ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದು ವರ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಧನ್ಯವಾದ

ಈ ಬಗ್ಗೆ ಎಕ್ಸ್‌ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, “ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಅಭದ್ರತೆಯ ಆತಂಕ ಇರಲೇಬಾರದೆಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ ಎಂದಿದ್ದಾರೆ.

ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದಗಳಿಂದಾಗಿ ನಲುಗಿಹೋಗಿದ್ದ ರಾಜ್ಯದ ಆಡಳಿತವನ್ನು ಮತ್ತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟಾಗ ಅದರ ಭಾರದ ಅರಿವು ನಮಗಿತ್ತು. ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಹೋರಾಟವನ್ನೇ ಮಾಡಬೇಕಾಯಿತು. ನಮ್ಮ ಕೈಗಳ ಬಲಕುಂದಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಜೊತೆಗೂಡಿ ರಾಜ್ಯ ಬಿಜೆಪಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಇಂತಹ ಸವಾಲುಗಳ ನಡುವೆಯೂ ನಮ್ಮ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನಮ್ಮ ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ, ಅಭಿವೃದ್ದಿಯ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದು ಎಂದು ಹೇಳಿದ್ದಾರೆ.

 “ಸಾಧನೆಯ ಬಲದಲ್ಲಿ ನಮ್ಮನ್ನು ಎದುರಿಸಲಾಗದ ನಮ್ಮ ವಿರೋಧಪಕ್ಷಗಳು ಜಾತಿ -ಧರ್ಮಗಳನ್ನು ರಾಜಕೀಯದ ಅಸ್ತ್ರಗಳನ್ನಾಗಿ ಬಳಸಿಕೊಂಡು ನಮ್ಮ ಮೇಲೆ ಎರಗುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಈ ವಿಭಜನಕಾರಿ ಮತ್ತು ವಿನಾಶಕಾರಿ ಅಜೆಂಡಾಗೆ ಬಲಿಯಾಗದೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳಲು ಸಹಕರಿಸಬೇಕೆಂದಷ್ಟೇ ನನ್ನ ಕೋರಿಕೆ ಎಂದು ಮನವಿ ಮಾಡಿದ್ದಾರೆ.

 

 

ಉಳಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಕಾಯಕವನ್ನು ನಮಗೆ ಬಿಟ್ಟು ಬಿಡಿ. ನುಡಿದಂತೆ ನಡೆದಿದ್ದೆವು, ನುಡಿದಂತೆ ನಡೆಯುತ್ತಿರುವೆವು, ಮುಂದೆಯೂ ನುಡಿದಂತೆಯೇ ನಡೆಯುವೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top