ಪ್ರಭಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಪೂರಕ: ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ:ಸಿ.ಎಂ

JD “S” ಅಲ್ಲ ಈಗ JD “C”

ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು: ಯಾಕ್ರೀ ಇದೆಲ್ಲಾ: ಸಿಎಂ

ಬೆಂಗಳೂರು : ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು. ಹೀಗಿದ್ದೂ ಯಾಕ್ರೀ ಇದೆಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಶ್ರೀನಿವಾಸ್ ಪೂಜಾರಿ ಮತ್ತು ರವಿಕುಮಾರ್ ಅವರನ್ನು ಪ್ರಶ್ನಿಸಿದರು.

ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಈ ರೀತಿ ಪ್ರಶ್ನಿಸಿದರು.

 

ಸಂವಿಧಾನ ಜಾರಿಯ ಮುನ್ನಾ ದಿನ ಅಂಬೇಡ್ಕರ್ ಅವರು ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ವಿವರವಾಗಿ ಮಾತನಾಡುತ್ತಿದ್ದರು. ಈ ವೇಳೆ ತಮ್ಮ ಮಾತಿಗೆ ಮಧ್ಯ ಪ್ರವೇಶಿಸಿದ ಪೂಜಾರ್ ಮತ್ತು ರವಿಕುಮಾರ್ ಅವರಿಗೆ ನಾವೂ ಶೂದ್ರರು, ನೀವೂ ಶೂದ್ರರು ಎನ್ನುವುದನ್ನು ನೆನಪಿಸಿದರು. 

ಪ್ರಭಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಪೂರಕ. ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮಾತನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಸದಸ್ಯ ಬೋಜೇಗೌಡರು ಕುವೆಂಪು ಅವರ ಮಾತನ್ನು ಮುಂದುವರೆಸಿದರು.

ಈ ವೇಳೆ ಮುಖ್ಯಮಂತ್ರಿಗಳು, ” ಕುವೆಂಪು ಆಶಯ ಇಟ್ಟುಕೊಂಡು ಇನ್ನೂ ಬಿಜೆಪಿ-ಜೆಡಿಎಸ್ ಜತೆಗಿದ್ದೀರಿ ಏಕೆ ಎಂದು ಪ್ರಶ್ನಿಸಿದರು. ಜತೆಗೆ ಈಗ ನಿಮ್ಮದು JD “S” ಅಲ್ಲ ಈಗ JD “C” ಆಗಿದೆ ಅಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು C ಫಾರ್ ಕಮ್ಯುನಲ್ ಎಂದು ಟೇಬಲ್ ಬಡಿದರು.

 

ಈ ಮಧ್ಯೆ ಬಿಜೆಪಿಯ ರವಿಕುಮಾರ್ ಅವರು ಪರಿಷತ್ ವಿರೋಧ ಪಕ್ಷದ ನಾಯಕ ಪೂಜಾರಿ ಅವರಿಗೆ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರವಿಕುಮಾರ್ ಅವರೇ RSS ಹೇಳಿಕೊಟ್ಟಿದ್ದನ್ನೆಲ್ಲಾ ನೀವು ಆಮೇಲೆ ಹೇಳಿಕೊಡಿ. ನಾನು ಮಾತು ಮುಗಿಸಲು ಬಿಡಿ  ಎಂದರು. 

ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು: ಸಿ.ಎಂ

ರಾಜ್ಯಕ್ಕೆ-ರಾಜ್ಯದ ಜನರ ತೆರಿಗೆಯ ಪಾಲಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ತಪ್ಪಾ: ಸಿ.ಎಂ.ಪ್ರಶ್ನೆ 

ಪ್ರಧಾನಿ ಮೋದಿಯವರಂತೂ ಸುಳ್ಳು ಹೇಳುವುದು ಮೂಮೂಲು. ಬಿಜೆಪಿ ಸದಸ್ಯರೂ ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ: ಕಾಂಗ್ರೆಸ್ ಸದಸ್ಯರ ಆಕ್ರೋಶ

ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು ಎಂದು ಮುಖ್ಯಮಂತ್ರಿಗಳು ಪುನರುಚ್ಛರಿಸಿದರು. 

ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದರು.‌

ನಮ್ಮ ಸಂವಿಧಾನ ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ಕೋ ಆಪರೇಟಿವ್ ಫೆಡರಿಲಿಸಂಎಂದು ಹೇಳುತ್ತಾರೆ. ಆದರೆ ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ ಎನ್ನುತ್ತಾ ಕೇಂದ್ರದಿಂದ ರಾಜ್ಯಕ್ಕೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ.  ತೆರಿಗೆ ಹಂಚಿಕೆಯಲ್ಲಿ 2023-24ಕ್ಕೆ 37252 ಕೋಟಿ ರೂ. ಬರುತ್ತಿದೆ. ಕೇಂದ್ರ  ಪುರಸ್ಕೃತ ಯೋಜನೆಗಳಿಂದ 13005 ಕೋಟಿ , ಒಟ್ಟು 50257 ಕೋಟಿ ಮಾತ್ರ ರೂ. ಬರುತ್ತಿದೆ.          ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ದವಾಗಿ ಹೆಚ್ಚಾಗಬೇಕು. ಆದರೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋದಂತೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು, ಕನ್ನಡಿಗರ ಹಕ್ಕಿನ ತೆರಿಗೆ ಮತ್ತು ಅನುದಾನದ ಪಾಲು ಕಡಿಮೆ ಆಗುತ್ತಿದೆ. ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ರಾಜ್ಯ ಬಲಿಷ್ಠವಾದರೆ, ಕೇಂದ್ರ ಬಲಿಷ್ಠವಾಗುತ್ತದೆ ಎಂದರು.

