ದಿ ಇನ್ಸ್ಟಿಟ್ಯೂಟ್‌ ಅಫ್‌ ಕಂಪೆನಿ ಸೆಕ್ರೇಟರೀಸ್‌ ಅಫ್‌ ಇಂಡಿಯಾ- ವೈವಿಧ್ಯಮ ಕೋರ್ಸ್‌ ಗಳಿಗೆ ವಿಶ್ವಮಾನ್ಯತೆ

ಯುಜಿಸಿಯೊಂದಿಗೆ ಪಾಲುದಾರಿಕೆಗೆ ಮಾತುಕತೆ – ಅಧ್ಯಕ್ಷ ಸಿ.ಎಸ್.ಬಿ, ನರಸಿಂಹನ್‌

ಬೆಂಗಳೂರು : ದಿ ಇನ್ಸ್ಟಿಟ್ಯೂಟ್‌ ಅಫ್‌ ಕಂಪೆನಿ ಸೆಕ್ರೇಟರೀಸ್‌ ಅಫ್‌ ಇಂಡಿಯಾದ ವೈವಿಧ್ಯಮ ಕೋರ್ಸ್‌ ಗಳಿಗೆ ವಿಶ್ವಮಾನ್ಯತೆ ದೊರೆತಿದ್ದು, ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗ – ಯುಜಿಸಿ ನಮ್ಮ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲು ಆಸಕ್ತಿ ವಹಿಸಿದೆ ಎಂದು ಐ.ಸಿ.ಎಸ್‌.ಐ ಅಧ್ಯಕ್ಷರಾದ ಸಿ.ಎಸ್.ಬಿ, ನರಸಿಂಹನ್‌ ಹೇಳಿದ್ದಾರೆ.

 

ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದಿಂದ ನಗರದ ಶೆರಟನ್‌ ಗ್ರ್ಯಾಂಡ್‌ ಬೆಂಗಳೂರು ಹೋಟೆಲ್‌, ಬ್ರಿಗೇಡ್‌ ಗೇಟ್‌ ವೇ ನಲ್ಲಿ ಎರಡು ದಿನಗಳ  “ಮಹಿಳಾ ನಾಯಕತ್ವಕ್ಕೆ ಸ್ಪೂರ್ತಿ – ವೇಗದ ಪ್ರಗತಿ” ಎಂಬ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ಅಧ್ಯಕ್ಷ ಜಗದೇಶ್‌ ಕುಮಾರ್‌ ಅವರೊಂದಿಗೆ ಈ ಸಂಬಂಧ ಗುರುವಾರ ವಿಸ್ತೃತ ಮಾತುಕತೆ ನಡೆದಿದ್ದು, ಐ.ಸಿ.ಎಸ್‌.ಐ ಕೋರ್ಸ್‌ ಗಳ ಬಗ್ಗೆ ಅವರು ಆಸಕ್ತರಾಗಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಈಗಿರುವ ಕೋರ್ಸ್ ಗಳಿಂದಾಚೆಗೆ ಇರುವ ಹೊಸ ಅವಕಾಶಗಳ ಬಗ್ಗೆ ಯುಜಿಸಿ ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದೆ. ಇದು ಪ್ರಾರಂಭಿಕ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಇದು ಮಹತ್ವದ ಪಾಲುದಾರಿಕೆ ಹೊಂದುವ ಸಾಧ್ಯತೆಯಿದೆ ಎಂದು ಆಶಯ ವ್ಯಕ್ತಪಡಿಸಿದರು.  

