ಅಧಿವೇಶನದ ದಿನಾಂಕ ನಿಗದಿ ಹಿನ್ನೆಲೆ ವಿಧೇಯಕ ವಾಪಸ್
ಕಾಂತರಾಜು ವರದಿ: ಎಚ್ಡಿಕೆ ಹೇಳಿಕೆಗೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು
ಬೆಂಗಳೂರು : ವ್ಯಾಪಾರ ಉದ್ದಿಮೆ, ಶಿಕ್ಷಣ ಸಂಸ್ಥೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಶೇ.60ಷ್ಟು ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ರಾಜ್ಯಪಾಲರಿಂದ ವಾಪಸ್ ಬಂದಿರುವುದಕ್ಕೆ ಯಾವುದೇ ರಾಜಕೀಯ ಕಾರಣ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಧೇಯಕಕ್ಕೆ ಯಾರಿಂದಲೂ ವಿರೋಧವಿಲ್ಲ. ಬಜೆಟ್ ಅಧಿವೇಶನದ ದಿನಾಂಕ ನಿಗದಿಯಾಗಿರುವುದರಿಂದ ಎರಡೂ ಸದನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವಂತೆ ರಾಜ್ಯಪಾಲರು ವಿಧೇಯಕವನ್ನು ವಾಪಸ್ ಕಳುಹಿಸಿದ್ದಾರೆ. ನಾವು ಅಧಿವೇಶನದ ದಿನಾಂಕ ನಿಗದಿ ಮುನ್ನವೇ ಜ.5ರಂದೇ ರಾಜ್ಯಪಾಲರಿಗೆ ವಿಧೇಯಕ ಕಳುಹಿಸಿದ್ದೆವು. ಆದರೆ ರಾಜ್ಯಪಾಲರ ಅನಾರೋಗ್ಯ ಹಾಗೂ ಅವರು ಊರಲ್ಲಿ ಇಲ್ಲದ ಕಾರಣ ಸಹಿ ಹಾಕುವುದು ಅವರಿಂದ ತಡ ಆಗಿದೆ. ಇದೀಗ ಅಧಿವೇಶನದ ದಿನಾಂಕ ನಿಗದಿಯಾಗಿದೆ. ಎರಡು ಸದನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು.
ರಾಜ್ಯದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜ್ಯಪಾಲರು ಬೇರೆ ರೀತಿ ನಡೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ತಾಂತ್ರಿಕ ಕಾರಣದಿಂದ ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಸರಿ ಶಾಲು ಯಾರಪ್ಪನದ್ದು ಅಲ್ಲ. ಆಂಜನೇಯ ಇವರ ಸ್ವಂತದ್ದು ಎಂದು ಬಿಜೆಪಿಗರು ಭಾವಿಸಿದ್ದಾರೆ.
ರಾಮನ ದೇವಸ್ಥಾನ ಕಟ್ಟಿ ಪ್ರಚಾರ ತೆಗೆದುಕೊಳ್ಳುವುದಲ್ಲ. ನಾವು ರಾಮ ಹಾಗೂ ಆಂಜನೇಯನ ಭಕ್ತರೇ. ವರ್ಷಕ್ಕೊಮ್ಮೆ ನಾನು ಮಾಲೆ ಹಾಕುತ್ತೇನೆ. ಇದೆಲ್ಲವೂ ಇವರದ್ದಲ್ಲ. ನಾನು ಕೂಡ ಹಿಂದು. ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ ? ಇದೆಲ್ಲ ಬಹಳ ದಿನ ನಡೆಯುವುದಿಲ್ಲ. ಜನ ಬುದ್ಧಿವಂತರಿದ್ದು, ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಛೇಡಿಸಿದರು.
