ರಂಗತೋರಣದಿಂದ ಶ್ರೀರಾಮ ರಂಗ ಸಂಭ್ರಮಕಾರ್ಯಕ್ರಮ ಆಯೋಜನೆ

 ಬಳ್ಳಾರಿ : 2024 ಜನವರಿ-22 ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಲಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ. ಅದರ ಸಂಭ್ರಮೋತ್ಸವಕ್ಕಾಗಿ ಬಳ್ಳಾರಿಯಲ್ಲೂ “ಶ್ರೀರಾಮ ರಂಗ ಸಂಭ್ರಮ” ಸಾಂಸ್ಕೃತಿಕವಾಗಿ ಆಯೋಜನೆಗೊಂಡಿದೆ. ಇದೇ ಜನವರಿ 22, 23 ಮತ್ತು 24ರಂದು ನಗರದ ರಾಜಕುಮಾರ ರಸ್ತೆಯಲ್ಲಿರುವ ರಾಘವ ಕಲಾಮಂದಿರದಲ್ಲಿ 3 ದಿನಗಳ ಕಾಲ ನಾಟಕ, ಬಯಲಾಟ, ತೊಗಲುಗೊಂಬೆ ಆಟ, ಸಂಗೀತ, ನೃತ್ಯ, ಉಪನ್ಯಾಸಗಳು ಶ್ರೀರಾಮನ ದರ್ಶನ ಮಾಡಿಸಲಿವೆ ಎಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.

 

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಭುದೇವ ಕಪ್ಪಗಲ್ಲು, ಜ.22 ರಂದು ಸಂಜೆ 5.30ಕ್ಕೆ : ಶ್ರೀರಾಮ ರಂಗ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ.ಚನ್ನಪ್ಪ, ವಕೀಲ ವಿ.ಜನಾರ್ಧನ, ಬಯಲಾಟದ ಮೇಸ್ಟು ಇ.ಹನುಮಾವಧೂತ ಹಾಗೂ ರಂಗತೋರಣದ ಅಧ್ಯಕ್ಷ ಪ್ರೊ. ಆರ್.ಭೀಮಸೇನ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಹೆಚ್.ತಿಪ್ಪೇಸ್ವಾಮಿ ನಿರ್ದೇಶನದ ರಾಮ ರಾವಣ ಯುದ್ಧ ಬಯಲಾಟವನ್ನು ಪ್ರಸ್ತುತಪಡಿಸಲಿದ್ದಾರೆ. ಅದಕ್ಕೂ ಮುನ್ನ ಪದ್ಮಾವತಿ ಹಾಗೂ ಪ್ರಕೃತಿ ರೆಡ್ಡಿರವರು ಶ್ರೀರಾಮನ ಕುರಿತ ಗೀತ ಗಾಯನವನ್ನು, ಸುನಿತ ಕೊಳಗಲ್ಲು ರವರು ವೀಣಾ ವಾದನವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

22 ರಂದು ಸಂಜೆ 5.30ಕ್ಕೆ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಸ್.ಜಿ.ವಿ. ಮಹಿಪಾಲ, ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ ಹಾಗೂ ವಿಮ್ಸ್ನ ಪ್ರಾಧ್ಯಾಪಕರಾದ ಡಾ| ಎನ್. ಕೊಟ್ರೇಶ್ ಎರಡನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಧಾರವಾಡದ ವಕೀಲ ಅನೂಪ್ ದೇಶಪಾಂಡೆ ಶ್ರೀರಾಮನ ಆದರ್ಶಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ನಂತರ ವಿಶ್ವ ವಿಖ್ಯಾತ ಬೆಳಗಲ್ಲು ವೀರಣ್ಣನವರ ರಾಮಾಂಜಿನೇಯ ತೊಗಲುಗೊಂಬೆ ಮೇಳವು ಲಂಕಾ ದಹನ ತೊಗಲುಗೊಂಬೆ ಆಟವನ್ನು ಪ್ರಸ್ತುತಪಡಿಸಲಿದ್ದಾರೆ. ಇದಕ್ಕೂ ಮುನ್ನ ಬಳ್ಳಾರಿಯ ಸುಪ್ರಸಿದ್ಧ ನೃತ್ಯ ಗುರು ಡಾ. ಚಾರುಲತಾ ಅವರ ಶ್ರೀನಿಧಿ ಆರ್ಟ್ಸ್ ತಂಡವು ಆಯೋಧ್ಯ ರಾಮ ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.

23 ರಂದು ಸಂಜೆ 5.30ಕ್ಕೆ  ಹೈದ್ರಾಬಾದಿನ ಸಾಮಾಜಿಕ ಸಮರಸತಾ ವೇದಿಕೆಯ ಸಂಯೋಜಕ ಅಪ್ಪಾಲ ಪ್ರಸಾದ್ ಶ್ರೀರಾಮನ ಆದರ್ಶಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ತೆಲುಗು ಸಾಂಸ್ಕೃತಿಕ ಸಂಘದ ಗಾದೆಂ ಗೋಪಾಲಕೃಷ್ಣ, ಎ.ಪಿ.ಎಂ.ಸಿ. ವರ್ತಕ ಪಾಲಣ್ಣ, ಭೀಮನೇನಿ ಭಾಸ್ಕರ್ ಅವರುಗಳು ಮೂರನೇ ದಿನದ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದು, ನಂತರ ಹೈದ್ರಾಬಾದಿನ ಸುಪ್ರಸಿದ್ದ ಸುರಭಿ ನಾಟ್ಯ ಮಂಡಳಿಯವರು ಶ್ರೀರಾಮ ರಾಜ್ಯಂ ತಲುಗು ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದಕ್ಕೂ ಮುನ್ನ ಬಳ್ಳಾರಿಯ ಮೂನ್ ವಾಕರ್ಸ್ ಡ್ಯಾನ್ಸ್ ಅಕಾಡೆಮಿಯ ಸದಸ್ಯರು ಶ್ರೀ ರಾಮನ ಕುರಿತಂತೆ ಸಾಮಯಿಕ ನೃತ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಹೆಚ್.ತಿಪ್ಪೇಸ್ವಾಮಿ ಹಾಗೂ ಶ್ರೀರಾಮ ರಂಗ ಸಂಭ್ರಮದ ಸಂಚಾಲಕ ಅಡವಿಸ್ವಾಮಿ ಉಪಸ್ಥಿತರಿದ್ದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top