ಪಿಎಸ್ ಐ ನೇಮಕಾತಿ ಅಕ್ರಮವು ಮೂರು ಹಂತಗಳಲ್ಲಿ ನಡೆದಿದೆ

ಬೆಂಗಳೂರು : ವಿಧಾನಸೌಧದಲ್ಲಿ ಮಾಡಲಾದ ಧರಣಿಯ ಕಡೆಯ ದಿನ ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹಾಗೂ ನಾನು ಪತ್ರಿಕಾಗೋಷ್ಠಿ ನಡೆಸಿ ಪಿಎಸ್ ಐ ನೇಮಕದಲ್ಲಿ ಅಖ್ರಮ ನಡೆದಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದೆವು. ಪಿಎಸ್ ಐ ನೇಮಕಾತಿ ಅಕ್ರಮವು ಮೂರು ಹಂತಗಳಲ್ಲಿ ನಡೆದಿದ್ದು, ಮೊದಲು ಪ್ರಶ್ನೆ ಪತ್ರಿಕೆ ಕೊಡುವಾಗ ವ್ಯವಸ್ಥಿತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಟ್ಟು ಗೊತ್ತಿರುವುದು ಬರೆದು ಉಳಿದಿದ್ದನ್ನು ಖಾಲಿ ಬಿಡಿ ಎಂದು ಹೇಳಿರುತ್ತಾರೆ. ಎರಡನೇ ಹಂತದಲ್ಲಿ ತಮಗೆ ಬೇಕಾದವರಿಗೆ ಪ್ರಶ್ನೆ ಪತ್ರಿಕೆಯಲ್ಲಿ ಖಾಲಿ ಇರುವ ಪ್ರಶ್ನೆಗಳಿಗೆ ಇವರೇ ಉತ್ತರ ತುಂಬುತ್ತಾರೆ. ಮೂರನೆ ಹಂತದಲ್ಲಿ ಮೌಲ್ಯಮಾಪನ ಮಾಡುವಾಗ ಹೆಚ್ಚು ಅಂಕ ನೀಡಲಾಗಿರುತ್ತದೆ. ಈ ಕರ್ಮಕಾಂಡವನ್ನು ಕೇವಲ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಅಕ್ರಮ ನಡೆದ ಪರಿಕ್ಷಾ ಕೇಂದ್ರ ಕಲಬುರ್ಗಿ ಬಿಜೆಪಿ ಮಹಿಳಾ ಅಧ್ಯಕ್ಷರಾಗಿದ್ದ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದು, ಬಿಜೆಪಿಯ ಎಲ್ಲ ಮುಖಂಡರಿಗೆ ಸಂಪರ್ಕ ಹೊಂದಿದ್ದು, ಗೃಹ ಮಂತ್ರಿಗಳು ಕೂಡ ಅವರ ಮನೆಗೆ ಹೋಗಿದ್ದರು. ದಿವ್ಯಾ ಹಾಗರಗಿ, ಮಧ್ಯವರ್ತಿಗಳು, ಇಲಾಖೆ ಕೆಲವು ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ನಡೆಸಿದ್ದು, ಇದುವರೆಗೂ ಈ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ. ನೇಮಕಾತಿ ಜವಾಬ್ದಾರಿ ಹೊತ್ತಿರುವ ಎಡಿಜಿಪಿ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರಿಸಿದ್ದು, ಇದರಿಂದ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಕ್ಷಿ ನಾಕ್ಕೆ ಅವರನ್ನು ಸರ್ಕಾರ ಅದೇ ಹುದ್ದೆಯಲ್ಲಿ ಮುಂದುವರಿಸಿದೆ.

