ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲೂ ರಾಜ್ಯಸರ್ಕಾರದ ಕೈವಾಡವಿದೆ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲೂ ರಾಜ್ಯಸರ್ಕಾರದ ಕೈವಾಡವಿದೆ ಎಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಪ್ರಸ್ತಾಪವಾಗಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕಲ್ಲವೇ ಎಂದು ಹೇಳಿದರು. ಶಿವರಾಮೇಗೌಡರು ಮಾತನಾಡಿರುವ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ರಾಜಕಾರಣವೇ ಬೇರೆ. ಆದರೆ ಒಬ್ಬರ ಸಾವು ಬಯಸುವುದು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಹೊಂದಾಣಿಕೆ ಕೆಲವು ಸಲ ಕೆಲವರು ಮಾಡಿಕೊಳ್ಳುತ್ತಾರೆ. ಅದು ಬಹಿರಂಗವೂ ಆಗುತ್ತದೆ. ಆದರೆ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಂದೂ ಈ ರೀತಿ ಯೋಚನೆ ಮಾಡಿಲ್ಲ. ಅವರು ಯಾವಾಗಲೂ ರಾಜ್ಯದ ಜನರ ಬಗ್ಗೆಯೇ ಯೋಚಿಸುತ್ತಾರೆ ಎಂದರು.

ಬಹಳಷ್ಟು ಮಂದಿ ಹೊಂದಾಣಿಕೆ ಮಾಡಿಕೊಂಡು ಒಳ್ಳೆಯ ಸ್ಥಾನದಲ್ಲಿದ್ದಾರೆ. ನಮ್ಮ ಬಳಿ ಆ ರೀತಿ ಯಾವ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿಯೂ ಇಲ್ಲ ಎಂದು ಹೇಳಿದರು. ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಂತ್ರಸ್ತ ಹೆಣ್ಣು ಮಕ್ಕಳ ಮುಖವನ್ನು ಬ್ಲರ್‌ ಮಾಡಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ.

ಪೆನ್‌ಡ್ರೈವ್‌ ಸೋರಿಕೆ ಮಾಡಿದವರ ಬಗ್ಗೆ ಏಕೆ ತನಿಖೆಯಾಗುತ್ತಿಲ್ಲ? ಇದರಲ್ಲಿ ಯಾರ ಪಾತ್ರ ಇದೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಎಲ್ಲರೂ ಎಸ್‌‍ಐಟಿ ತನಿಖೆ ಎದುರಿಸಬೇಕು ಎಂದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top