ಬಳ್ಳಾರಿ,ಮಾ.25: 2024ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ, ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷ ಕೂಡ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ. ದೇಶದ 19 ರಾಜ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಕಪ್ಪುಹಣ, ಸ್ವಿಸ್ ಬ್ಯಾಂಕ್ ಹಣ ವಶಪಡಿಸಿಕೊಳ್ಳುವ ಬಗ್ಗೆ ಇರಲಿ, ಎಸ್.ಬಿ.ಐ ಬ್ಯಾಂಕ್ ನಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ನೀಡದಂತೆ ತಡೆಯಲು ಬಿಜೆಪಿ ಸರ್ವ ಪ್ರಯತ್ನ ಮಾಡಿದೆ. ಆದರೂ ಸುಪ್ರೀಂಕೋರ್ಟ್‌ನ ಒತ್ತಾಯದಿಂದಾಗಿ ಎಸ್.ಬಿ.ಐ ಇತ್ತೀಚಿಗಷ್ಟೆ ಮಾಹಿತಿ ನೀಡಿದೆ. ಈ ಮೂಲಕ ಬಿಜೆಪಿ ಪಕ್ಷದ ಕಾರ್ಪೋರೇಟ್ ರಾಜಕೀಯ ಬಟಾಬಯಲಾಗಿದೆ. “ನಾ ಖಾವುಂಗ ನಾ ಖಾನೆ ದೂಂಗ’ ಎನ್ನುವ ಮೋದಿ ಅವರ ಮಾತು ಎಂತಹ ಪೊಳ್ಳು ಮಾತು ಎನ್ನುವುದು ಸಾಬೀತಾಗಿದೆ. ಇತ್ತೀಚಿಗೆ ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ಆದರೆ ಮೋದಿಯವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಾರೆ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಅವರು ಇದೇ ರೀತಿ ಬ್ರಿಟಿಷರ ಮೇಲೆ ಗೂಬೆ ಕೂರಿಸುತ್ತಿದ್ದರು. ಅಂಬಾನಿ, ಅದಾನಿಗಳು ವಿಕಸಿತಗೊಂಡು ಜಗತ್ತಿನ ಅತಿ ಶ್ರೀಮಂತ ಬಂಡವಾಳಶಾಹಿಗಳಾಗಿದ್ದಾರೆ. ಅಂತಹ ಆಧುನಿಕ ಬಿಲಿಯಾಧಿಪತಿಗಳ ಐಷಾರಾಮಿ ಕಾರುಗಳಿಗಾಗಿ ದುಬಾರಿ ಸುಂಕದ ಎಕ್ಸೆಸ್ ಹೈವೇಗಳನ್ನು ಜನರ ತೆರಿಗೆಯಲ್ಲಿ ನಿರ್ಮಿಸಿ, ಇದೇ ಅಭಿವೃದ್ಧಿ ಎಂದು ಒಪ್ಪಿಸಲಾಗಿದೆ ಎಂದು ಟೀಕಿಸಿದರು.
ಇನ್ನೊಂದೆಡೆ, ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ. ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಚುನಾವಣಾ ಆಯುಕ್ತರ ನೇಮಕಾತಿ ಕಾಯಿದೆಗೆ ತಿದ್ದುಪಡಿ ತಂದಿದೆ ಎಂದರು.
ಇಂತಹ ಕೋಮುವಾದಿ, ಫ್ಯಾಸೀವಾದಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಆದರೆ ಕಾಂಗ್ರೆಸ್ ನೇತೃತ್ವದ ವಿವಿಧ ಅವಕಾಶವಾದಿ ಪ್ರಾದೇಶಿಕ ಪಕ್ಷಗಳ ಕೂಟವಾದ ಇಂಡಿಯಾ ನೈಜ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯವನ್ನು ನೀಡಲು ಖಂಡಿತ ಅಸಾಧ್ಯ. ಬಿಜೆಪಿ ಬೆಳೆದು ಅಧಿಕಾರಕ್ಕೆ ಬರುವವರೆಗೆ ದೇಶದ ಬಂಡವಾಳ ಶಾಹಿಗಳ ಸೇವೆಗೈದಿರುವುದು ಇದೇ ಕಾಂಗ್ರೆಸ್ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಎನ್.ಡಿ.ಎ ಮತ್ತು ಇಂಡಿಯಾ ಎರಡು ಮೈತ್ರಿಕೂಟಗಳು ಕೂಡ ಬಂಡವಾಳಶಾಹಿ ವರ್ಗದ ಎರಡು ಪರ್ಯಾಯಗಳಾಗಿವೆ ಎಂದರು.