ಇಷ್ಟೆಲ್ಲಾ ಅಕ್ರಮವಾದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳನ್ನು ಅಮಾನತು ಮಾಡದಿದ್ದರೂ, ವರ್ಗಾವಣೆಯಾದರೂ ಮಾಡಿ ಪಾರದರ್ಶಕ ತನಿಖೆ ನಡೆಸಬಹುದಾಗಿತ್ತು. ಆದರೆ ಸರ್ಕಾರ ಈ ಹಗರಣವನ್ನು ಮುಚ್ಚಿಹಾಕಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಈ ಕರ್ಮಕಾಂಡದಲ್ಲಿ ಬಿಜೆಪಿ ಪ್ರಭಾವಿ ನಾಯಕರು ಶಾಮೀಲಾಗಿದ್ದು, ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಎಲ್ಲ ಪ್ರಭಾವಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ಹಗರಣದಲ್ಲಿ ಗೃಹಮಂತ್ರಿಗಳ ಪಾತ್ರ ಇದೆಯೋ ಇಲ್ಲವೋ. ಆದರೆ ಅವರ ಪಾತ್ರ ಇದೆ ಎಂಬ ಶಂಕೆ ಮಾತ್ರ ವ್ಯಕ್ತವಾಗುತ್ತಿದೆ. ಕಾರಣ, ಈ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಿದ್ದು ಯಾರು? ಈ ವಿಚಾರವಾಗಿ ಸಂಸತ್ ಸದಸ್ಯರು ಪತ್ರ ಬರೆದಿದ್ದಾಗಿ ಹೇಳುತ್ತಾರೆ. ಆದರೆ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಗೃಹ ಮಂತ್ರಿಗಳು ಆರೋಪಿ ಮನೆಗೂ ಹೋಗಿದ್ದು, ಗೃಹಮಂತ್ರಿಗಳು ಈ ಎಲ್ಲ ಶಂಕೆಗಳನ್ನು ನಿವಾರಿಸಬೇಕು. ದಿವ್ಯಾ ಹಾಗರಗಿ ಅವರನ್ನು ಇದುವರೆಗೂ ಬಂಧಿಸಲಾಗಿಲ್ಲ, ಅವರನ್ನು ಹಿಡಿಯುತ್ತೇವೆ ಎಂದು ಹೇಳಲಾಗುತ್ತಿದೆಯಾದರೂ ಅದು ಸಾಧ್ಯವಾಗಿಲ್ಲ. ಇನ್ನು ಪ್ರಕರಣದಲ್ಲಿ ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಹಿಡಿದು ಬಂಧಿಸಬೇಕು. ಆದರೆ ಸಣ್ಣ ಮೀನುಗಳನ್ನು ಹಿಡಿದು, ದೊಡ್ಡ ತಿಮಿಂಗಲಗಳ ರಕ್ಷಣೆ ಆಗಬಾರದು. ಸಣ್ಣವರನ್ನು ಬಂಧಿಸಿ ಈ ಪ್ರಕರಣವನ್ನು ಕ್ರಮೇಣ ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ದಿವ್ಯಾ ಹಾಗರಗಿ ಅವರು ತಲೆಮರೆಸಿಕೊಂಡು ಇಷ್ಟು ದಿನಗಳಾದರೂ ಬಂಧಿಸಲು ಸಾಧ್ಯವಾಗಲಿಲ್ಲ ಎಂದರೆ ಸರ್ಕಾರವೇ ಅವರಿಗೆ ಬೆಂಬಲ ನೀಡುತ್ತಿದೆ. ಗೃಹಮಂತ್ರಿಗಳೇ ಅವರ ಮನೆಗೆ ಹೋಗಿರುವಾಗ ಪೊಲೀಸ್ ಅಧಿಕಾರಿಗಳು ಹೇಗೆ ಅವರನ್ನು ಬಂಧಿಸುತ್ತಾರೆ? ಆಕೆ ಬಿಜೆಪಿ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು, ದಿಶಾ ಸಮಿತಿ ಹಾಗೂ ಕೌನ್ಸಿಲ್ ಕಮಿಟಿ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಇವರನ್ನೇ ಹಿಡಿಯಾಗದಿದ್ದರೆ, ಪೊಲೀಸರು ದೊಡ್ಡ ಕ್ರಿಮಿನಲ್ ಗಳನ್ನು ಬಂಧಿಸಲು ಸಾಧ್ಯವೇ?

ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು, ಅವರಿಗೆ ಜಾಮೀನು ನೀಡುವುದು ಬಿಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಸರ್ಕಾರ ತಮ್ಮ ಪಕ್ಷದವರ ರಕ್ಷಣೆಗೆ ನಿಂತಿದ್ದಾರೆ. ಈ ಮಧ್ಯೆ ಸಿಐಡಿ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿದೆ. ಪ್ರಿಯಾಂಕ್ ಖರ್ಗೆ ಅವರು ಈ ಅಕ್ರಮ ಬಯಲು ಮಾಡಿದ್ದು, ಸಾರ್ವಜನಿಕವಾಗಿ ಲಭ್ಯವಿರುವ ಸರ್ಕಾರದ ದಾಖಲೆಗಳನ್ನೇ ಇಟ್ಟುಕೊಂಡು ಈ ಕ್ರಮ ಬಹಿರಂಗಪಡಿಸಿದ್ದು, ಈ ದಾಖಲೆಗಳು ಸರ್ಕಾರದ ಬಳಿ ಇಲ್ಲವೇ? ಪೊಲೀಸ್ ಇಲಾಖೆ, ಗುಪ್ತಚರ ದಳ ಏನು ಮಾಡುತ್ತಿದೆ. ಇನ್ನು ಸಚಿವ ಪ್ರಭು ಚೌಹಾಣ್ ಫೆಬ್ರವರಿಯಲ್ಲಿ ಈ ನೇಮಕದಲ್ಲಿ ಅಕ್ರಮವಾಗಿದೆ ಎಂದು ಮೊದಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಅವರಿಗೆ ನೊಟೀಸ್ ಕೊಟ್ಟು ವಿಚಾರಣೆ ಮಾಡಬಹುದಿತ್ತಲ್ಲವೇ? ಯಾಕೆ ಮಾಡಿಲ್ಲ? ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಟ್ಟಿರುವುದು ಹಾಗೂ ಅವರು ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಮೊದಲು ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ ಪ್ರಭು ಚೌಹಾಣ್ ಅವರ ತನಿಖೆ ಮಾಡಲಿಲ್ಲ ಯಾಕೆ? ಈ ಹಗರಣದ ಮುಖ್ಯ ರೂವಾರಿ ಎಡಿಜಿಪಿ ಅವರು ಗೃಹ ಮಂತ್ರಿಗಳಿಗೆ ಬಹಳ ಹತ್ತಿರದವರಾಗಿದ್ದು, ನನ್ನ ಪ್ರಕಾರ ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

