ಶಿರೋಳ ಎಚ್ಚರ ಸ್ವಾಮಿಗಳ ಜಾತ್ರಾ ಮಹೋತ್ಸವ ಸಂಪನ್ನ: ರೈತರು, ಯೋಧರಿಗೆ ಪಾದಪೂಜೆ ವಿಶೇಷ
ಬೆಂಗಳೂರು: ದೇಶದ ಧಾರ್ಮಿಕ ಇತಿಹಾಸದಲಿ ರೈತರ ಹಾಗೂ ಯೋಧರ ಪಾದಪೂಜೆ ಮಾಡುವ ಏಕೈಕ ಜಾತ್ರಾ ಮಹೋತ್ಸವ ಎಂಬ ಖ್ಯಾತಿ ಗಳಿಸಿರುವ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಶಿರೋಳದ ಜಗದ್ಗುರು ಯಚ್ಚರಸ್ವಾಮಿಗಳ ಜಾತ್ರಾ ಮಹೋತ್ಸವ (ಅಜ್ಜನ ಜಾತ್ರೆ) ಐದು ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ಸಹಸ್ರಾರು ಭಕ್ತರ ಸಮಾಗಮದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದ ಪೀಠಾಧ್ಯಕ್ಷರಾದ ಅಭಿನವ ಎಚ್ಚರ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವದ ಮೊದಲ ದಿನ ಲಘು ರಥೋತ್ಸವ ಎರಡನೇ ದಿನ ಮಹಾ ರಥೋತ್ಸವ ಹಾಗೂ ಬನ್ನಿಮುಡಿ ಕಾರ್ಯಕ್ರಮ ನೆರವೇರಿತು. ನಂತರ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಯೋಧರು ಹಾಗೂ ರೈತರ ಪಾದ ಪೂಜೆಯನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನೆರವೇರಿಸಿದರು. 4ನೇ ದಿನ ಶಿವಾನುಭವ ಗೋಷ್ಠಿ ಹಾಗೂ ಧಾರ್ಮಿಕ ಸಮಾರಂಭ ನೆರವೇರಿದರೆ 5 ನೇ ದಿನ ವಿಶೇಷ ಚೇತನರ ಕಲ್ಯಾಣದ ಕುರಿತಾದ ಬದುಕಲು ಅವಕಾಶ ಕೊಡಿ, ಅನುಕಂಪವಲ್ಲ ವಿಶೇಷ ಕಾರ್ಯಕ್ರಮ ನೆರವೇರಿತು.
ಕೊನೆ ದಿನವಾದ ಶನಿವಾರ ಸಮಾರೋಪ ಸಮಾರಂಭ ನಡೆದು ಶ್ರೀ ಅಭಿನವ ಎಚ್ಚರ ಸ್ವಾಮೀಜಿ ಅವರಿಗೆ ಸಮಾಜದ ಪರವಾಗಿ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನ ಕಾರ್ಯಾಧ್ಯಕ್ಷ ವಿಶ್ವಕರ್ಮ ನಾಡೋಜ ಡಾ.ಬಿ. ಎಂ ಉಮೇಶ್ ಕುಮಾರ್ ಅವರು ಗೌರವಿಸಿದರು.
ಮಠದ ಪರವಾಗಿ ಗೌರವ ಸ್ವೀಕರಿಸಿ ಮಾತನಾಡಿದ ಕೈಗಾರಿಕಾ ರತ್ನ ಉದ್ಯಮಿ ಉಮೇಶ್ ಕುಮಾರ್, ಶಿರೋಳದ ಪೂಜ್ಯ ಎಚ್ಚರ ಸ್ವಾಮಿಗಳ ಗವಿಮಠ ಜಾತ್ಯಾತೀತವಾಗಿ ಸಮಾಜದ ಅಶಕ್ತ ಸಮುದಾಯಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಜ್ಞಾನ ಸೇವೆ ಮಾಡುತ್ತಿರುವುದು ಶ್ಲಾಘನೀಯ. ರೈತರು ಹಾಗೂ ಯೋಧರಿಗೆ ಪಾದಪೂಜೆ ಮಾಡುವುದನ್ನು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಅಭಿನವ ಎಚ್ಚರ ಸ್ವಾಮಿಗಳ ಸೇವಾ ಕಾರ್ಯಕ್ಕೆ ಇಡೀ ನಾಡು ತಲೆಬಾಗುತ್ತದೆ ಎಂದು ಪ್ರಶಂಶಿಸಿದರು.
ವಿಶ್ವಕರ್ಮ ಸಮಾಜ ಇಂತಹ ಶ್ರೇಷ್ಠ ಯತಿಗಳನ್ನು ಹೊಂದಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ ಯಾಗಿದೆ ಶ್ರೀಮಠವು ಅವರ ದೂರ ದೃಷ್ಟಿ ಹಾಗೂ ಕ್ರಿಯಾತ್ಮಕ ಸಂಘಟನೆಯೊಂದಿಗೆ ಬಹಳಷ್ಟು ಭಕ್ತರನ್ನು ಹೊಂದಿದೆ. ಪೂಜ್ಯ ಎಚ್ಚರ ಸ್ವಾಮಿಗಳ ಆರಾಧನೆಯೊಂದಿಗೆ ಗವಿಲೋಭಾ ಯಜ್ಞದಲ್ಲಿ ಪಾಲ್ಗೊಂಡು ರಾಜ್ಯ ಬರದಿಂದ ಹೊರ ಬಂದು ನಾಡಿಗೆ ಒಳ್ಳೆ ಮಳೆ ಬೆಳೆಯಾಗಲಿ ಎಂದು ಆಶಿಸಿದರು