ಈ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ, ಶೋಷಕರು ಮತ್ತು ಶೋಷಿತರ ನಡುವಿನ ಸಮರವಾಗಿದೆ. ಭಾರತದ ಶೋಷಿತ ದುಡಿಯುವ ವರ್ಗದ, ಬಡ ರೈತರ ಪರ್ಯಾಯವಾಗಿ ದೇಶದ ಎಡಪಕ್ಷಗಳು ಒಂದು ಒಕ್ಕೂಟದ ಮೂಲಕ ಜನ ಹೋರಾಟಗಳನ್ನು ಕಟ್ಟಬೇಕಾಗಿತ್ತು. ಚುನಾವಣೆಗಳು ಪರಿಹಾರವಲ್ಲ, ಸಮಾಜವಾದವೇ ನೈಜ ಪರಿಹಾರ ಎಂಬ ಪ್ರಚಾರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ ದುರಂತವೆಂದರೆ ಸಿಪಿಐ, ಸಿಪಿಐಎಂ ನಂತಹ ಎಡವಾದಿ ಪಕ್ಷಗಳು ಕೆಲವು ಎಂಪಿ ಸೀಟುಗಳ ಆಸೆಗೆ ಇಂಡಿಯಾ ಮೈತ್ರಿಕೂಟವನ್ನು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ ಎಂದರು.
ರೈತರ ಹೋರಾಟಗಳಿಗೆ ಬಲ ನೀಡಲು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು, ಎನ್.ಇ.ಪಿ ವಿರುದ್ಧ ಹೋರಾಡಿ, ಸಾರ್ವಜನಿಕ ಶಿಕ್ಷಣ ಉಳಿಸಲು, ಯುವಜನರ, ಮಹಿಳೆಯರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಬೇಕು. ನಾವು ಸ್ಪರ್ಧೆ ನಡೆಸದೇ ಇರುವ ಕ್ಷೇತ್ರಗಳಲ್ಲಿ ರಾಜ್ಯದ ಮೂರು ಜನವಿರೋಧಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬೇರೆ ಪ್ರಾಮಾಣಿಕ, ಹೋರಾಟಗಾರ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ನಮ್ಮ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುಳಾ ಎಂ.ಎನ್, ಡಿ.ನಾಗಲಕ್ಷ್ಮಿ, ಡಾ.ಪ್ರಮೋದ್.ಎನ್. ಎ.ಶಾಂತಾ, ಗೋವಿಂದ್, ಸದಸ್ಯರಾದ ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕರ್ನಾಟಕ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಯಾರು ಎಂಬ ಮಾಹಿತಿ ಇಲ್ಲಿದೆ ನೋಡಿ
1. ಬೆಳಗಾವಿ (2) – ಲಕ್ಷ್ಮಣ ಜಡಗಣ್ಣನವರ್
2. ಬಾಗಲಕೋಟೆ (3) – ಮಲ್ಲಿಕಾರ್ಜುನ ಹೆಚ್ ಟಿ
3. ಬಿಜಾಪುರ (4 ಎಸ್ಪಿ) – ನಾಗಜ್ಯೋತಿ
4. ಕಲಬುರ್ಗಿ( 5 ಎಸ್ಸಿ) – ಎಸ್ ಎಂ ಶರ್ಮ
5. ರಾಯಚೂರು (6 ಎಸ್ಟಿ ) – ರಾಮಲಿಂಗಪ್ಪ
6. ಕೊಪ್ಪಳ (8) – ಶರಣು ಗಡ್ಡಿ
7.ಬಳ್ಳಾರಿ (9 ಎಸ್ಟಿ) – ದೇವದಾಸ್ ಎ
8.ಹಾವೇರಿ (10 ) – ಗಂಗಾಧರ ಬಡಿಗೇರ
9. ಧಾರವಾಡ (11) – ಶರಣಬಸವ ಗೋನವಾರ
10. ಉತ್ತರ ಕನ್ನಡ( 12 ) – ಗಣಪತಿ ವಿ. ಹೆಗಡೆ
11. ದಾವಣಗೆರೆ ( 13) – ತಿಪ್ಪೇಸ್ವಾಮಿ
12. ಚಿತ್ರದುರ್ಗ (18 ಎಸ್ಸಿ) ಸುಜಾತ
13. ತುಮಕೂರು (19) – ಎಸ್ ಎನ್ ಸ್ವಾಮಿ
14. ಮೈಸೂರು (21) – ಸುನಿಲ್ ಟಿ ಆರ್
15. ಚಾಮರಾಜನಗರ (22 ಎಸ್ಸಿ) – ಸುಮಾ ಎಸ್
16. ಬೆಂಗಳೂರು ಗ್ರಾಮಾಂತರ (23)- ಹೇಮಾವತಿ ಕೆ
17. ಬೆಂಗಳೂರು ಉತ್ತರ (24) – ನಿರ್ಮಲ ಹೆಚ್ ಎಲ್
18. ಬೆಂಗಳೂರು ಕೇಂದ್ರ (25)- ಶಿವಪ್ರಕಾಶ್ ಹೆಚ್ ಪಿ
19. ಚಿಕ್ಕಬಳ್ಳಾಪುರ (27) ಷಣ್ಣುಗಂ