ಸಾಂಸ್ಥಿಕ ವ್ಯವಹಾರಗಳ ವಲಯದಲ್ಲಿ ಬಂಡವಾಳ ಮಾರುಕಟ್ಟೆ ಮಹತ್ವದ ಪಾತ್ರ ವಹಿಸಲಿದ್ದು, ಇದಕ್ಕೆ ಹೂಡಿಕೆ ದಾರರೇ ಬೆನ್ನೆಲೆಬು. ಕಾರ್ಪೋರೇಟ್‌ ವಲಯದಲ್ಲಿ ಹಣಕಾಸು ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವುದು ಈಗಿನ ಅತ್ಯಂತ ಜರೂರಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಐಸಿಎಸ್‌ ಐ ನಲ್ಲಿರುವ ಕೋರ್ಸ್‌ ಗಳು, ದೇಶಾದ್ಯಂತ ಇರುವ ಬೋಧಕ ಸಿಬ್ಬಂದಿ ಮತ್ತಿತರೆ ವಿವರಗಳನ್ನು ಸಲ್ಲಿಸುವಂತೆ ಯುಜಿಸಿ ಕೋರಿದೆ. ವಿಶ್ವ ವಿದ್ಯಾಲಯಗಳಲ್ಲಿ ಬೋಧನೆ ಮಾಡುವ ಸಾಮರ್ಥ್ಯವಿರುವವರ ಬಗ್ಗೆಯೂ ವಿವರ ನೀಡುವಂತೆ ಸೂಚಿಸಿದೆ. ದೇಶದ ವಿವಿಧ ವಿವಿಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಐಸಿಎಸ್‌ ಐ ಬೋಧಕರು ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ. ಈ ಬೆಳವಣಿಗೆಯಿಂದ ಯುಜಿಸಿ ಮತ್ತು ಐಸಿಎಸ್‌ ಐಗೆ ಗೆಲುವಿನ ವಾತಾವರಣ ನಿರ್ಮಾಣವಾಗಲಿದೆ ಎಂದರು.

 

ಐಸಿಎಸ್‌ ಐ ಇದೀಗ ಸೈನ್ಸ್‌ ಒಲಂಪಿಯಾಡ್‌ ಫೌಂಡೇಷನ್‌, ಬರ್ಡ್‌ ಎಜುಕೇಶನ್‌ ಲಿಮಿಟೆಡ್‌, ಇಂಟರ್‌ ನ್ಯಾಷನಲ್‌ ಒಲಂಪಿಯಾಡ್‌ ಫೌಂಡೇಷನ್‌ ನೊಂದಿಗೆ ಪಾಲುದಾರಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಐಐಎಂಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಲಾಗಿದೆ. ಐಸಿಎಸ್‌ ಐ ತನ್ನ ಕೋರ್ಸ್‌ ಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತಿದ್ದು, ದೇಶದ ಅಭಿವೃದ್ದಿ, ತಂತ್ರಜ್ಞಾನದ ಬೆಳವಣಿಗೆಗೆ ಅನುಗುಣವಾಗಿ ಇವು ಮೇಲ್ದರ್ಜೆಗೇರುತ್ತಿವೆ.  ಇದೀಗ ಕೃತಕ ಬುದ್ದಿಮತ್ತೆ, ಸೈಬರ್‌ ಸೆಕ್ಯೂರಿಟಿ ಮತ್ತಿತರೆ ಹೊಸ ವಿಷಯಗಳನ್ನು ಸಹ ಸೇರ್ಪಡೆ ಮಾಡಲಾಗಿದೆ. ಐಸಿಎಸ್‌ ಐ ತನ್ನ ಸಾಮಾಜಿಕ ಹೊಣೆಗಾರಿಕೆಗೂ ಸಹ ಹೆಚ್ಚಿನ ಒತ್ತು ನೀಡುತ್ತಿದ್ದು, ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುವವರು, ಅಗ್ನಿವೀರರು, ಹುತಾತ್ಮರಾದ ಯೋಧರ ಕುಟುಂಬಗಳ ಸದಸ್ಯರು ಈ ಕೋರ್ಸ್‌ ಗಳನ್ನು ಕಲಿಯಲು ಆಸಕ್ತಿ ತೋರಿದರೆ ಶೇ ೧೦೦ ರಷ್ಟು ಶುಲ್ಕ ವಿನಾಯಿತಿ ನೀಡಲಾಗುವುದು. ತಂದೆ ತಾಯಿ ಕಳೆದುಕೊಂಡ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುತ್ತಿದ್ದು, ಐಸಿಎಸ್‌ ಐನಿಂದ ಶಿಕ್ಷಣ ನಿಧಿಯನ್ನು ಸಹ ಸ್ಥಾಪಿಸಲಾಗಿದೆ ಎಂದರು.

