ದೇವನಹಳ್ಳಿ: ಯಾವ ರಾಜ್ಯ ಸರ್ಕಾರಕ್ಕೂ ಕಡಿಮೆಯಿಲ್ಲದಂತೆ ದಾನಿಗಳಿಂದ ಕೃಢೀಕರಿಸಿದ ಸಹಾಯದಿಂದ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹಿಯಾಗಿ ಸಂಸ್ಕಾರಯುತ ಪ್ರಜೆಯಾಗಲು ಸಹಕಾರಿಯಾದ ಶಿವಕುಮಾರ ಮಹಾಸ್ವಾಮಿಗಳು ಸರ್ವ ಕಾಲಕ್ಕೂ ಆದರ್ಶರು ಕಾಯಕ ಯೋಗಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿ ರವರ 115 ನೇ ಜನ್ಮದಿನೋತ್ಸವದ ಅಂಗವಾಗಿ ವಿಜಯಪುರ ವೃತ್ತದಲ್ಲಿನ ಶಿವಕುಮಾರ ಸ್ವಾಮಿ ಗಳವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇವರ ಆದರ್ಶ ರಾಜ್ಯಕ್ಕೆ ಸೀಮಿತವಾಗಿರಲಿಲ್ಲಾ ದೇಶ ವಿದೇಶದ ಮಹನೀಯರು ಇವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಪ್ರಪಂಚದಲ್ಲೇ ದೇವರಿಗೆ ಹೋಲಿಸಿದ ಏಕೈಕ ಮಹಾಪುರುಷ ಸಂತ ಡಾ.ಶಿವಕುಮಾರ ಸ್ವಾಮಿಗಳು ಇವರ ಸಾಧನೆಯನ್ನು ಕೇಂದ್ರ ಸರಕಾರ ಗುರುತಿಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ನೀಡಿದರೆ ಆ ಪ್ರಶಸ್ತಿಗೆ ಬೆಲೆ ಹೆಚ್ಚುತ್ತದೆ ಎಂದು ತಿಳಿಸಿದರು.

ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ರಮೇಶ್ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾದ ಹಾಗೂ ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವವನ್ನು ಪಾಲಿಸುತ್ತಾ, ಸಮಾಜದ ಬಡವರು, ದುರ್ಬಲ ಜನರಿಗೆ ಅನ್ನ, ಅಕ್ಷರ ದಾನದ ಮೂಲಕ ಸಾವಿರಾರು ಕುಟುಂಬಗಳಿಗೆ ಬೆಳಕಾದ ಪುಣ್ಯ ಪುರುಷ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಅವರ ಜೀವನಾದರ್ಶಗಳನ್ನು ಭಕ್ತಿಯಿಂದ ಸ್ಮರಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ವಿರೂಪಾಕ್ಷಯ್ಯ, ನಿರ್ದೇಶಕ ಶಾಂತಮೂರ್ತಿ,ವಿರೂಪಾಕ್ಷ ಶಾಸ್ತ್ರಿ, ಪವಾಡ ಬಂಜಕ ಹುಲಿಕಲ್ ನಟರಾಜ್,ಮಾಜಿ ಶಾಸಕ ಚಂದ್ರಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಇನ್ನು ಹಲವು ಪದಾಧಿಕಾರಿಗಳು ಸಮಾಜದ ಮುಖಂಡರು ಇದ್ದರು.
