ಮರಿಯಮ್ಮನಹಳ್ಳಿ : ರಾಜ್ಯದಾದ್ಯಂತ ಸರಕಾರದ ಆದೇಶದಂತೆ ಜಾರಿಯಾದ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಬಿಗಿಕ್ರಮ ಜರುಗಿಸಿದ್ದು ಹೋಟೆಲ್ ಪಾರ್ಸೆಲ್ ಗೂ ಅವಕಾಶ ನೀಡದೆ, ಕಿರಾಣಿ ಮತ್ತು ತರಕಾರಿ, ಮಾಂಸ, ಮೊಟ್ಟೆ ಅಂಗಡಿಗಳನ್ನೂ ಸಂಪೂರ್ಣ ಬಂದ್ ಮಾಡಲಾದ ದೃಶ್ಯ ಶನಿವಾರ ಮತ್ತು ಭಾನುವಾರ ಪಟ್ಟಣದಲ್ಲಿ ಕಂಡುಬಂದಿತು. ಪಟ್ಟಣ ಕೇಂದ್ರಬಿಂದು ವಾಗಿದ್ದು ಕೈಗಾರಿಕೆ ಕಾರ್ಮಿಕರು, ವಾಹನ ಚಾಲಕರು ಹೆಚ್ಚಾಗಿದ್ದಾರೆ. ಹೋಟೆಲ್ ಗಳಲ್ಲಿ ಪಾರ್ಸೆಲ್ ಗೂ ಅವಕಾಶ ನೀಡದಿದ್ದರಿಂದ ಊಟಕ್ಕೆ ಪರದಾಡುವಂತಾಗಿತ್ತು. ತರಕಾರಿ ಅಂಗಡಿಗಳಿಗೆ ಓಣಿಗಳಲ್ಲಿ ಮಾರುವಂತೆ ತಿಳಿಸಿದ್ದರಿಂದ ಬಹುತೇಕ ಮಾರಾಟಗಾರರು ಉತ್ಸಾಹ ತೋರದಿರುವುದು ಕಂಡು ಬಂದಿತು. ಸೋಮವಾರ ಸಂತೆ: ಪಟ್ಟಣದಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನ ವರೆಗೆ ಕಿರಾಣಿ, ತರಕಾರಿ, ಮಾಂಸ, ಮೊಟ್ಟೆ, ಹೋಟೆಲ್ ಬಂದ್ ಮಾಡುವಂತೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಂಡಿದೆ. ಆದರೆ ಸೋಮವಾರ ಸಂತೆ ಇರುವುದರಿಂದ ಎರಡು ದಿನ ಕಠಿಣ ವೀಕೆಂಡ್ ನಲ್ಲಿದ್ದ 33 ಹಳ್ಳಿಯ ಜನರು ಏಕಾಏಕಿ ಪಟ್ಟಣಕ್ಕೆ ಆಗಮಿಸುವುದರಿಂದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಏನೂ ಕ್ರಮ ಕೈಗೊಳ್ಳುವುದಿಲ್ಲ ಇದರಿಂದ ಕೋವಿಡ್ ಹೆಚ್ಚಾಗುವುದಿಲ್ಲವೇ ಎಂಬುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಬಿಕೋ ಎನ್ನುವ ರಸ್ತೆಗಳು: ಎಲ್ಲಾರೀತಿಯ ಸಂಚಾರ ನಿಷೇಧಿಸಲಾಗಿದ್ದರಿಂದ ಕೈಗಾರಿಕ ವಾಹನಗಳು, ತುರ್ತು ಕೆಲಸಗಳಿಗೆ ಮಾತ್ರ ವಾಹನ ಬಳಸಿದ್ದರಿಂದ ಗಿಜಿಗುಡುವ ರಸ್ತೆಗಳು ವಾಹನ ದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು. ಮೆಡಿಕಲ್ ಶಾಪ್ ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ ಮಾಡಿದ್ದರಿಂದ ಜನರ ಸಂಚಾರ ವಿರಳವಾಗಿದ್ದು, ಸರಕಾರಿ ಬಸ್ ಸಂಚಾರ ಎಂದಿನಂತೆ ಇದ್ದವು. ರಾಜ್ಯದ ಎಲ್ಲ ಕಡೆ ತರಕಾರಿ ಮಾರಲು ಅವಕಾಶ ನೀಡಿದ್ದಾರೆ. ಆದರೆ ಮರಿಯಮ್ಮನಹಳ್ಳಿ ಪಂಚಾಯಿತಿಯವರು ನಿರ್ಬಂಧಿಸಿದ್ದರಿಂದ ದುಬಾರಿ ತರಕಾರಿ ರಸ್ತೆಗೆ ಚೆಲ್ಲುವ ಪರಿಸ್ಥಿತಿ ಬಂದಿದೆ’. – ಮಂಜುಳಾ, ಗಂಗಮ್ಮ ವೆಂಕಟೇಶ, ತರಕಾರಿ ವ್ಯಾಪಾರಿಗಳು ತಮ್ಮ ಕಷ್ಟಗಳನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು. ಹೋಟೆಲ್, ತರಕಾರಿ, ಮಾಂಸ, ಮೊಟ್ಟೆ, ಕಿರಾಣಿ ಅಂಗಡಿ ಬಂದ್ ಮಾಡಲು ಡಿ.ಸಿ ಯವರು ತಿಳಿಸಿಲ್ಲ, ಸ್ಥಳಿಯ ಆಡಳಿತವಾಗಿ ನಾವೇ ತೆಗೆದುಕೊಂಡು ನಿರ್ಧಾರ ಪಟ್ಟಣದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗಿದ್ದು ನಿಯಂತ್ರಿಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ’. – ಲತಾ ಆರೋಗ್ಯ ನಿರೀಕ್ಷಕಿ. ಪ.ಪಂ.ಮರಿಯಮ್ಮನಹಳ್ಳಿ.
