ಬಂಧನ ಮಾಡಿದ್ದು ಸರಿಯಲ್ಲ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಸಂಸದ ಪ್ರಜ್ವಲ್‌ ರೇವಣ್ಣ ಯಾರ ಸಂಪರ್ಕದಲ್ಲೂ ಇಲ್ಲ. ಆರೋಪ ಕೇಳಿ ಬಂದ ಕೂಡಲೇ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರು ಎಲ್ಲಿಗೆ ಹೋದರು? ಏಕೆ ಹೋದರು? ಯಾವಾಗ ಬರುತ್ತಾರೆ? ಎಂಬ ಮಾಹಿತಿ ಯಾರಿಗೂ ಇಲ್ಲ. ಅವರ ಮನೆಯವರಿಗೂ ಸರಿಯಾದ ಮಾಹಿತಿ ಇಲ್ಲ ಎಂದರು.

ಅವರನ್ನು ಪತ್ತೆ ಹಚ್ಚಲು ಸರ್ಕಾರ ಬ್ಲೂ ಕಾರ್ನರ್‌ ನೋಟೀಸ್‌‍ಕೊಟ್ಟಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆಯಾದರೂ ಅವರು ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ರೇವಣ್ಣ ಅವರು ಬಂಧನವಾಗಿದ್ದಕ್ಕೆ ನೋವನ್ನು ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡದಿದ್ದರೂ ರೇವಣ್ಣ ಅವರ ಬಂಧನವಾಗಿತ್ತು. ಈ ವಿಚಾರ ದೇವೇಗೌಡರಿಗೆ ಬಹಳ ನೋವುಂಟು ಮಾಡಿದೆ ಎಂದರು. ಸರ್ಕಾರ ಪ್ರಜ್ವಲ್‌ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಎಸ್‌‍ಐಟಿ ರಚನೆ ಮಾಡಿದೆ. ಎಸ್‌‍ಐಟಿ ಆ ಬಗ್ಗೆ ತನಿಖೆ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರೇವಣ್ಣ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವುದು ಸಹಜ. ರಾಜಕೀಯವಾಗಿ ಒಬ್ಬರಿಗೊಬ್ಬರು ಮಾತನಾಡುವಾಗ ಟೀಕೆ, ಟಿಪ್ಪಣಿಗಳು ಸಹಜ ಎಂದರು.

ರೇವಣ್ಣ ಅವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವಂತಾಯಿತಲ್ಲ ಎಂದು ಅವರ ಮನಸ್ಸಿನಲ್ಲೂ ನೋವಿರಬಹುದು. ಈ ವಿಚಾರ ರಾಜ್ಯದ ಜನತೆಗೂ, ರಾಜಕಾರಣಿಗಳಿಗೂ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೂ ಗೊತ್ತಿದೆ. ಎಸ್‌‍ಐಟಿ ಮೂಲಕ ರೇವಣ್ಣ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ ಎಂದರು.

 

ಜೈಲಿನಲ್ಲಿದ್ದಾಗ ರೇವಣ್ಣ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ದೇವರು ಯಾವ ದಾರಿ ತೋರುತ್ತಾರೋ ನೋಡೋಣ ಎಂದು ಹೇಳಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡರು ತಿಳಿಸಿದರು.  

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top