5 ವರ್ಷಗಳಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ ಅಶ್ವತ್ಥನಾರಾಯಣ

ಹಾಸನ: ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಸಂಘಟಿತ ವಲಯದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಜತೆಗೆ ಸಾಫ್ಟ್ ವೇರ್ ವಲಯವೊಂದರಲ್ಲೇ ವರ್ಷಕ್ಕೆ 5 ಲಕ್ಷದಂತೆ ಒಟ್ಟು 25 ಲಕ್ಷ ಉದ್ಯೋಗ ಅವಕಾಶ ಲಭ್ಯವಾಗಲಿದೆ. ಈ ಮೂಲಕ ಒಟ್ಟಾರೆ 55 ಲಕ್ಷ ಉದ್ಯೋಗಗಳು ಯುವಜನರಿಗೆ ಸಿಗಲಿವೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಲ್ಲಿನ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯು ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.

`ಇಂದಿನ ಉದ್ಯೋಗ ಮೇಳದಲ್ಲಿ 80 ಹೆಸರಾಂತ ಕಂಪನಿಗಳು ಪಾಲ್ಗೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಸಂದರ್ಶನಕ್ಕೆ ಬಂದಿದ್ದಾರೆ. ಜಿಲ್ಲೆಯಲ್ಲೇ ಸ್ಥಳೀಯವಾಗಿ 2 ಸಾವಿರ ಉದ್ಯೋಗಗಳು ಲಭ್ಯವಿದ್ದು, ಇವುಗಳನ್ನು ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು. ಉಳಿದವರಿಗೆ ಅವರ ಕೌಶಲ್ಯಗಳನ್ನು ಆಧರಿಸಿ, ಉದ್ಯೋಗಗಳನ್ನು ದೊರಕಿಸಿ ಕೊಡಲಾಗುವುದು’ ಎಂದು ಅವರು ಹೇಳಿದರು. ಉದ್ಯಮ ವಲಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಕ್ಕೆ ಭಾರೀ ಬೇಡಿಕೆ ಇದ್ದು, ಮುಂದಿನ 5 ವರ್ಷಗಳಲ್ಲಿ 55 ಲಕ್ಷ ಜನರನ್ನು ನಾವು ಸಜ್ಜುಗೊಳಿಸಬೇಕಾಗಿದೆ. ಮುಖ್ಯವಾಗಿ, ರಾಜ್ಯದ ಆರ್ಥಿಕತೆಯನ್ನು ನಾಲ್ಕು ಪಟ್ಟು ಹೆಚ್ಚು ಬೆಳೆಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪಾಲಿಟೆಕ್ನಿಕ್ ಶಿಕ್ಷಣದ ಸಮಗ್ರ ಸುಧಾರಣೆಗೆ ಸರಕಾರವು ಸಂಕಲ್ಪ ಮಾಡಿದ್ದು, 150 ಸಂಸ್ಥೆಗಳನ್ನು ಸಮಗ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇಲ್ಲಿ ಕಲಿಯುವವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಖಾತ್ರಿ ಒದಗಿಸಲಾಗುತ್ತಿದೆ. ಜತೆಗೆ, ಲಕ್ಷಾಂತರ ಜನರಿಗೆ ಅಪ್ರೆಂಟಿಸ್ ತರಬೇತಿ ಕೊಡಲು ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳು ಇದರತ್ತ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು. ಶಿಕ್ಷಣದಲ್ಲಿ ಭಾಷೆ ಮತ್ತು ಗಣಿತದ ಕಲಿಕೆಯೇ ಕೌಶಲ್ಯಪೂರ್ಣ ಜ್ಞಾನಾರ್ಜನೆಗೆ ಆಧಾರಸ್ತಂಭಗಳಾಗಿವೆ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವುಗಳ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಜತೆಗೆ ಉನ್ನತ ಶಿಕ್ಷಣ ವಲಯದಲ್ಲಿ ತಂತ್ರಜ್ಞಾನದ ಮೂಲಕ ಪಾರದರ್ಶಕತೆ ತರಲಾಗಿದೆ. ನಮ್ಮ ಯುವಜನರು ಕೇವಲ ಉದ್ಯೋಗಾರ್ಥಿಗಳಾಗದೆ ಉದ್ಯೋಗದಾತರಾಗುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಸಚಿವರು ನುಡಿದರು.

ನಿರುದ್ಯೋಗ ಸಮಸ್ಯೆ ಎನ್ನುವುದು ಹುಸಿ ಸೃಷ್ಟಿಯಾಗಿದೆ. ಈಗ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಉದ್ಯಮ ಸಂಸ್ಥೆಗಳನ್ನೂ ಬೆಸೆಯಲಾಗಿದೆ. ಯುವಜನರು ಉದ್ಯೋಗ ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ. ಅವರಿರುವ ಸ್ಥಳೀಯ ಪರಿಸರದಲ್ಲೇ ಅವಕಾಶ ಸೃಷ್ಟಿಸಲಾಗುವುದು. ಇದರಿಂದ ಅನಗತ್ಯ ವಲಸೆಯನ್ನೂ ತಡೆಯಬಹುದು ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂ ಗೌಡ, ಮಲೆನಾಡು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು ಮುಂತಾದವರು ಇದ್ದರು ಹಾಸನ ಜಿಲ್ಲೆಯಲ್ಲಿ ಸದ್ಯದಲ್ಲೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಜತೆಗೆ, ಕೆಐಟಿ ಮಾದರಿ ಸಂಸ್ಥೆಯನ್ನೂ ಆರಂಭಿಸಲಾಗುವುದು. ಈ ಮೂಲಕ ಕೃಷಿಪ್ರಧಾನ ಜಿಲ್ಲೆಯಲ್ಲಿ ರಚನಾತ್ಮಕ ಬದಲಾವಣೆ ತರುವ ಮೂಲಕ, ಇಲ್ಲೇ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.

Leave a Comment

Your email address will not be published. Required fields are marked *

Translate »
Scroll to Top