ಬೆಂಗಳೂರು: ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಿತಿಯು ಹೆಚ್ಚಳ ಮಾಡಿರುವ ಗೌರವಧನ ನೀಡುವಂತೆ ಹಾಗೂ ಹೊಸ ಮೊಬೈಲ್ ನೀಡುವಂತೆ ಆಗ್ರಹಿಸಿ ಜೂನ್ 10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಆಶಾ ನೌಕರರಿಗೆ ಹಾಗೂ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಸಾವಿರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರೂ ಅನುದಾನ ಮೀಸಲಿಡಲಿಲ್ಲ. ಅದರಿಂದ ನೂತನ ಸರ್ಕಾರ ಈ ಹಣ ಪಾವತಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಪೋಷಣ್ ಅಭಿಯಾನದಡಿ ನಾಲ್ಕು ವರ್ಷಗಳ ಹಿಂದೆ 6331 ಮೊಬೈಲ್ ನೀಡಿದ್ದು ಇದೀಗ ಹಳತಾಗಿರುವುದರಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಹೊಸ ಮೊಬೈಲ್ ನೀಡುವಂತೆ ಹಾಗೂ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಜುಲೈ 10ರಂದು ತಾಲೂಕು ಕೇಂದ್ರಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹಾಗೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ 5000 ದಿಂದ 8000 ಹೆಚ್ಚಿಗೆ ಮಾಡುವ ಕುರಿತು ತೀರ್ಮಾನವಾಗಿದ್ದು ಹಾಗೂ ಆಶಾ,ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿಯನ್ನು ನೀಡುವುದಾಗಿ ತಿಳಿಸಿದ್ದರು. ಆದರೆ ಇದೀಗ ಮನೆಯ ಯಜಮಾನಿ ಬೇರೆಯವರು ಇದ್ದಾಗ ಈ ಸೌಲಭ್ಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಬಹುದೇ ಎಂಬ ಗೊಂದಲವಿದೆ. ಇದನ್ನು ಮೊದಲು ಸ್ಪಷ್ಟಪಡಿಸಿ ಎಂದು ಅಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಉಸ್ತುವಾರಿಯಾಗಿರುವ ಪಿ ಎಸ್ ಸಂಧ್ಯಾ ಮಾತನಾಡಿದ್ದು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಈಡೇರಿಸುವರೆಂಬ ನಿರೀಕ್ಷೆಯಲ್ಲಿದ್ದೆವು, ಆದರೆ ಅದು ಹುಸಿಯಾಗಿದೆ’ ಎಂದು ನುಡಿದರು.