ರಾಜ್ಯ ಬಿಜೆಪಿ ನಾಯಕರದ್ದು ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ

ಬೆಂಗಳೂರು:  ‘’ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಟ ಮಾಡಿದರಂತೆ’’ ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ. ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ.

 

ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರಕ್ಕೆ ಸೇರಿದ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ?

ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರ ಸರ್ಕಾರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನಿಮಗೆ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಒತ್ತಾಯಿಸಿ.

 

ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ?

ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ.

 

ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ – ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top