ರಾಜ್ಯಕ್ಕೆ ಮತ್ತು ರಾಜ್ಯದ ಜನತೆಯ ಪಾಲಿಗೆ ಆಗುತ್ತಿರುವ ಅನ್ಯಾಯವನ್ನು ನಾವು ಪ್ರಶ್ನಿಸಿದರೆ, ಪ್ರಧಾನಿ ಮೋದಿ ಅವರು ದೇಶ ವಿಭಜನೆಯ ಮಾತಾಡುತ್ತೇವೆ ಎಂದರು.

 

ಪ್ರಧಾನಿ ಅವರ  ಮಾತನ್ನು ಪ್ರಸ್ತಾಪಿಸಿದ ಬಳಿಕ ಬಿಜೆಪಿ ಸದಸ್ಯರು ಜೋರು ಧ್ವನಿಯಲ್ಲಿ ಪ್ರಧಾನಿ ಅವರು ಹಾಗೆ ಹೇಳಿಯೇ ಇಲ್ಲ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ರಾಥೋಡ್ ಅವರು, ಪ್ರಧಾನಿ ಮೋದಿಯವರಂತೂ ಸುಳ್ಳು ಹೇಳುವುದು ಮೂಮೂಲು. ಬಿಜೆಪಿ ಸದಸ್ಯರೂ ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ.

ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ: ಸಿ.ಎಂ

ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ UPA ಸರ್ಕಾರದ ಬಗ್ಗೆ ಮೋದಿ ಅವರು ಹಿಂದೆ ಹೇಳಿದ್ದ ಮಾತನ್ನು ಉಲ್ಲೇಖಿಸಿ ತಿರುಗೇಟು ನೀಡಿದ ಸಿ.ಎಂ.ಸಿದ್ದರಾಮಯ್ಯ

ಮೋದಿ ಅವರು ಸಿ.ಎಂ ಆಗಿದ್ದಾಗ ಗುಜರಾತ್ ರಾಜ್ಯಕ್ಕೆ ಶೇ50 ರಷ್ಟು ತೆರಿಗೆ ಪಾಲು ಕೇಳಿದ್ದರು. ಈಗ ಅವರು ಪ್ರಧಾನಿ ಆಗಿ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ 12 ರಷ್ಟು ವಾಪಾಸ್ ಕೊಡುತ್ತಿದ್ದಾರೆ: ಮೋದಿ ಅವರ ಮಾತು ಮತ್ತು ವರ್ತನೆಗೆ ಅಂಕಿ ಅಂಶಗಳ ಕನ್ನಡಿ ಹಿಡಿದ ಸಿ.ಎಂ.ಸಿದ್ದರಾಮಯ್ಯ

ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.

ವಿಧಾನ‌ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವಾಗ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸುವಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ವಾಗ್ವಾದ ನಡೆಯಿತು.

ಕೇಂದ್ರದಲ್ಲಿ UPA ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ  ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

 

ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ. ಮೋದಿ ಅವರು ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು. 

ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ ವಾಪಾಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರ, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ  ಬರುತ್ತಿರುವ ಹಣದ ಪಾಲು ಅನ್ಯಾಯವಾದುದು.2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ  51000 ಕೋಟಿ ಮಾತ್ರ ಬಂತು.  2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31734ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್ ಗೆ , ರಾಜ್ಯಕ್ಕೆ 48589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 4181232 ಕೋಟಿ , ರಾಜ್ಯಕ್ಕೆ  53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50257 ಕೋಟಿ ಮಾತ್ರ.  2024-25ರಲ್ಲಿ ರಾಜ್ಯಕ್ಕೆ 59785 ಕೋಟಿ ಬರುತ್ತದೆ ಎಂದು ರಾಜ್ಯಕ್ಕೆ ಆಗುತ್ಯಲೇ ಇರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

 

          ಈ ರೀತಿ ಬಜೆಟ್ ಗಾತ್ರ ದೊಡ್ಡದಾದರೂ, ನಮಗೆ ಬರುತ್ತಿರುವ ಪಾಲು ಕಡಿಮೆಯಾಗುತ್ತಿದೆ. ಪ್ರಧಾನಿ ಅವರು ರಾಷ್ಟ್ರಪತಿಗಳ ಭಾಷಣದ ಚರ್ಚೆಗೆ ಉತ್ತರಿಸುತ್ತಾ ರಾಜ್ಯದ ತೆರಿಗೆ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ದೇಶದ ಐಕ್ಯತೆಗೆ ಅಪಾಯವೊಡ್ಡುತ್ತದೆಎಂದಿದ್ದರು. ಅದೇ ಪ್ರಧಾನಿ ಮಂತ್ರಿಗಳು ಗುಜರಾತಿನ ಸಿಎಂ ಆಗಿದ್ದಾಗ  2012 ರಲ್ಲಿ  ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು. ಗುಜರಾತ್ ರಾಜ್ಯ ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೆಎಂದಿದ್ದರು. ಅಂದಿನ ಕೇಂದ್ರಕ್ಕೆ ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆಎಂದು ಮೋದಿ ಅವರು ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ ಎಂದು ಅಂದಿನ ಮೋದಿಯವರ ಮಾತನ್ನೇ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top