ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ : ಪಿವಿಬಿಎಸ್ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್

ದೇವನಹಳ್ಳಿ: ಸಂಘಟನೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವುದರ ಜತೆಗೆ ಸಮಾಜದಲ್ಲಿ ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾಗುತ್ತಿರುವವರ ಪರವಾಗಿ ನಿರಂತರವಾಗಿ ಹೋರಾಡಬೇಕು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ನೇಮಿಸಿರುವ ಸಂಘಟನೆಯ ಕೆಲ ಪದಾಧಿಕಾರಿಗಳ ಬೇಜಾವಾಬ್ದಾರಿತನದಿಂದ ಸಂಘಟನೆಯು ಹೋರಾಟಗಳನ್ನು ರೂಪಿಸದೆ ತಟಸ್ಥವಾಗಿದೆ. ಕೆಲವರು ಸಂಘಟನೆಯಲ್ಲಿದ್ದುಕೊಂಡು ಸಂಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುತ್ತದೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಪದಾಧಿಕಾರಿಗಳನ್ನು ವಜಾಗೊಳಿಸಿ ನೂತನ ಕಾರ್ಯಕಾರಿ ಸಮಿತಿ ರಚಿಸಿ, ನಿಷ್ಠಾವಂತ ಸಂಘಟನೆಯ ಮನೋಭಾವ ಉಳ್ಳ ನಾಯಕರುಗಳನ್ನು ನೇಮಿಸಲು ಸಂಘದ ರಾಜ್ಯ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸಮಿತಿಯ ಸರ್ವ ಸದಸ್ಯರ ಸೇವಾ ಶುಲ್ಕ ಮರು ಪಾವತಿಸದಿದ್ದರಿಂದ ಸರ್ವ ಸದಸ್ಯರ ಸದಸ್ಯತ್ವ ಶುಲ್ಕವನ್ನು ರದ್ದುಗೊಳಿಸಿ, ಹೊಸದಾಗಿ ರಾಜ್ಯ ಸಮಿತಿ ಸದಸ್ಯರ ತೀರ್ಮಾನದಂತೆ ಕೆಲ ನಿಯಮಗಳನ್ನು ಅಳವಡಿಸಿಕೊಂಡು ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸದಸ್ಯರ ಮತ್ತು ಕುಟುಂಬದವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಕಾರ್ಯ ಮಾಡಲಾಗುತ್ತದೆ.

2022ನೇ ಸಾಲಿನಿಂದ ನಮ್ಮ ಸಂಘಟನೆ ಮತ್ತು ಸಂಸ್ಥೆಯಲ್ಲಿ ಸಕ್ರಿಯವಾಗಿರುವಂತಹ ಕುಟುಂಬದ ಸದಸ್ಯರಲ್ಲಿ ಸ್ವಾಭಾವಿಕವಾಗಿ ಅಥವಾ ಆಕಸ್ಮಿಕವಾಗಿ ಮರಣಹೊಂದಿದರೆ 10ಸಾವಿರ ರೂ.ಗಳನ್ನು ಸಹಾಯಧನವನ್ನು ನೀಡಲಾಗುವುದು. ಸಮಿತಿಯ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ನೀಡುವ ಭರವಸೆ ನೀಡಲಾಗಿದೆ. ಈ ಹಿಂದಿನ ಸದಸ್ಯತ್ವ ಹೊಂದಿರುವ ಸದಸ್ಯರುಗಳನ್ನು ವಜಾಗೊಳಿಸಲಾಗಿದ್ದು, ಸಂಘಟನೆಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರುವ ಸದಸ್ಯರಿಗೂ ಸಂಘಟನೆಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಸರ್ವಾನುಮತದಿಂದ ರಾಜ್ಯ ಸಮಿತಿ ತೀರ್ಮಾನದಂತೆ ನೂತನ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದರು. ನೂತನ ಪದಾಧಿಕಾರಿಗಳ ಆಯ್ಕೆ: ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಮುನೀಂದ್ರ, ನಗರ ಅಧ್ಯಕ್ಷರಾಗಿ ಶ್ರೀನಿವಾಸ್, ದೇವನಹಳ್ಳಿ ತಾಲೂಕು ಅಧ್ಯಕ್ಷರಾಗಿ ಎಂ.ಮನೋಹರ್, ಉಪಾಧ್ಯಕ್ಷರಾಗಿ ಶಿವಾನಂದ್, ದೊಡ್ಡಬಳ್ಳಾಪುರ ತಾಲೂಕು ಸಂಘಟನಾ ಕಾರ್ಯದರ್ಶಿ ಮೈಲಾರಪ್ಪ.ಸಿ, ಹಿಂದುಳಿದ ವರ್ಗ ಜಿಲ್ಲಾಧ್ಯಕ್ಷರಾಗಿ ಪಿ.ಗಣೇಶ್, ದೊಡ್ಡಬಳ್ಳಾಪುರ ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಅವರನ್ನು ಬಹುಜನ ಸೇವಾಭಿವೃದ್ಧಿ ಸಂಸ್ಥೆ ಮತ್ತು ಪಿವಿಬಿಎಸ್ ಸಂಯುಕ್ತಾಶ್ರಯದಲ್ಲಿ ಪ್ರಭಾರ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಚನ್ನಗಿರಿಯಪ್ಪ, ಉಪಾಧ್ಯಕ್ಷ ಎಂ.ಮುನಿಕೃಷ್ಣಯ್ಯ, ಕಾರ್ಯದರ್ಶಿ ಎಂ.ಸುರೇಶ್ ಇದ್ದರು.

Leave a Comment

Your email address will not be published. Required fields are marked *

Translate »
Scroll to Top