ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ

ಬೆಂಗಳೂರು,ಜ,5 : ಹಲವಾರು ಬಾರಿ ವಿಧಾನಪರಿಷತ್ ನ್ನು ಉಳಿಸಿಕೊಳ್ಳಬೇಕೋ, ಬೇಡವೋ ಎಂಬ ಚರ್ಚೆ ನಡೆದಿದೆ. ಆಯಾ ಸಮಯ ಸಂದರ್ಭದಲ್ಲಿ ಎಲ್ಲರೂ ವ್ಯಾಖ್ಯಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ತಿನ ಅವಧಿ ಮುಕ್ತಾಯವಾಗುತ್ತಿರುವ ಶಾಸಕರಿಗಾಗಿ ಇಂದು ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ರೀತಿ ವಿಧಾನಸಭೆಯಲ್ಲಿ ಆದ ನಿರ್ಣಯಗಳನ್ನು ರೀ ಕನಫರ್ಮೆಷನ್ ಮಾಡುವ ಗುರುತರ ಜವಾಬ್ದಾರಿ ಪರಿಷತ್ ನದ್ದು. ಪರಿಷತ್ ಸದಸ್ಯರ ಪಾತ್ರದ ಬಗ್ಗೆ ಸಿಂಹಾವಲೋಕನ ಮತ್ತು ಆತ್ಮಾವಲೋಕನ ಮಾಡಿಕೊಳ್ಖುವ ಅಗತ್ಯವಿದೆ ಎಂದರು. ನಾನೂ ಸಹ ವಿಧಾನಪರಿಷತ್ ಸದಸ್ಯನಾಗುವ ಮೂಲಕವೇ ರಾಜಕೀಯ ಎಂಟ್ರಿ ಪಡೆದಿದ್ದು, ಇದಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ವಿಧಾನ ಪರಿಷತ್ತಿನ ಇತಿಹಾಸ, ಪರಂಪರೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆಯ ಜೊತೆಗೆ ವಿಧಾನ ಪರಿಷತ್ತಿನ ಅಗತ್ಯವಿದೆಯೇ ? ಎಂಬ ಚರ್ಚೆ ಈಗ ಹುಟ್ಟಿಕೊಂಡಿದೆ. ಪರಿಸ್ಥಿತಿ, ಸಂದರ್ಭ ಆಧರಿಸಿ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಪರಿಷತ್ತಿನ ಮೌಲ್ಯ ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ರಾಜಕಾರಣದಲ್ಲಿ ಇರುವವರಿಗೆ ನಿವೃತ್ತಿ ಪ್ರಶ್ನೆ ಇಲ್ಲ. ಅರ್ಹತೆ ಮತ್ತು ನಿವೃತ್ತಿ ಇಲ್ಲದ ಕ್ಷೇತ್ರ ರಾಜಕೀಯ. ಆದರೆ ಇಲ್ಲಿ ಸಮಾಜ ನಿರ್ಮಿತವಾದ ಅರ್ಹತೆಗಳಿವೆ. ಅದನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು. ರಾಜಕಾರಣದಲ್ಲಿ ಪ್ರಸ್ತುತತೆ ಮುಖ್ಯ. ರಾಜಕಾರಣದಲ್ಲಿ ಕ್ರಿಯಾಶೀಲತೆ ಕಳೆದುಕೊಂಡರೆ ಸ್ಪರ್ಧೆಯಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಜನರ ಹೃದಯದಲ್ಲಿ ಸ್ಥಾನ ಪಡೆಯಬೇಕು ಎಂದು ಹೇಳಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಆಗ ವಿಧಾನ ಪರಿಷತ್ತಿನಲ್ಲಿ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಾಕಷ್ಟು ಗಂಭೀರ ಚರ್ಚೆ ನಡೆಸುತ್ತಿದ್ದರು. ಹಾಸ್ಯ, ವಾದ, ವಿವಾದ ಎಲ್ಲವೂ ಇರುತ್ತಿತ್ತು. ಆಗ ಎಲ್ಲ ವರ್ಗದ ಜನರೂ ಬರುತ್ತಿದ್ದರು. ಸಾಹಿತಿಗಳು, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರು, ಸಿನೆಮಾ ತಾರೆಯರು, ಶಿಕ್ಷಣ ತಜ್ಞರು ಬರುತ್ತಿದ್ದರು. ನಮ್ಮ ಸದನ ಕಲಾಪ ನೋಡಲು ವಿಧಾನಸಭೆ ಶಾಸಕರು ಬಂದು ಕುಳಿತುಕೊಳ್ಳುತ್ತಿದ್ದರು. ಆಗ ಸದನಗಳು ಒಂದು ಕುಟುಂಬ ರೀತಿಯಲ್ಲಿ ಇದ್ದವು. ಅಧಿಕಾರಿಗಳು ತಪ್ಪು ಮಾಡಿದರೆ ಅವರನ್ನು ಹಕ್ಕು ಚ್ಯುತಿ ಕಮಿಟಿಗೆ ತಂದು ಎಚ್ಚರಿಕೆ ನೀಡಯತ್ತಿದ್ದೇವೆ ಎಂದು ಹೇಳಿದರು. ಪರಿಷತ್ ನೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇದೆ. ಇವತ್ತು ನಿವೃತ್ತರಾಗುವವರು ಮುಂದಿನ ದಿನಗಳಲ್ಲಿ ಯಾವುದಾದರೂ ಸದನಕ್ಕೆ ಬರುವಂತಾಗಲಿ.


