ರಾಜ್ಯ ಸರಕಾರದ ಐಟಿ ವಿರೋಧಿ ನೀತಿ: ಎಸ್. ದತ್ತಾತ್ರಿ

ಬೆಂಗಳೂರು: ಕರ್ನಾಟಕ ಸರಕಾರವು ಐಟಿ ಕ್ಷೇತ್ರಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಇವತ್ತು ಎಲ್ಲ ಐಟಿ ಬಾಂಧವರ ಸ್ಥಿತಿ ಚಿಂತಾಜನಕವಾಗಿದೆ. ಇದು ಅತ್ಯಂತ ಖೇದಕರ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ಅವರು ಟೀಕಿಸಿದರು.

          ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ.ರಿಜಾಯ್ಸ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿಗೆ ಭಯೋತ್ಪಾದಕರು ಅತಿ ಸುಲಭವಾಗಿ ಬರುತ್ತಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದಿಂದ ಆತಂಕ ಹೆಚ್ಚಿದೆ. ಬೆಂಗಳೂರು ಭಯೋತ್ಪಾದಕರ ಸ್ಥಳವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜೊತೆಗೆ ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ನೀರಿನ ಬರದ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

          ಉದ್ಯಮಿಗಳು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಬಂದರೆ ಎಲ್ಲ ಸಹಕಾರ ಕೊಡುವುದಾಗಿ ಕೇರಳದ ಸಚಿವರು ಆಹ್ವಾನ ಕೊಟ್ಟಿದ್ದಾರೆ. ರಾಜ್ಯ ಸರಕಾರವು ನಿರ್ಲಕ್ಷ್ಯ ವಹಿಸಿದ್ದು, ಕುಡಿಯುವ ನೀರಿನ ಕುರಿತು ಸಮರ್ಪಕ ನೀತಿ ಇಲ್ಲದೇ ಇರುವುದೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು. ನೀರಿನ ಟ್ಯಾಂಕರ್‍ಗಳಿಗೂ ಸರಿಯಾದ ನೀತಿ ರೂಪಿಸಿಲ್ಲ; ಐಟಿ ಉದ್ಯೋಗಿಗಳಿರುವ ಫ್ಲ್ಯಾಟ್‍ಗಳಲ್ಲಿ ಇವತ್ತು ನೀರು ಸಿಗುತ್ತಿಲ್ಲ ಎಂದು ನೋವಿನಿಂದ ನುಡಿದರು.

          ಕೊಳವೆಬಾವಿ ಕೊರೆಸುವ ದರವೂ ಬಹುತೇಕ ದುಪ್ಪಟ್ಟಾಗಿದೆ. ಈ ವಿಷಯದಲ್ಲೂ ಸರಿಯಾದ ನೀತಿ ಇಲ್ಲ. ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದೆ, ಐಟಿ ಉದ್ಯೋಗಿಗಳು ರಸ್ತೆಯಲ್ಲಿ ಕಾಯುವ ದುಸ್ಥಿತಿ ಬಂದಿದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಟ್ರಾಫಿಕ್ ಸಮಸ್ಯೆ ಇರುವಲ್ಲಿಗೆ ತೆರಳಿ, ಅಲ್ಲಿ ನಿಂತು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದ್ದರು ಎಂದು ತಿಳಿಸಿದರು.

 

          ಬೆಂಗಳೂರು ಅಭಿವೃದ್ಧಿ ಸಚಿವರು ಎಂದು ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರು ಗುತ್ತಿಗೆ ನೀಡಿದ್ದಾರೆ. ಆದರೆ, ಅವರು ಒಂದು ದಿನವೂ ರಸ್ತೆಗೆ ಇಳಿದಿಲ್ಲ. ಇದರಿಂದ ಸಾಫ್ಟ್‍ವೇರ್ ಉದ್ಯಮಗಳು ಬೇರೆಡೆಗೆ ತೆರಳುವ ಸಾಧ್ಯತೆ ಇದೆಯೇ ಎಂಬ ಯೋಚನೆ ಕಾಡುತ್ತಿದೆ ಎಂದರು.

          ಸಾಫ್ಟ್‍ವೇರ್ ರಂಗದ ಕುರಿತು ರಾಜ್ಯ ಸರಕಾರದ ನಿರ್ಲಕ್ಷ್ಯ..