545 ಹುದ್ದೆಯಲ್ಲಿ 250 ಹುದ್ದೆಗಳನ್ನು ತಮ್ಮ ಬೆಂಬಲಿತ ಅಭ್ಯರ್ಥಿಗಳು, ಆರ್ ಎಸ್ಎಸ್, ಎಬಿವಿಪಿ ಕಾರ್ಯಕರ್ತರಿಗೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ವಾಮಮಾರ್ಗದ ಮೂಲಕ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಈ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವ ಅದಿಕಾರಿಗಳನ್ನು ಅಮಾನತುಗೊಳಿಸಿ ನ್ಯಾಯಯುತ ತನಿಖೆ ಮಾಡಬೇಕು. 70 ಸಾವಿರ ಅಬಯರ್ಥಿಗಳು ಪರೀಕ್ಷೆ ಬರೆದಿದ್ದು, ಅರ್ಹರು ಆಯ್ಕೆಯಾಗದೇ ಬಿಜೆಪಿಯವರಿಗೆ ಬೇಕಾದವರು ಹಣ ಇರುವವರು ಆಯ್ಕೆಯಾಗಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಅಕ್ರಮ ಸರ್ಕಾರದಿಂದ ಮಾತ್ರ ಇಂತಹ ಅಕ್ರಮಗಳು ನಡೆಯಲು ಸಾಧ್ಯ. ಕೇವಲ ಈ ನೇಮಕಾತಿ ಮಾತ್ರವಲ್ಲ, ಇಂಜಿನಿಯರ್ ನೇಮಕಾತಿ, ಸಹಾಯಕ ಪ್ರಾದ್ಯಾಪಕರ ಹುದ್ದೆ ನೇಮಕದಲ್ಲೂ ಅಕ್ರಮ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಆರೋಪ ಕೇಳಿ ಬರುತ್ತಿವೆ. ಪ್ರಿಯಾಂಕ್ ಖರ್ಗೆ ಅವರನ್ನು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗದಂತೆ ನಿಮ್ಮ ಅಧ್ಯಕ್ಷರೇ ಸೂಚನೆ ನೀಡಿದ್ದಾರೆ ಎಂಬ ಪ್ರಶ್ನೆಗೆ, ‘ಆ ವಿಚಾರ ನನಗೆ ಗೊತ್ತಿಲ್ಲ. ನಾನು ಗೃಹ ಮಂತ್ರಿಯಾಗಿದ್ದವನು. ನನಗೂ ಕೆಲವು ಮಾಹಿತಿಗಳು ಲಭ್ಯವಾಗುತ್ತವೆ. ಅದೇ ರೀತಿ ಅಧ್ಯಕ್ಷರಾದ ಶಿವಕುಮಾರ್ ಅವರಿಗೂ ಲಭ್ಯವಾಗಿರಬಹುದು. ಹೀಗಾಗಿ ಅವರು ಈ ರೀತಿ ಹೇಳಿರಬಹುದು. ಇದುವರೆಗೂ ಪ್ರಭು ಚೌಹಾಣ್ ಅವರ ವಿಚಾರಣೆ ಯಾಕೆ ಮಾಡಿಲ್ಲ? ಪೊಲೀಸರು ಆರೋಪಿ ದಿವ್ಯಾ ಹಾಗರಗಿ ಅವರನ್ನು ಯಾಕೆ ಬಂಧಿಸಿಲ್ಲ? ಅವರಿಗೆ ಪೊಲೀಸ್ ಕೆಲಸ ಮಾಡಲು ಇಚ್ಛೆ ಇಲ್ಲದಿದ್ದರೆ ಪೊಲೀಸ್ ಹುದ್ದೆ ತ್ಯಜಿಸಿ ಬಿಜೆಪಿ ಪಕ್ಷ ಸೇರಿಕೊಳ್ಳಲಿ’ ಎಂದು ಉತ್ತರಿಸಿದರು.

