ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳ

ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳದಲ್ಲಿ ಸಚಿವ ಎಸ್.ಟಿ.ಸೋಮಶೇಖರ್; ರಾಜ್ಯದಲ್ಲಿ ಬಂಡವಾಳ ಹೂಡಲು ಕೃಷಿ ಉತ್ಪನ್ನ, ಯಂತ್ರೋಪಕರಣ ಕಂಪನಿಗಳಿಗೆ ಆಹ್ವಾನ 2030ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ. ವಿಶ್ವದ ನಾನಾ ರಾಷ್ಟ್ರಗಳು ಕೃಷಿಯಲ್ಲಿ ನವನವೀನ ತಂತ್ರಜ್ಞಾನ, ವೃತ್ತಿಪರತೆ ಮೈಗೂಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಮಾರ್ಪಾಡು ಹೊಂದಲಿವೆ ಎಂಬುದಕ್ಕೆ ಸ್ಪೇನ್ ನಲ್ಲಿ ನಡೆದ “ಫಿಮಾ ಅಗ್ರಿಕೋಲ” ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳ ಸಾಕ್ಷಿಯಾಯಿತು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಸ್ಪೇನ್ ನ ಝರಗೋಜ಼ ನಗರದಲ್ಲಿ ಏಪ್ರಿಲ್ 26 ರಿಂದ 30ರ ವರೆಗೆ ನಡೆದ 42ನೇ ದ್ವೈ ವಾರ್ಷಿಕ “ಫಿಮಾ ಅಗ್ರಿಕೋಲ-2022” ಕೃಷಿ ವಸ್ತು ಪ್ರದರ್ಶನ ಮೇಳದಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ ಸಚಿವರು, ಹಲವು ಕೃಷಿ ಉತ್ಪನ್ನ ಮತ್ತು ಯಂತ್ರೋಪಕರಣಗಳ ಕಂಪನಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸಿದರು. ಕೃಷಿ ಎಂದಾಕ್ಷಣ ನೀರು, ಕೂಲಿಯಾಳುಗಳ ಸಮಸ್ಯೆ ಪ್ರಮುಖವಾಗಿ ಕಾಣುತ್ತದೆ. ಆದರೆ ಅಂತಾರಾಷ್ಟ್ರೀಯ ಕೃಷಿ ಮೇಳ ಇದೆಲ್ಲದಕ್ಕೂ ಪರಿಹಾರ ಕಲ್ಪಿಸಿದೆ. ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಲಾಭದಾಯಕ ಕೃಷಿ ಹೇಗೆ ಮಾಡಬಹುದು ಎಂಬುದರ ಕುರಿತು ಅಲ್ಲಿನ ತಜ್ಞರು, ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದರು.

ಕೃಷಿ ಪವರ್ ಯೂನಿಟ್‌ ಗಳು, ಬಿತ್ತನೇ ಯಂತ್ರೋಪಕರಣಗಳು, ನಾಟಿ-ಕಟಾವು ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ಹಸಿರುಮನೆ, ಗಾರ್ಡನ್ ಉಪಕರಣಗಳು, ಲಾಜಿಸ್ಟಿಕ್ ಸರ್ವೀಸ್ ಇನ್ನೂ ಅನೇಕ ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚಿಸುವುದರ ಜೊತೆಗೆ ಕೃಷಿ ಉತ್ಪನ್ನ ಹಾಗೂ ಕೃಷಿ ಯಂತ್ರೋಪಕರಣಗಳ ಕಂಪನಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸಲಾಯಿತು. ಹನಿ ನೀರಾವರಿ, ಮಳೆ ನೀರು ಸಂಗ್ರಹಣೆಗೆ ಕರ್ನಾಟಕ ಸರ್ಕಾರ ಒತ್ತು ನೀಡಿದೆ. ಇದಕ್ಕೆ ಪೂರಕವಾದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿದರೆ ಉದ್ಯೋಗವಕಾಶ ಸಿಗುವುದರ ಜೊತೆಗೆ ಮುಂದುವರಿದ ರಾಷ್ಟ್ರಗಳಲ್ಲಿ ಅಳವಡಿಸಿಕೊಳ್ಳುವ ಕೃಷಿ ಪದ್ಧತಿಯನ್ನು ನಮ್ಮ ರೈತರು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನಾ ಕಂಪನಿಗಳಿಗೆ ಆಹ್ವಾನ ನೀಡಲಾಯಿತು. ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು ಕೆಲವು ಕಂಪನಿಗಳ ಮುಖ್ಯಸ್ಥರು ರಾಜ್ಯಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಕೃಷಿ ಉತ್ಪನ್ನ ಹಾಗೂ ಕೃಷಿ ಯಂತ್ರೋಪಕರಣಗಳ ಈ ವಸ್ತು ಪ್ರದರ್ಶನದಲ್ಲಿ ಸುಮಾರು 35ಕ್ಕೂ ಹೆಚ್ಚು ರಾಷ್ಟ್ರಗಳಿಂದ 1300 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top