ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದಿಂದ 28 ಕ್ಷೇತ್ರಗಳಲ್ಲಿಯೂ ಸ್ಪರ್ಧೆ

ಬಳ್ಳಾರಿ : 2024ರ ಲೋಕಸಭಾ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ಭಾರತದ ಹಲವಾರು ರಾಜ್ಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿಯೂ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಚುನಾವಣೆಯ ಪೂರ್ವ ತಯಾರಿಗಾಗಿ 7 ರಾಜ್ಯಗಳಲ್ಲಿ ಪ್ರವಾಸ ಮಾಡಲಾಗಿದೆ ಎಂದು  ಆರ್.ಪಿ.ಐನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಿಎಸ್‍ಎಸ್‍ನ ರಾಜ್ಯಾಧ್ಯಕ್ಷ ಡಾ.ಎನ್. ಮೂರ್ತಿ ತಿಳಿಸಿದರು.

ಬಳ್ಳಾರಿ ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಏಳೂವರೆ ದಶಕಗಳ ದೀರ್ಘಕಾಲ ದೇಶವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ದೇಶದ ಸಂವಿಧಾನದ ಆಶಯಗಳನ್ನು ಜಾರಿ ಮಾಡಲಿಲ್ಲ. ಇವರ ಆಡಳಿತಾವಧಿಯಲ್ಲಿ ಕೋಮು ಮತ್ತು ಜಾತಿವಾದ ಸ್ವಜನ ಪಕ್ಷಪಾತ, ವಂಶಾಡಳಿತ ಹಾಗೂ ತೀವ್ರ ಭ್ರಷ್ಟಾಚಾರ, ಭಯೋತ್ಪಾದನೆಯಿಂದ ದೇಶ ಬಸವಳಿದಿದೆ. ಹೆಚ್ಚಳವಾದ ಕೋಮುಗಲಭೆ, ದುಬಾರಿ ಜಿ.ಎಸ್.ಟಿ. ತೆರಿಗೆ, ಬೆಲೆ ಏರಿಕೆಯಿಂದ ನಾಗರೀಕರ ಜೀವನ ದುಸ್ತರವಾಗಿದೆ. ಬಂಡವಾಳಿಗರು ಮತ್ತು ಭೂಮಾಲೀಕರ ಹಣ ದುಪ್ಪಟ್ಟಾಗಿ ಶ್ರೀಮಂತರು ಮತ್ತು ಬಡವರ ಅಂತರ ಹೆಚ್ಚಳವಾಗಿದೆ. ಸ್ಥಾಪಿತ ವ್ಯವಸ್ಥೆ ರಾಜಕೀಯ ಪ್ರಜಾಪ್ರಭುತ್ವವನ್ನು ನೊಣಚಿ ನುಂಗಿ ಹಾಕಿದೆ ಎಂದು ಆಗ್ರಹ ವ್ಯಕ್ತಪಡಿಸಿದರು.

ದೇಶದಲ್ಲಿನ ಸ್ಥಳೀಯ ಸಣ್ಣ ಉದ್ಯಮ, ಕೈಗಾರಿಕೆಗಳು ನೆಲ ಕಚ್ಚಿವೆ. ಕೃಷಿ ಉತ್ಪನ್ನ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಜನ ಗುಳೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲ. ನಿರುದ್ಯೋಗ ಮತ್ತು ಬಡತನದಿಂದ ದೇಶ ತಲ್ಲಣಿಸಿದೆ. ಭಾರತ ದೇಶದ ಸಾಲ 2025ಕ್ಕೆ 188 ಲಕ್ಷ ಕೋಟಿಯಾಗಲಿದೆ. ರಾಜ್ಯದ ಸಾಲ 5.65 ಲಕ್ಷ ಕೋಟಿಯಾಗಿದೆ. ಶ್ರೀಮಂತರ 14.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಬಂಡವಾಳಿಗರ ತೆರಿಗೆ ಇಳಿಸಿದೆ. ವಜ್ರ, ಚಿನ್ನ, ಬೆಳ್ಳಿ ತೆರಿಗೆ ಇಳಿಸಿದೆ. ಹಾಲು, ಮೊಸರು, ಪುಸ್ತಕ, ಪೆನ್ನು, ಆಹಾರ ಧಾನ್ಯ, ಡುಗೆ ಸಿಲಿಂಡರ್, ಡೀಸೆಲ್, ಪೆಟ್ರೋಲ್, ರಸಗೊಬ್ಬರ ಬೆಲೆ ಮತ್ತು ತೆರಿಗೆ ಹೆಚ್ಚಿಸಿದೆ ಎಂದರು.

