ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ರೈತರ ಹಿತ ಕಾಯುವುದು ಶತಸಿದ್ಧ: ಸಿದ್ದರಾಮಯ್ಯ ಅಭಯ

56 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಿಮ್ಮ ಒತ್ತಾಯಗಳನ್ನು ಕೇಳಲು ನಾನು ಬಂದಿದ್ದೇನೆ

ಮಂಡ್ಯ : ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂಥಾದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.

 

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದರು.‌ 

ನಾವು ಈ ವರ್ಷ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಮಳೆ ಪೂರ್ತಿ ಕೈಕೊಟ್ಟಿದೆ. ಇದರಿಂದ ಜಲಾಶಯಗಳು ತುಂಬದೆ ನಾವು ಸಂಕಷ್ಟದ ವರ್ಷದಲ್ಲಿ ಇದ್ದೇವೆ. ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ. ಪ್ರತಿ ತಿಂಗಳು ಇಷ್ಟಿಷ್ಟು ನೀರು ಬಿಡಬೇಕು ಎನ್ನುವ ಆದೇಶ ಇದೆ. ನಾವು ಕಾವೇರಿ ಪ್ರಾಧಿಕಾರ ಮತ್ತು ಸಮಿತಿ ಎದುರು ನೀರಿಲ್ಲ, ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ವಾದವನ್ನು ಬಲವಾಗಿ ಮಂಡಿಸಿದ್ದೇವೆ. ಆದರೂ ಮೊದಲು 5000 ಕ್ಯೂಸೆಕ್ಸ್ ನೀರು ಬಿಡಲು ಹೇಳಿದರು, ಬಳಿಕ 3000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂತು. ಅದಕ್ಕೂ ನಾವು ಒಪ್ಪಲಿಲ್ಲ. ಈಗ ನೆನ್ನೆ ದಿನ 2600 ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ. ಆದರೆ ನಾವು ಕುಡಿಯುವ ನೀರಿಗೆ ಮತ್ತು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ. ಮುಂಗಾರು ಬೆಳೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇವೆ. ನಾನೂ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ. ನಾವೂ ಅಚ್ಚುಕಟ್ಟೆ ಪ್ರದೇಶದಲ್ಲೇ ಇದ್ದೇವೆ. ಆದ್ದರಿಂದ ರೈತರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಿಮ್ಮ ಹಿತ ಕಾಯಲು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ. ನಾವು ಕೇವಲ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವವರಲ್ಲ ಎಂದು ಸ್ಪಷ್ಟವಾಗಿ ನುಡಿದರು.

ರೈತರ ಹಿತ ಕಾಯಲು ಗಂಭೀರವಾದ, ಪ್ರಾಯೋಗಿಕವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.  ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ರೂ ಬಿಡುಗಡೆ ಮಾಡಿದ್ದೇವೆ. ನಾವು ನಿಮ್ಮ ಪರವಾಗಿ ಇರುವವರು. ಅನುಮಾನ ಬೇಡವೇ ಬೇಡ ಎಂದರು.

 

ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರಾದ ರವಿ ಗಣಿಗ, ದಿನೇಶ್ ಗೂಳಿಗೌಡ, ನರೇಂದ್ರಸ್ವಾಮಿ ಸೇರಿದಂತೆ ಹಲವು ಮಂದಿ ನಾಯಕರು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top