ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಹಲವು ಪತ್ರಕರ್ತರ ಸಂಘಗಳಿವೆ. ಯಾವುದೇ ಕ್ಷೇತ್ರದಲ್ಲಿ ಬಣ ರಾಜಕೀಯ, ಗುಂಪುಗಾರಿಕೆ ಸಹಜ. ಆದರೆ ಜಿಲ್ಲೆಯ ಪತ್ರಕರ್ತರು ಭಿನ್ನಾಭಿಪ್ರಾಯ ಮರೆತು ಒಂದಾದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವ ಬಿ.ನಾಗೇಂದ್ರ ತಿಳಿಸಿದರು.
ಸೋಮವಾರ ನೆಹರೂ ಕಾಲೋನಿಯ ಅವರ ನಿವಾಸದಲ್ಲಿ ತಮ್ಮನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರನ್ನುದ್ಧೇಶಿಸಿ ಮಾತನಾಡಿದ ಸಚಿವರು, ನಾನು ಶಾಸಕನಾಗಿ, ಸಚಿವನಾಗಿ ಆಯ್ಕೆ ಆಗಿರುವುದರಿಂದ ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ನಮ್ಮ ಶ್ರಮ ಶೇ.೧೦ರಷ್ಟಿದ್ದರೆ, ಜನರ ನಿರೀಕ್ಷೆಗಳು ಶೇ.೧೦೦ರಷ್ಟಿವೆ. ಹೀಗಾಗಿ ಪಕ್ಷ ಹಾಗೂ ಜನರು ನೀಡಿದ ಈ ದೊಡ್ಡ ಜವಾಬ್ದಾರಿ ನಿಭಾಯಿಸಬೇಕೆಂದರೆ ಪತ್ರಕರ್ತರ ಸಹಕಾರ ಮುಖ್ಯ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಏನೇ ಸಲಹೆ ಸೂಚನೆಗಳು ಇದ್ದರೂ ಪತ್ರಕರ್ತರು ನೇರವಾಗಿ ತಿಳಿಸಬಹುದು. ಸಮಸ್ಯೆಗಳನ್ನು ಮಾಧ್ಯಮದಲ್ಲಿ ವರದಿ ಮಾಡುವ ಮೊದಲು ನನ್ನನ್ನು ಒಮ್ಮೆ ಸಂಪರ್ಕಿಸಿ ಮಾಹಿತಿ ನೀಡಿ, ಗಡುವು ನೀಡಿದರೆ ಆ ಕೆಲಸ ಮಾಡುವೆ. ಜನಹಿತ ಇಟ್ಟುಕೊಂಡು ಮಾಧ್ಯಮದವರು ಮಾಡುವ ವಿಮರ್ಶಾತ್ಮಕ ವರದಿಗಳು ವಿಪಕ್ಷದವರಿಗೆ ಅನಾಯಾಸ ಅಸ್ತ್ರ ಕೊಡುವ ಕೆಲಸ ಆಗಬಾರದೆಂದರು.
ಪತ್ರಕರ್ತರ ಸಂಘ ಹಾಗೂ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ನಾನು ಈ ಹಿಂದೆ ನೀಡಿರುವ ಭರವಸೆಗಳನ್ನು ಈಡೇರಿಸುವೆ. ಪತ್ರಕರ್ತರ ಕಲ್ಯಾಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ನನ್ನ ಬೆಂಬಲ ಇದೆ ಎಂದು ಹೇಳಿದ ಸಚಿವ ಬಿ.ನಾಗೇಂದ್ರ, ನಾವೆಲ್ಲರೂ ಒಗ್ಗಟ್ಟಾಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸೋಣ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಕಾನಿಪ ರಾಜ್ಯ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ನನ್ನ ಸಹಪಾಠಿಯೊಬ್ಬರು ನಾಲ್ಕು ಸಲ ಶಾಸಕರಾಗಿ ಈಗ ಸಚಿವರಾಗಿರುವುದು ಸಂತಸದ ವಿಷಯವಾಗಿದೆ. ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುವುದರ ಜೊತೆ ಜೊತೆಗೆ ಪತ್ರಕರ್ತರ ಕಲ್ಯಾಣ ಕೆಲಸವನ್ನೂ ಮಾಡಲಿ ಎಂದು ಮನವಿ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿ ಬಾಷ ಹಾಗೂ ಪ್ರಧಾನ ಕಾರ್ಯದರ್ಶಿ ವಾರ್ತಾ ರವಿ ಅವರು ಮುಂದಿನ ತಿಂಗಳು ನಡೆಯಲಿರುವ ಪತ್ರಿಕಾ ದಿನಾಚರಣೆಗೆ ಆಗಮಿಸುವಂತೆ ಆಹ್ವಾನ ನೀಡಿದರು.
ಕಾನಿಪ ಜಿಲ್ಲಾ ಉಪಾಧ್ಯಕ್ಷ ಬಜಾರಪ್ಪ, ಪದಾಧಿಕಾರಿಗಳಾದ ಪಿ.ರಘುರಾಂ ಶೆಟ್ಟಿ, ಗುರುನಾಥ್, ವೆಂಕಟೇಶ್ ದೇಸಾಯಿ, ಇಮಾಮ್ ಗೋಡೆಕಾರ, ಜಂಬುನಾಥ ಸೇರಿದಂತೆ ಇನ್ನಿತರರು ಹಾಜರಿದ್ದರು.