ಅನಗತ್ಯವಾಗಿ ಮಂಡ್ಯ ಜಿಲ್ಲೆ ಕೆರೆಗೋಡುದಲ್ಲಿ ವಿಪಕ್ಷ ನಾಯಕರು ಬೆಂಕಿ ಹಚ್ಚಿದ್ದಾರೆ. ಧ್ವಜದ ಸಲುವಾಗಿ ಬಿಜೆಪಿಗರ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗೆ ಹಸಿವಿನ ಬಗ್ಗೆ ಅರಿವಿಲ್ಲ. ಸಿ.ಟಿ.ರವಿ, ಬಡವರ ಪರ ಮಾತನಾಡಲಿ. ಕೇಂದ್ರದ ಯೋಜನೆಗಳ ಬಗ್ಗೆ ಮಾತನಾಡಲಿ. ಧ್ವಜ, ದರ್ಗಾ, ಆಂಜನೇಯ, ಧರ್ಮದ ಬಗ್ಗೆ ಮಾತನಾಡುತ್ತಾರೆ. ಬೆಂಕಿ ಹಚ್ಚುವುದು, ಜನರ ಮನಸ್ಸು ಕೆಡಿಸುವುದೇ ಆ ಪಕ್ಷದ ಕಾಯಕವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಐದು ಐತಿಹಾಸಿಕ ಗ್ಯಾರಂಟಿಗಳನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದ್ದಾರೆ. ನಾವು ಜನರ ಜೀವನದ ಜತೆ ನಡೆಯುತ್ತಿದ್ದರೆ, ಬಿಜೆಪಿಗರು ಜನರ ಭಾವನೆಗಳ ಜತೆ ಹೋಗುತ್ತಿದ್ದಾರೆ. ಗ್ಯಾರಂಟಿ ಗಳ ಬಗ್ಗೆ ಟೀಕೆ ಮಾಡಿದ ಪ್ರಧಾನ ಮಂತ್ರಿ ಅವರು ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಗ್ಯಾರಂಟಿ ಮಹತ್ವ ಇದೀಗ ಬಿಜೆಪಿ ಅವರಿಗೆ ತಿಳಿದಿದೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡುವುದು ಇವರಿಗೆ ಬೇಡ. ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಕೇಂದ್ರದ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.
ಚುನಾವಣೆ ಸಮಯದಲ್ಲಿ ಜನರ ಮನಸ್ಸು ಕೆಡಿಸುವ ಕೆಲಸ ಬಿಜೆಪಿಯದ್ದು. ಜನರ ಮನಸ್ಸು ಗೆಲ್ಲುವುದು ಕಾಂಗ್ರೆಸ್ ನದ್ದು ಎಂದರು.
ಎಚ್ಡಿಕೆಗೆ ಇರಲಿಲ್ವಾ ತಾಕತ್ತು:
ಕಾಂತರಾಜು ವರದಿ ಸ್ವೀಕಾರ ಮಾಡಲು ಮುಖ್ಯಮಂತ್ರಿಗಳಿಗೆ ತಾಕತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಸಚಿವ ಶಿವರಾಜ್ ತಂಗಡಗಿ, ಇವರು ಮುಖ್ಯಮಂತ್ರಿ ಆಗಿದ್ದ ವೇಳೆ ವರದಿ ಸ್ವೀಕರಿಸಲು ತಾಕತ್ತು ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದ ಕಾರಣಕ್ಕೆ ಸಮೀಕ್ಷೆ ಮಾಡಿಸಿದ್ದು, ತಾಕತ್ತು ಇದ್ದಿದ್ದಕ್ಕೆ 168 ಕೋಟಿ ಹಣ ಕೊಟ್ಟಿದ್ದು, ತಾಕತ್ತು ಇರುವುದಕ್ಕೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡುತ್ತೇನೆ ಎಂದು ಹೇಳಿದ್ದರು. ಇದು ನಮ್ಮ ಸಿದ್ದರಾಮಯ್ಯ ಅವರ ನಿಜವಾದ ತಾಕತ್ತು ಎಂದು ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಅವರು ಮೊದಲು ಚೆನ್ನಾಗಿ ಇದ್ದರು. ಬಿಜೆಪಿ ಜತೆ ಸೇರಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜಕಾರಣಕ್ಕಾಗಿ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದರು.