ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರದ ಹೊಸ ಕಾರ್ಯಸೂಚಿ

ಬೆಂಗಳೂರು,ಜ,5 : ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ವೈರಸ್ ಒಮಿಕ್ರಾನ್ ವೈರಾಣು ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರ ಹೊಸ ಕಾರ್ಯಸೂಚಿಯನ್ನು ಹೊರಡಿಸಿದೆ. ಸಚಿವಾಲಯದ ಮುಖ್ಯಮಂತ್ರಿ ಕಚೇರಿ, ಸಚಿವರು ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾಗಿರುವ, ಭೇಟಿಗೆ ಆಗಮಿಸುವ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ 2 ನೇ ಡೋಸ್ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಪ್ರಮಾಣ ಪತ್ರವನ್ನು ಹೊಂದಿದವರು ಮಾತ್ರ ಕಚೇರಿಗೆ ಆಗಮಿಸಬೇಕು. ಒಂದು ವೇಳೆ ಯಾವುದೇ ಸಿಬ್ಬಂದಿ ಗೈರು ಹಾಜರಾದರೆ ವೇತನ ರಹಿತ ರಜೆ ಎಂದು ಪರಿಗಣಿಸುವುದಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.


ಸಾಮಾನ್ಯ ಭೇಟಿಗೆ ನಿರ್ಬಂಧ : ಸಾಮಾನ್ಯ ಭೇಟಿಗೆ ಪ್ರವೇಶವನ್ನು ತಕ್ಷಣ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ಸಚಿವಾಲಯದ ಕಟ್ಟಡಗಳಿಗೆ ಆಗಮಿಸುವವರು ಪರ್ವಾನುಮತಿ ಪತ್ರ, ಸಭಾಸೂಚನ ಪತ್ರ ಹಾಗೂ ಎರಡನೇ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಖಚಿತಪಡಿಸಿಕೊಂಡು ನಂತರವೇ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೂಚಿಸಿದ್ದಾರೆ. ಸಚಿವಾಲಯದಲ್ಲಿ ಅಗತ್ಯ ಸೇವೆ ಒದಗಿಸುತ್ತಿರುವ ಎಲ್ಲ ವರ್ಗದ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು, ಬೇರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ ವೃಂದದ ಎಲ್ಲಾ ಅಧಿಕಾರಿಗಳು ಕಚೇರಿಗೆ ಹಾಜರಾಗಬೇಕು. ಇನ್ನು ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗಳು ಶೇ.50ರಷ್ಟು ಸಿಬ್ಬಂದಿಗಳು ರೋಟೆಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಬರಬೇಕು. ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಇಲಾಖೆಯ ಕಾರ್ಯದರ್ಶಿಯವರು. ಮುಖ್ಯಸ್ಥರು ಇಚ್ಚಿಸಿದಲ್ಲಿ ಅವರು ಬಯಸುವ ಅಧಿಕಾರಿ, ನೌಕರರು ಯಾವುದೇ ಕಾರಣ ನೀಡದೆ ಕಚೇರಿಗೆ ಬರಬೇಕು. ಕೋವಿಡ್ ಕರ್ತವ್ಯ ಕ್ಕೆ ನಿಯೋಜಿಸಿರುವ ಅಧಿಕಾರಿಗಳು/ಸಿಬ್ಬಂದಿಗಳು ತಪ್ಪದೆ ಕರ್ತವ್ಯಕ್ಕೆ ಹಾಜರಿರಬೇಕು.
ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ / ಸಿಬ್ಬಂದಿಗಳು ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಸುತ್ತೋಲೆಯು ಜನವರಿ 18 ರವರೆಗೆ ಅಸ್ತಿತ್ವದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.


ವಿಧಾನ ಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ : ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಒಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಕಂಡುಬಂದಿದೆ. ಸಚಿವಾಲಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ / ಸಿಬ್ಬಂದಿಗಳ ಆರೋಗ್ಯ ಮತ್ತು ಆಡಳಿತದ ಹಿತದೃಷ್ಟಿಯಿಂದ ವಿಧಾನ ಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಆದುದರಿಂದ ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ಈ ಸಂಬಂಧ ಪೋಲಿಸ್ ಇಲಾಖೆ, ಸ್ವಾಗತ ಕೇಂದ್ರ ಮತ್ತು ಭದ್ರತಾಧಿಕಾರಿಗಳು, ಇವರುಗಳು ಮೇಲಿನಂತೆ ಸಚಿವಾಲಯ ಕಟ್ಟಡಗಳಿಗೆ ಆಗಮಿಸುವ ಇಲಾಖೆ / ಕಚೇರಿಗಳಿಂದ ನೀಡಲಾಗುವ ಪೂರ್ವಾನುಮತಿ ಪತ್ರ / ಸಭಾ ಸೂಚನಾ ಪತ್ರ ಹಾಗೂ 2ನೇ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವ ಪ್ರಮಾಣ ಪತ್ರವನ್ನು ಖಚಿತಪಡಿಸಿಕೊಂಡ ನಂತರವಷ್ಟೆ ಪ್ರವೇಶಕ್ಕೆ ಅನುಮತಿ ನೀಡುವುದು, ಮುಂದುವರದು, ಸಚಿವಾಲಯದ ಕಟ್ಟಡಗಳಲ್ಲಿನ ಪ್ರತಿಯೊಂದು ಮಹಡಿ / ಕಾರಿಡಾರ್ ನಲ್ಲಿ ಒಟ್ಟಾಗಿ ಗುಂಪು ಸೇರದಂತೆ ನಿಗಾವಹಿಸವಂತಿಯೂ ಸಹ ಸೂಚಿಸಿದೆ.

Leave a Comment

Your email address will not be published. Required fields are marked *

Translate »
Scroll to Top