ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕಂಟಕ-ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಸಿದ್ದರಾಮಯ್ಯರವರು ಕಾಂಗ್ರೆಸ್‍ಗೆ ಕಂಟಕ. ಕಾಂಗ್ರೆಸ್ ಪಕ್ಷವನ್ನು ಇವರು ಮುಗಿಸಲಿದ್ದಾರೆ. ಇವರ ಕುರಿತು “ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಒಂದು ಶನಿ. ಅವರು ಇದನ್ನು ಮುಗಿಸಿ ಹೋಗಲಿದ್ದಾರೆ” ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ ಬಿರುದು ಕೊಟ್ಟಿದ್ದರು ಎಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಬಿಜೆಪಿ ರಾಜ್ಯ ವಕ್ತಾರರೂ ಆದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಹೇಳಿಕೆ ನೀಡಿದ ಅವರು, ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯರವರ ಬಗ್ಗೆ ರಾಜ್ಯದ ಜನರು ಈ ಹಿಂದೆ ಗೌರವದಿಂದ ಕಾಣುತ್ತಿದ್ದರು. ಇತ್ತೀಚೆಗೆ ಬಹುಶಃ ಅವರ ತಲೆ ಕೆಟ್ಟಂತೆ ಕಾಣುತ್ತಿದೆ. ಅವರಿಗೆ ಚಿಕಿತ್ಸೆ ಅಗತ್ಯವಿದ್ದಂತೆ ಕಾಣುತ್ತಿದೆ ಎಂದು ತಿಳಿಸಿದರು. ಸಿದ್ದರಾಮಯ್ಯರವರ ಅಹಂಕಾರ ನೆತ್ತಿಗೇರಿದಂತೆ ಕಾಣುತ್ತಿದೆ. ಅವರೀಗ ಉಡಾಫೆ ರಾಮಯ್ಯ ಆಗಿದ್ದಾರೆ. ‘ದಲಿತರು ಹೊಟ್ಟೆಪಾಡಿನವರು; ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ’ ಎಂದು ಅವರು ಹೇಳಿದ್ದರು. ನಾವು ಆಪಾದನೆ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದೆವು. ಆಗ “ಬಿಜೆಪಿಯವರು ವಿಡಿಯೋ ತಿರುಚಿದ್ದಾರೆ” ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದರು ಎಂದು ಟೀಕಿಸಿದರು.


ಸಿದ್ದರಾಮಯ್ಯನವರು ನಿನ್ನೆ ಬಿಜೆಪಿಯನ್ನು ನಿಂದಿಸುವ ಮಾತಿನ ಭರದಲ್ಲಿ “ಹಜಾಮತಿ ಮಾಡುತ್ತಿದ್ರಾ” ಎಂದು ಕೇಳಿದ್ದಾರೆ. ನಾವು ಸವಿತಾ ಸಮಾಜವನ್ನು ಗೌರವದಿಂದ ಕಾಣುತ್ತೇವೆ. ಅವರ ಕೆಲಸವನ್ನೂ ಗೌರವದಿಂದಲೇ ನೋಡುತ್ತೇವೆ. ಹಜಾಮತಿ ಎಂದಿರುವುದು ಅಂಥ ಸಮಾಜವನ್ನು ಅಪಮಾನ ಮಾಡಿದಂತೆ. ಅವರು ದಲಿತ ವಿರೋಧಿ ಮಾತ್ರವಲ್ಲ ಹಿಂದುಳಿದವರ ವಿರೋಧಿಯೂ ಆಗಿದ್ದಾರೆ. ತಳ ಸಮುದಾಯವನ್ನೂ ಬಹಳ ಕೇವಲವಾಗಿ ನೋಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದ ಜನತೆ ಇಂಥ ನಾಯಕರನ್ನು ತಿರಸ್ಕರಿಸಿ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು. ತಕ್ಷಣ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಇಂಥ ಅಗೌರವದ ಮಾತು ಸರಿಹೊಂದುವುದಿಲ್ಲ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರ ಈ ಪ್ರವೃತ್ತಿಗೆ ರಾಜ್ಯದ ಜನರು ಛೀಮಾರಿ ಹಾಕುತ್ತಿದ್ದಾರೆ ಎಂದು ತಿಳಿಸಿದರು. “ಸಿದ್ದರಾಮಯ್ಯನವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲವೇ? ಇಷ್ಟ ಬಂದಂತೆ ಎಲ್ಲರನ್ನೂ ನೀವು ಮಾತನಾಡುತ್ತೀರಿ. ಏಕವಚನದಲ್ಲೇ ಎಲ್ಲರನ್ನೂ ಮಾತನಾಡುತ್ತೀರಿ. ಆರೋಗ್ಯ ಕಳಕೊಂಡ ಕಾರಣ ಹೀಗಾಗುತ್ತಿದೆ. ನಿಮಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ನನಗೆ ಅನಿಸುತ್ತಿದೆ” ಎಂದು ನುಡಿದರು. “ಯಾರೂ ಚಿಕಿತ್ಸೆ ಮಾಡದಿದ್ದರೆ ಹೇಳಿ; ನಾವೇ ಆಸ್ಪತ್ರೆಗೆ ಸೇರಿಸ್ತೇವೆ” ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top