ಐಸಿಎಸ್‌ ಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ದ್ವಾರಕನಾಥ್‌ ಚಿನ್ನೂರ್‌ ಮಾತನಾಡಿ, ಸಾಂಸ್ಥಿಕ ವ್ಯವಹಾರಗಳ ವಲಯದಲ್ಲಿ ವ್ಯಾಜ್ಯ ಇತ್ಯರ್ಥ ಮಾಡಲು ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆಯಲು ಮುಂದಾಗಿದ್ದು, ಮೊದಲ ಅಂತರರಾಷ್ಟ್ರೀಯ ಕೇಂದ್ರ ನೋಯ್ಡಾದಲ್ಲಿ ಕಳೆದ ತಿಂಗಳು ಕಾರ್ಯಾರಂಭ ಮಾಡಿದೆ. ಬೆಂಗಳೂರು, ಕೊಲ್ಕತ್ತಾ ಮತ್ತು ಹೈದ್ರಾಬಾದ್‌ ಗಳಲ್ಲೂ ಪ್ರಾದೇಶಿಕ ಎಡಿಆರ್‌ ಕೇಂದ್ರಗಳನ್ನು ತೆರೆಯಲಾಗುವುದು. ಬೆಂಗಳೂರು ಕೇಂದ್ರ ಆರಂಭಕ್ಕೆ ಮುಂದಿನ ತಿಂಗಳು ಸಿದ್ಧತೆ ಆರಂಭಿಸಲಾಗುವುದು. ಬರುವ ಆಗಸ್ಟ್‌ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ. ನ್ಯಾಯಾಲಯದ ಮೇಲಿನ ಹೊರೆ ಕಡಿಮೆ ಮಾಡಲು ಕಂಪೆನಿಗಳ ವ್ಯಾಜ್ಯಗಳನ್ನು ಇಲ್ಲಿ ಇತ್ತರ್ಥಗೊಳಿಸಲು ಒತ್ತು ನೀಡಲಾಗುವುದು ಎಂದರು.

ಐ.ಸಿ.ಎಸ್‌.ಐ ಬೆಂಗಳೂರು ಚಾಪ್ಟರ್‌ ಉಪಾಧ್ಯಕ್ಷರಾದ ದೇವಿಕ ಸತ್ಯಾನಾರಾಯಣ ಮಾತನಾಡಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಎರಡು ದಿನಗಳ  “ಮಹಿಳಾ ನಾಯಕತ್ವಕ್ಕೆ ಸ್ಪೂರ್ತಿ – ವೇಗದ ಪ್ರಗತಿ” ಎಂಬ ವಿಷಯದ ಬಗ್ಗೆ ಎರಡನೇ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಒತ್ತಡ ನಿವಾರಿಸುವ, ಮಹಿಳೆಯರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮತ್ತಿತರೆ ರಚನಾತ್ಮಕ ವಿಷಯಗಳ ಕುರಿತು ತಜ್ಞರು ಬೆಳಕು ಚೆಲ್ಲಲಿದ್ದಾರೆ ಎಂದರು.

 

ಸುದ್ದಿಗೋಷ್ಠಿಯಲ್ಲಿ ಐ.ಸಿ.ಎಸ್‌.ಐ ಉಪಾಧ್ಯಕ್ಷರಾದ ಧನಂಜಯ್‌ ಶುಕ್ಲಾ, ಐ.ಸಿ.ಎಸ್‌.ಐ ಕಾರ್ಯದರ್ಶಿ ಆಶೀಶ್‌ ಮೋಹನ್‌, ಎಸ್.ಐ.ಆರ್.ಸಿ ಅಧ್ಯಕ್ಷರಾದ ಪ್ರದೀಪ್‌ ಬಿ ಕುಲಕರ್ಣೀ, ಬೆಂಗಳೂರು ಚಾಪ್ಟರ್‌ ಅಧ್ಯಕ್ಷರಾದ ವೆಂಕಟಸುಬ್ಬರಾವ್‌ ಉಪಸ್ಥಿತರಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top