ಶತಮಾನ ಕಂಡ ಅಪರೂಪದ ಶರಣ , ತ್ರಿವಿಧ ದಾಸೋಹಿ

ದೇವನಹಳ್ಳಿ: ಶತಾಯುಷಿ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶ ವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿದವರು. ಇವರು ನಮ್ಮ ಸಮಾಜಕ್ಕೆ ಮಾದರಿ ಪುರುಷ ಎಂದು ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೃದಯ ಭಾಗವಾದ ಗಾಂಧಿಚೌಕದಲ್ಲಿ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘ ಹಾಗೂ ಅಂಗ ಸಂಸ್ಥೆಗಳ ವತಿಯಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ 115 ನೇ ಜಯಂತಿಯನ್ನು ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿ, ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. 12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ 3, 1930 ರಲ್ಲಿ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ತಿಳಿಸಿದರು.

ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘದ ಅಧ್ಯಕ್ಷ ಬಿ.ಸಿ.ಸಿದ್ದರಾಜು ಮಾತನಾಡಿ, ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿದರು. ಹಿಂದೂಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಉಲ್ಲೇಖಿಸಲಾಗಿದೆ. ಅವರಿಗೆ ಭಾರತ ಸರ್ಕಾರವು 2005 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಕ್ಕನ ಬಳಗದ ವತಿಯಿಂದ ಶ್ರೀಗಳ ವಚನಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘದ ಗೌರವ ಅಧ್ಯಕ್ಷ ಸಿ.ಭಾಸ್ಕರ್, ಕಾರ್ಯದರ್ಶಿ ಅವಿನಾಶ್, ಸಹ ಕಾರ್ಯದರ್ಶಿ ಎ.ಮಧು, ದಾಸೋಹ ಸಮಿತಿಯ ಅಧ್ಯಕ್ಷ ರುದ್ರಮೂರ್ತಿ, ನಗರೇಶ್ವರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಸುರೇಶ್, ಮಹಂತಿನ ಮಠದ ಧರ್ಮ ಸಂಸ್ಥೆಯ ಅಧ್ಯಕ್ಷ ಪ್ರಭುದೇವ್, ಮಹಂತಿನ ಮಠದ ಧರ್ಮ ಸಂಸ್ಥೆಯ ಕಾರ್ಯದರ್ಶಿ ವಿ.ವಿಶ್ವನಾಥ್, ಸುರೇಶ್ ಬಾಬು, ಬಸವರಾಜು, ಬೇಕರಿ ಶಿವಣ್ಣ,ಮಂಜುನಾಥ್, ನಗರೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ನವನೀತ ಆರಾಧ್ಯ ಹಾಗೂ ಯುವಕ ಸಂಘದ ಸದಸ್ಯರುಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top