ಭಾರತದಲ್ಲಿ 9 ಕೋಟಿಗೂ ಅಧಿಕ ಜನರು ಹಸಿವಿನಿಂದ ಸಾಯುತ್ತಿದ್ದಾರೆ. 67 ಲಕ್ಷ ಮಕ್ಕಳಿಗೆ ಒಪ್ಪೋತ್ತಿನ ಊಟವಿಲ್ಲ. 43.5 ಕೋಟಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 12 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 60 ಲಕ್ಷ ಪ.ಜಾ./ಪ.ವರ್ಗ ಮಕ್ಕಳ ವಿದ್ಯಾರ್ಥಿ ವೇತನ ರದ್ದು ಮಾಡಿದೆ.  ದೆಹಲಿಯಲ್ಲಿ ರೈತ ವಿರೋಧಿ 3 ಕಾಯ್ದೆಗಳ ರದ್ದಿಗಾಗಿ ಮತ್ತು ಎಂ.ಎಸ್.ಪಿ.ಗಾಗಿ ಚಳವಳಿಗಾರ ಮೇಲೆ ಸರ್ಕಾರ ಘನಘೋರ ದಾಳಿ ಮಾಡಿತು. 2023ರಲ್ಲಿ ರಾಜ್ಯದಲ್ಲಿ ಭೀಕರ ನೆರೆ ಮತ್ತು ಬರದಿಂದ 33.770- 00 ಕೋಟಿ ರೂ.ಗಳ ರೈತರ ಬೆಳೆ ನಷ್ಟವಾಗಿದೆ. ಪರಿಹಾರ ಶೂನ್ಯ. ನೋಟ್ ಬ್ಯಾನ್‌ನಿಂದ 100 ಜನ ಸತ್ತರು. 90ಕೋಟಿ ಜನ ಕೂಲಿ ಇಲ್ಲದೆ ಪರಿತಪಿಸಿದರು.  ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿಜಿ ಹೇಳಿದರು. ಆದರೆ 23 ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದರು. ಲಕ್ಷಾಂತರ ಕೈಗಾರಿಕೆ ಮತ್ತು ಕಂಪನಿಗಳನ್ನು ಮುಚ್ಚಿದ್ದರಿಂದ ಎಸ್.ಸಿ./ಎಸ್.ಟಿ/ ಓ.ಬಿ.ಸಿ. ಅಲ್ಪ ಸಂಖ್ಯಾತರು 4 ಕೋಟಿ 5 ಲಕ್ಷ ಉದ್ಯೋಗ ಕಡಿತವಾಗಿವೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ 8 ವರ್ಷಗಳಲ್ಲಿ 2.28 ಲಕ್ಷ ಉದ್ಯೋಗಗಳು ಕಡತವಾಗಿವೆ. 2013-14ರಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಪ.ಜಾ/ಪ.ವರ್ಗದ 2.38 ಲಕ್ಷದಷ್ಟಿದ್ದ ಹುದ್ದೆಗಳು 2021ರ ಆರ್ಥಿಕ ಸಾಲಿನಲ್ಲಿ 1.45 ಲಕ್ಷ ಕಡಿತವಾಗಿವೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳವಾಗಿವೆ. 2021ರಲ್ಲಿ 23.700, 2022ರಲ್ಲಿ 30,957, 2023ರಲ್ಲಿ 37,677 ನಡೆದ ದೌರ್ಜನ್ಯ ಕೃತ್ಯಗಳಿಗೆ ಪ್ರಕರಣ ದಾಖಲಾಗಿವೆ ಎಂದರು.

 

ಪತ್ರಿಕಾಗೋಷ್ಠಿಯಲ್ಲಿ ಡಿಎಸ್‍ಎಸ್‍ನ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top