ದಿವ್ಯಾ ಹಾಗರಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದ ಸಮಯದಲ್ಲಿ ಭೇಟಿ ಮಾಡಿ ಜತೆಗಿರುವ ಫೋಟೋ ಕೂಡ ಬಂದಿದೆ. ಶಿವಕುಮಾರ್ ಅವರೇ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಕುರಿತ ಪ್ರಶ್ನೆಗೆ, ‘ಡಿ.ಕೆ. ಶಿವಕುಮಾರ್ ಅವರು ಈಗ ಗೃಹಮಂತ್ರಿಯಲ್ಲ. ದಿವ್ಯಾ ಹಾಗರಗಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದಾಗ ಯಾವುದಾದರೂ ಹಗರಣ ನಡೆದಿತ್ತಾ? ಬಿಜೆಪಿಯವರು ಎಲ್ಲ ವಿಚಾರದಲ್ಲೂ ಶಿವಕುಮಾರ್ ಅವರ ಮೇಲೆ ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಅವರು ಎಲ್ಲ ವಿಚಾರದಲ್ಲೂ ಮಹಾನಾಯಕ ಎಂದು ಹೇಳುತ್ತಾರೆ. ಬಿಜೆಪಿ ಏನೇ ತಪ್ಪು ಮಾಡಿದರೂ, ನೆಹರೂ, ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೇಲೆ ಹಾಕುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರು ಏನೇ ಆದರೂ ಕಾಂಗ್ರೆಸ್ ಮೇಲೆ ಆರೋಪ ಮಾಡುವುದನ್ನು ಕಲಿತುಕೊಂಡಿದ್ದಾರೆ. ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ ಇವರಿಗೆ ಆಡಳಿತ ಮಾಡಲು ಬಾರದಿದ್ದರೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಇವರು ವಿರೋಧ ಪಕ್ಷದಲ್ಲಿ ಕೂರಲು ಮಾತ್ರ ಲಾಯಕ್ಕಾಗಿದ್ದಾರೆ. 2023ರ ಚುನಾವಣೆಯಲ್ಲಿ ಅವರು ಯಾವ ಸ್ಥಾನಕ್ಕೆ ಹೋಗಬೇಕೋ ಅಲ್ಲಿಗೆ ಹೋಗುತ್ತಾರೆ’ ಎಂದು ಉತ್ತರಿಸಿದರು. ಈ ಪ್ರಕರಣದ ಪರ್ಯಾಯ ತನಿಖೆಗೆ ಆಗ್ರಹ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಇಲ್ಲಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದು, ಸಿಬಿಐಗೆ ವಹಿಸಿದರೆ ಕೇಂದ್ರದಲ್ಲಿ ಇವರದೇ ಸರ್ಕಾರ ಇದೆ. ಬಿಟ್ ಕಾಯಿನ್ ಹಗರಣದಂತೆ ಆಗಲಿದೆ. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕು ಎಂದು ನಾನು ಒತ್ತಾಯಿಸುತ್ತೇನೆ. ಪೂರ್ಣ ಪ್ರಮಾಣದಲ್ಲಿ ನ್ಯಾಯಾಂಗ ತನಿಖೆ ಸಾಧ್ಯವಾಗದಿದ್ದರೂ ಪ್ರಕರಣದ ವಿಚಾರಣೆಯ ಮೇಲುಸ್ತುವಾರಿಯನ್ನಾದರೂ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರು ಮಾಡಬೇಕು. ಆಗ ಸತ್ಯ ಆಚೆ ಬಂದು, ಪ್ರತಿಭಾವಂತ ಅಭ್ಯರ್ಥಿಗಳು ಈ ಹುದ್ದೆಗಳನ್ನು ಅಲಂಕರಿಸಲಿದ್ದಾರೆ. ಹಣ, ರಾಜಕೀಯ ಪ್ರಭಾವದಿಂದ ಬಂದವರು, ಭವಿಷ್ಯದಲ್ಲಿ ಯಾವ ಪರಿಣಾಮ ಬೀರಬಹುದು’ ಎಂದು ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಕೆಪಿಎಸ್ ಸಿ ಹಗರಣವಾಗಿತ್ತು, ಈಗ ನೀವು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ಕೆಪಿಎಸ್ ಸಿ ಹಗರಣ ನಡೆದಿದ್ದು, 2011ರಲ್ಲಿ, ನಮ್ಮ ಸರ್ಕಾರ ಬಂದಿದ್ದು 2013ರಲ್ಲಿ. ಇನ್ನು ಲೋಕಸೆವಾ ಆಯೋಗಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ನಾವು ಬಿಜೆಪಿಯವರಂತೆ ಸ್ವಾಯತ್ತ ಸಂಸ್ಥೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಆ ಸಂಸ್ಥೆಗಳನ್ನು ನಾಶ ಮಾಡಲು ಪ್ರಯತ್ನಿಸಿಲ್ಲ. ಬಿಜೆಪಿ ಆರ್ ಬಿಐ, ಚುನಾವಣಾ ಆಯೋಗ, ಇಡಿ, ಸಿಬಿಐ ಸಂಸ್ಥೆಗಳನ್ನು ಹಾಳು ಮಾಡಿವೆ. ಎಲ್ಲ ಕಾಲದಲ್ಲೂ ಅಲ್ಪ ಪ್ರಮಾಣದಲ್ಲಿ ಅಕ್ರಮಗಳು ನಡೆದಿರಬಹುದು. ಆದರೆ ಬಿಜೆಪಿ ಆಡಳಿತ ಅವಧಿಯಲ್ಲಿ ಎಲ್ಲೆ ಮೀರಿ ಅಕ್ರಮಗಳು ನಡೆಯುತ್ತಿವೆ’ ಎಂದು ಉತ್ತರಿಸಿದರು. ಕಾಂಗ್ರೆಸ್ ಹೋರಾಟ ಕೇವಲ ಪತ್ರಿಕಾಗೋಷ್ಠಿಗೆ ಸೀಮಿತವಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಹೋರಾಟ ಮಾಡುತ್ತಲೇ ಇದೆ. ಮಾಧ್ಯಮಗಳು ಅವುಗಳನ್ನು ಜನರಿಗೆ ಮುಟ್ಟಿಸಬೇಕಾಗಿದೆ. ನಮ್ಮ ಹೋರಾಟ ಮಾಧ್ಯಮಗಳ ಮೂಲಕ ಜನರಿಗೆ ಮುಟ್ಟಿದರೆ ಸೌಮ್ಯ ಹೋರಾಟವೂ ಉಗ್ರ ಹೋರಾಟವಾಗುತ್ತದೆ. ನಾವು ಎಷ್ಟೇ ಮಾತನಾಡಿದರೂ ಮಾಧ್ಯಮಗಳ ಸಹಕಾರ ಮುಖ್ಯ. ನಾವು ಎಷ್ಟೇ ಹೋರಾಟ ಮಾಡಿದರು ಈ ದಪ್ಪ ಚರ್ಮದ ಸರ್ಕಾರ ಯಾವುದೇ ರೀತಿ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಉತ್ತರಿಸಿದರು. ಇನ್ನು ನಿನ್ನೆ ಮುಖ್ಯಮಂತ್ರಿಗಳು ಹಾಗೂ ಗುತ್ತಿಗೆದಾರರ ಸಂಘದ ನಡುವಣ ಮಾತುಕತೆ ಕುರಿತ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ಕಮಿಷನ್ ಅನ್ನು ನಿಲ್ಲಿಸುವುದಾದರೆ ಅದು ರಾಜ್ಯಕ್ಕೆ ಒಳ್ಳೆಯದೇ ಅಲ್ಲವೇ? ಬಿಜೆಪಿಯವರು ಈಗ ಗುತ್ತಿಗೆದಾರರಿಗೆ ಭರವಸೆ ನೀಡಿರಬಹುದು. ಆದರೆ ಅವರು ಅದಕ್ಕೆ ಬದ್ಧರಾಗಿರುತ್ತಾರಾ? ಎಂಬುದು ಪ್ರಶ್ನೆ. 15 ದಿನಗಳ ನಂತರ ಎಲ್ಲವೂ ತಿಳಿಯಲಿದೆ. ಅಲ್ಲಿಯವರೆಗೂ ಕಾಯೋಣ. ಕಮಿಷನ್ ಸಂಪೂರ್ಣವಾಗಿ ಹೋಗುವುದು ಮುಖ್ಯ. ನಮ್ಮ ಸರ್ಕಾರ ಬಂದರೆ 0 ಕಮಿಷನ್ ವ್ಯವಸ್ಥೆ ಬರುತ್ತದೆ’ ಎಂದು ಉತ್ತರಿಸಿದರು.

Leave a Comment

Your email address will not be published. Required fields are marked *

Translate »
Scroll to Top