          ಗರಿಷ್ಠ ಆದಾಯ ನೀಡುವ ಸಾಫ್ಟ್‍ವೇರ್ ರಂಗದ ಕುರಿತು ರಾಜ್ಯ ಸರಕಾರ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂದು ದತ್ತಾತ್ರಿ ಅವರು ಆರೋಪಿಸಿದರು. ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಫ್ಟ್‍ವೇರ್ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಈ ಕ್ಷೇತ್ರದ ಕುರಿತು ಸಚಿವರು ಒಂದು ಪೈಸೆ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.

          ಅವರು ಸೋಷಿಯಲ್ ಮೀಡಿಯ ಮತ್ತು ಟ್ವೀಟ್ ಸಚಿವರಾಗಿ ಬದಲಾಗಿದ್ದಾರೆ. ಇದು ಅತ್ಯಂತ ಖೇದದ ಸಂಗತಿ ಎಂದ ಅವರು, ಸಚಿವರು ಬಿಜೆಪಿ, ಆರೆಸ್ಸೆಸ್ ಸಿದ್ಧಾಂತಗಳ ಬಗ್ಗೆ ವೈಯಕ್ತಿಕ ಟೀಕೆ ಮೂಲಕ ಕಾಲಹರಣ ಮಾಡುತ್ತಾರೆಯೇ ವಿನಾ ಸಾಫ್ಟ್‍ವೇರ್ ಕಂಪೆನಿಗಳ ಸಮಸ್ಯೆ ಕುರಿತು ಒಂದೇ ಒಂದು ಮಾತನಾಡಿಲ್ಲ ಎಂದು ಟೀಕಿಸಿದರು.

          ಬೆಂಗಳೂರು ಇಡೀ ವಿಶ್ವದ ಅತಿ ದೊಡ್ಡ ಐ.ಟಿ. ಹಬ್ ಎಂದು ಗುರುತಿಸಿಕೊಂಡಿದೆ. ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ 54 ಲಕ್ಷ ಉದ್ಯೋಗಿಗಳಿದ್ದಾರೆ. ಆ ಪೈಕಿ 18 ಲಕ್ಷ ಜನ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

          ಹೈದರಾಬಾದ್‍ನಲ್ಲಿ 9 ಲಕ್ಷ ಮತ್ತು ಚೆನ್ನೈನಲ್ಲಿ 10 ಲಕ್ಷ ಉದ್ಯೋಗಿಗಳಿದ್ದಾರೆ. ಇಡೀ ಭಾರತದಲ್ಲಿ ಬೆಂಗಳೂರನ್ನು ದೇಶದ ಐಟಿ ಹಬ್, ಐಟಿ ರಾಜಧಾನಿ ಎಂದು ಕರೆಯುತ್ತಿದ್ದಾರೆ. ಭಾರತದ ಜಿಡಿಪಿಯಲ್ಲೂ ಬೆಂಗಳೂರಿನ ಐಟಿ ಹಬ್‍ನ ಕೊಡುಗೆ ಅತ್ಯಂತ ಮಹತ್ವವುಳ್ಳದ್ದು ಎಂದರು.

          ಕಳೆದ ವರ್ಷ 5.21 ಲಕ್ಷ ಕೋಟಿ ಆದಾಯವನ್ನು ಅದು ಪಡೆದಿತ್ತು. ಒಟ್ಟು ಭಾರತದ ರಫ್ತಿನಲ್ಲಿ ಶೇ 12ರಷ್ಟು ಪಾಲು ಕರ್ನಾಟಕದ ಐಟಿ ಹಬ್‍ನದು. ವಿಶ್ವಾದ್ಯಂತ ಪ್ರಸಿದ್ಧಿ ಪಡೆದ ಟಿಸಿಎಸ್, ವಿಪ್ರೋ, ಇನ್‍ಫೋಸಿಸ್, ಮೈಂಡ್‍ಟ್ರೀ ಮತ್ತಿತರ 10-12 ಕಂಪೆನಿಗಳು ಸೇರಿ 67 ಸಾವಿರ ಕಂಪೆನಿಗಳು ಬೆಂಗಳೂರಿನಲ್ಲಿ ನೆಲೆಸಿವೆ ಎಂದು ತಿಳಿಸಿದರು. ಇವು 18 ಲಕ್ಷ ಉದ್ಯೋಗಿಗಳಿಗೆ ಉದ್ಯೋಗ ಕೊಟ್ಟಿವೆ; ಇದು ಹೆಮ್ಮೆಯ ವಿಚಾರ ಎಂದು ಹೇಳಿದರು.

 

          ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿರಣ್ ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯ್ ಕುಮಾರ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್ ಜಿ.ಎಸ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top