ಬಳ್ಳಾರಿ : ಗಾಂಜಾ ಮುಕ್ತ ಬಳ್ಳಾರಿ ಜಿಲ್ಲೆ ಯನ್ನಾಗಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಾಖೀತು ಮಾಡಿದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಐಜಿ ಎಸ್ಪಿ ಸೇರಿದಂತೆ ಜಿಲ್ಲೆಯ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಸೇರಿದಂತೆ ಜಿಲ್ಲೆಯಾದ್ಯಂತ ಅಕ್ರಮ ಗಾಂಜಾ ಫೆಡ್ಲರ್ ಗಳ ಹಾವಳಿ ಹೆಚ್ಚಾಗಿದೆ. ಶಾಲಾ, ಕಾಲೇಜು ಮಕ್ಕಳು ಸೇರಿದಂತೆ ಸಾಮಾನ್ಯ ಜನರು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು.
ಗಾಂಜಾ ಹಾವಳಿಗೆ ಹೆದರಿ ಪೋಷಕರು ಮಕ್ಕಳನ್ನ ದೂರದೂರುಗಳಿಗೆ ವಿದ್ಯಾಬ್ಯಾಸಕ್ಕಾಗಿ ಕಳುಹಿಸುತ್ತಿದ್ದಾರೆ. ಕೂಡಲೇ ಪೋಲಿಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗಾಂಜಾ ಮಾರಾಟಕ್ಕೆ ಬ್ರೇಕ್ ಹಾಕುವಂತೆ ತಿಳಿಸಿದರಲ್ಲದೆ ನಗರಾದ್ಯಂತ ರಾತ್ರಿ ಹೊತ್ತಲ್ಲಿ ಪೋಲಿಸ್ ಗಸ್ತು ಪರಿಣಾಮಕಾರಿಯಾಗಿ ಬಲಪಡಿಸಬೇಕು. ಟ್ರಾಫಿಕ್ ಸಮಸ್ಯೆ, ಒನ್ ವೇ ಸೇರಿದಂತೆ ಇಲಾಖೆಗೆ ಅಗತ್ಯವಿರುವ ಅವಶ್ಯಕತೆಗಳ ಬಗ್ಗೆ ತಿಳಿಸಿದರೆ ಸರ್ಕಾರದ ವತಿಯಿಂದ ಒದಗಿಸಲಾಗುವುದೆಂದು ತಿಳಿಸಿದರು.
ನಗರದಲ್ಲಿ ರೌಡಿಗಳ ಅಟ್ಟಹಾಸ ಮಟ್ಟ ಹಾಕುವಲ್ಲಿ ನಿರ್ಧಾಕ್ಷಣ್ಯ ಕ್ರಮ ವಹಿಸುವುದರ ಜೊತೆಗೆ ರೌಡಿಶೀಟರ್ ಗಳ ಪೆರೇಡ್ ಮಾಡಿ ಬಂದೋಬಸ್ತ್ ಮಾಡುವ ಮೂಲಕ ವ್ಯಾಪಾರಸ್ಥರು, ನಾಗರೀಕರು, ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಸಭೆಯಲ್ಲಿ ಐಜಿಪಿ ಲೋಕೇಶ್, ಎಸ್ಪಿ ರಂಜಿತ್ ಕುಮಾರ್, ಮೇಯರ್ ಡಿ.ತ್ರಿವೇಣಿ ಸೇರಿದಂತೆ ಪೋಲಿಸ್ ಅಧಿಕಾರಿಗಳು ಹಾಜರಿದ್ದರು