ದಿನದ 24 ಗಂಟೆಯೂ ಸೋಂಕಿತರಿಗೆ‌ ವೈದ್ಯಕೀಯ ಸೌಲಭ್ಯ

ಬೆಂಗಳೂರು. ಜ.17; ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರನ್ನು ಕೋವಿಡ್ ಮೂರನೆ ಅಲೆಯಿಂದ ರಕ್ಷಿಸಲು ಮತ್ತು ಆರೋಗ್ಯ ಸುರಕ್ಷೆಗಾಗಿ ಎಲ್ಲ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು‌. ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ವ್ಯಾಪ್ತಿಯ ನಾಗಪುರದಲ್ಲಿರುವ ಶಾಸಕರ ಭವನದಲ್ಲಿಂದು ಕೋವಿಡ್ ವಾರ್ ರೂಂಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ನಾಗರೀಕರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದ ತಕ್ಷಣ ಅವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಾರ್ ರೂಂ ಆರಂಭಿಸಲಾಗಿದೆ. ಇಲ್ಲಿ ದಿನದ 24 ಗಂಟೆಗಳ‌ ಕಾಲ ಕೆಲಸ ಮಾಡುವ ಸಿಬ್ಬಂದಿ ಇರಲಿದ್ದಾರೆ. ಆಕ್ಸಿಜನ್ ಸೇರಿದಂತೆ ಯಾವುದೇ ವೈದ್ಯಕೀಯ ವ್ಯವಸ್ಥೆ ಬೇಕಾದವರು ಕರೆ ಮಾಡಿದರೆ ಅರ್ಧಗಂಟೆಯಲ್ಲಿ ಅವರ ಮನೆ ಬಾಗಿಲಿಗೆ ಔಷಧಿ, ಮಾತ್ರೆ, ಆಕ್ಸಿಜನ್ ಮತ್ತು ತುರ್ತು ಅಗತ್ಯ ಇರುವವರಿಗೆ ಅಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು. ಈಗಾಗಲೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಗೊಂಡಿರುವ ಕೆಂಪೇಗೌಡ ಸಮುದಾಯ‌ಭವನದಲ್ಲಿ ಸಿಎಸ್ ಆರ್ ಅನುದಾನದಲ್ಲಿ 1.20 ಕೋಟಿ ರೂ ವೆಚ್ಚ ಮಾಡಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ.ಇಲ್ಲಿ ಆಕ್ಸಿಜನ್ ಸಹಿತ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.‌ಇಲ್ಲಿ ಹಾಸಿಗೆಗಳು ಭರ್ತಿಯಾದರೆ ಬೇರೆ ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು.

ಇದೀಗ ಆರಂಭಗೊಂಡಿರುವ ವಾರ್ ರೂಂನಲ್ಲಿ 5 ದೂರವಾಣಿ ಸೌಲಭ್ಯ ಒದಗಿಸಲಾಗಿದೆ. ಈ ದೂರವಾಣಿಗಳು ದಿನದ 24 ಗಂಟೆಗಳ ಕಾಲ‌ ಕಾರ್ಯನಿರ್ವಹಿಸಲಿವೆ. ಇದರ ಪ್ರಚಾರಕ್ಕಾಗಿ ಕರಪತ್ರಗಳನ್ನು ಕ್ಷೇತ್ರದ ಮನೆ ಮನೆಗಳಿಗೆ ಹಂಚಲಾಗುವುದು. ಎರಡೂ ಅಲೆಗಳನ್ನು ಎದುರಿಸಿದ ರೀತಿಯಲ್ಲಿಯೇ ಮೂರನೆ ಅಲೆಯನ್ನು ಎದುರಿಸುವ ಸಂಕಲ್ಪವನ್ನು ಎಲ್ಲರೂ ಮಾಡೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಜಯಸಿಂಹ,ಶ್ರೀನಿವಾಸ್, ವೆಂಕಟೇಶ್ ಮೂರ್ತಿ,ವೆಂಕಟೇಶ್, ಶಿವಾನಂದ್ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top