ಇತ್ತೀಚೆಗೆ ಮೆಲ್ಮನೆ, ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಸೋತವರು, ಪ್ರಭಾವಿ ರಾಜಕಾರಣಿಗಳ ಕುಟುಂಬಸ್ಥರು ಇಲ್ಲಿಗೆ ಬರುವಂತೆ ಆಗಿದೆ. ಇದು ನೋವಿದೆ. ಎಲ್ಲ ರಾಜ್ಯಗಳಲ್ಲಿ ಪರಿಷತ್ ಇರಬೇಕು ಅಂತ ಪಿಠಾಧೀಶನ ಸಮ್ಮೇಳನದಲ್ಲಿ ಹೇಳಿದ್ದೆ ಎಂದರು. ಪರಿಷತ್ ಸದಸ್ಯರನ್ನು ವಿಧಾನಸಭೆ ಸದಸ್ಯರ ಸಮಾನ ಗೌರವ ಇರಬೇಕು ಅಂತ ಹೋರಾಟ ಮಾಡುತ್ತಿದ್ದೇವೆ. ಪರಿಷತ್ತಿನ ಘನತೆ ಉಳಿಸಬೇಕು. ಪ್ರತಿಭಟನೆ ಗಲಾಟೆ ಮಾಡಿದರೆ ಪರಿಷತ್ತು ಏಕೆ ಬೇಕು ಎಂಬ ಪ್ರಶ್ನೆ ಏಳುತ್ತಿದೆ. ಹೊಸದಾಗಿ ಬಂದವರು ಮತ್ತು ಈಗಾಗಲೇ ಇರುವವರಿಗೆ ಮೂರು ದಿನದ ‘ಅಂದಿನ ರಾಜಕಾರಣ, ಇಂದಿನ ರಾಜಕಾರಣದ’ ಬಗ್ಗೆ ವಿಚಾರ ಸಂಕಿರಣ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ 75 ವಿಧಾನಪರಿಷತ್ ಸದಸ್ಯರಿಗೆ ತರಬೇತಿ ಸಹ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ವಿಧಾನಪರಿಷತ್ ಸಭಾನಾಯಕ, ಸಮಾಜಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ವ್ಯವಸ್ಥೆಯನ್ನು ವಿಮರ್ಶೆ ಮಾಡುವ ಸಂದರ್ಭ ಬಂದಾಗ ವಿಧಾನ ಪರಿಷತ್ ಇಂದಿಗೂ ಬಹಳ ಎತ್ತರದಲ್ಲಿದೆ. ಕೆಲವು ಸಂದರ್ಭದಲ್ಲಿ ವಿಧಾನ ಪರಿಷತ್ ಕೆಟ್ಟಿದೆ ಎಂಬ ಭಾವನೆ ಬಂದರೂ ಶಕ್ತಿ ಕಳೆದುಕೊಂಡಿಲ್ಲ. ರಾಮಕೃಷ್ಣ ಹೆಗಡೆ, ದೇವೇಗೌಡರು, ಡಾ.ಆಚಾರ್ಯ ಮೊದಲಾದವರು ಇದನ್ನು ಪ್ರತಿನಿಧಿಸಿದ್ದಾರೆ. ಅವರು ಬಿಟ್ಟು ಹೋದ ಮೌಲ್ಯ ಇದೆ. ಆದರೆ ಈ ಬಾರಿಯ ಚುನಾವಣೆಗೆ ನಡೆದ ಖರ್ಚುಗಳ ವಿಚಾರ ಬಂದಾಗ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ವಿಧಾನ ಪರಿಷತ್ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ವಿಧಾನಸಭೆಗೆ ಬಿಟ್ಟಿರುವ ವಿಚಾರ ಮಾತ್ರ ನನಗೆ ಒಪ್ಪಿಗೆಯಾಗಿಲ್ಲ. ಆದರೆ ಮೇಲ್ಮನೆ ಬೇಡ ಎಂದು ಹೇಳುವವರು ಉತ್ತರ ಪ್ರದೇಶ, ಬಿಹಾರ್, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮೇಲ್ಮನೆ ಸದಸ್ಯರು ಎಂಬುದನ್ನು ಯಾರು ಮರೆಯಬಾರದು. ಪರಿಷತ್ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಗೆ ಇದಕ್ಕಿಂತ ಬೇರೆ ಉತ್ತರ ಬೇಡ ಎಂದು ಹೇಳಿದರು. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವಧಿ ಮುಗಿದ ಪರಿಷತ್ ಸದಸ್ಯರನ್ನು ಸನ್ಮಾನಿಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top