ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8ಸಾವಿರ ಹೆಕ್ಟೇರು ಬೆಳೆ ನಾಶ ಶೀಘ್ರ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿಕೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳನ್ನು ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿಗಳು ವರದಿ ತಯಾರಿಸಿದ್ದು, ಸುಮಾರು 8ಸಾವಿರ ಹೆ. ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. 1500 ಮನೆಗಳು ಹಾನಿಯಾಗಿವೆ. ಮನೆಗಳ ಶೇಕಡವಾರು ಹಾನಿಯಾಗುವುದರ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲುದಾರಿಯಲ್ಲಿ ಹಂಚಿಕೆ ಮಾಡುವಂತಹದ್ದು, ಎಲ್ಲಾ ಮಾಹಿತಿಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಹಿತಿ ಪಡೆಯಲಾಗಿದೆ. ಅಂದಾಜು 120ಕೋಟಿ ರೂ.ಗಳ ವರೆಗೆ ಬೆಳೆ ಹಾನಿಯಾಗಿರುತ್ತದೆ. ಈಗಾಗಲೇ 5ಕೋಟಿ ರೂ.ಗಳವರೆಗೆ ರೈತರ ಖಾತೆಗಳಿಗೆ ಜಮೆ ಆಗಿದೆ. ಕೇಂದ್ರ ಸರಕಾರ ಆದಷ್ಟು ಬೇಗ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಹಾನಿಗೊಳಗಾದ ರೈತರಿಗೆ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುವುದಾಗಿ ತಿಳಿಸಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರು ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದಿದ್ದು, ಯಾವುದೇ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿಲ್ಲ. ಹಾಗಾಗೀ ಈ ಚುನಾವಣೆಯಲ್ಲಿ ಯಾರು ಯಾರಿಗೆ ಮತ ನೀಡುತ್ತಾರೆಂಬುವುದು ಹೇಳಲು ಸಾಧ್ಯವಿಲ್ಲ. 8 ತಾಲೂಕುಗಳ ಪೈಕಿ 5 ತಾಲೂಕುಗಳಲ್ಲಿ ಜೆಡಿಎಸ್ ಶಾಸಕರು, 3 ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ನಮ್ಮ ಪಕ್ಷದ ಶಾಸಕರಿಲ್ಲ. ನಮ್ಮ ಪಕ್ಷ ಬೆಂಬಲಿತ ಸದಸ್ಯರು 400ಕ್ಕೂ ಹೆಚ್ಚು ಮಂದಿ ಇದ್ದರೂ ಮತ ನೀಡಿಲ್ಲ. ಇದಕ್ಕೆ ಮೂಲ ಕಾರಣ ಚುನಾವಣೆಯಲ್ಲಿ ವಿರೋಧ ಪಕ್ಷದವರು ಹಣದ ಹೊಳೆಯನ್ನೇ ಹರಿಸಿದ್ದಾರೆ. ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಿದ್ದಾರೆ.

ಅಸಹಾಯಕತೆ ತೋಡಿಕೊಂಡ ಸಚಿವ: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ 1800ಕ್ಕೂ ಹೆಚ್ಚು ನಮ್ಮ ಪಕ್ಷದ ಬೆಂಬಲಿತ ಸದಸ್ಯರಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಎಂ.ಟಿ.ಬಿ.ನಾಗರಾಜ್ ಹಾಲಿ ವಿಧಾನಪರಿಷತ್ ಸದಸ್ಯ ಎಸ್.ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದೆ ಆದರೆ, ಬದಲಾದ ಸನ್ನಿವೇಶಗಳಲ್ಲಿ ನಮ್ಮ ಪಕ್ಷಕ್ಕೆ ನಿರೀಕ್ಷಿತ ಮತಗಳು ಬರಲಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಕೂಡ ಸೋತಿದ್ದೇನೆ ಎಂದು ಅಸಹಾಯಕತೆ ತೋಡಕೊಂಡರು.

ಕನ್ನಡ ಬಾವುಟ ಸುಟ್ಟ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ: ಬೆಳಗಾವಿಯಲ್ಲಿ ಕನ್ನಡ ಬಾವುಟವನ್ನು ಸುಟ್ಟುಹಾಕಿರುವ ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದು ಸಾಧ್ಯವಿಲ್ಲ. ನಮ್ಮ ರಾಜ್ಯದ ಗೃಹಸಚಿವ ಬೆಳಗಾವಿಯಲ್ಲಿಯೇ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕಿಡಿಗೇಡಿಗಳ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸುವ ವಿಶ್ವಾಸವಿದೆ ಎಂದು ಹೇಳಿದರು.

ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಒತ್ತಾಯ: ರಾಜ್ಯದಲ್ಲಿನ ಹಲವಾರು ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ಧರ್ಜೆಗೆ ಏರಿಸಲು ಬೇಡಿಕೆ ಬಂದಿದ್ದು, ಜನಸಂಖ್ಯೆ ಆಧಾರಿತವಾಗಿ 28 ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮಾಡಲಾಗಿದೆ. ಉಳಿದ 15 ಪಂಚಾಯಿತಿಗಳನ್ನು 2011ರ ಜನಗಣತಿ ಹಾಗೂ ಇತ್ತೀಚೆಗೆ ನಡೆದಿರುವ ಜನಸಂಖ್ಯೆ ಗಣತಿ ಆಧಾರಿಸಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಗಳನ್ನಾಗಿ ಮಾಡಿ ಅಭಿವೃದ್ಧಿಗೆ ಸಹಕಾರ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ.ಇ.ರವಿಕುಮಾರ್, ಜಿಪಂ ಸಿಇಒ ರೇವಣಪ್ಪ.ಕೆ, ತಹಶೀಲ್ದಾರ್‌ಗಳಾದ ಅನಿಲ್‌ಕುಮಾರ್ ಅರೋಲಿಕರ್, ಮಂಜುನಾಥ್, ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ, ತಾಲೂಕು ಸಹಾಯಕ ನಿರ್ದೇಶಕಿ ವೀಣಾ, ತಾಪಂ ಇಒ ಎಚ್.ಡಿ.ವಸಂತ್‌ಕುಮಾರ್, ಆರ್‌ಐ ಚಿದಾನಂದ್, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top