ಅಂತೂ ಇಂತೂ ಶಿಕಾರಿಪುರ ಪಟ್ಟಣದ ಹಲವು ಇಲಾಖೆಗಳಿಗೆ 10 ವರ್ಷಗಳ ನಂತರ ಬಣ್ಣದ ಬಿಳಿ ಲೇಪನದಿಂದ ಶಾಪವಿಮೋಚನೆ

ಶಿಕಾರಿಪುರ : ಅಂತೂ ಇಂತೂ ಶಿಕಾರಿಪುರ ಪಟ್ಟಣದ ಹಲವು ಇಲಾಖೆಗಳನ್ನೊಳಗೊಂಡು ಆಡಳಿತ ಸಂಕೀರ್ಣವಾಗಿರುವ ಆಡಳಿತ ಸೌಧಕ್ಕೆ ಹಲವು ವರ್ಷಗಳಿಂದ ಹಿಡಿದಿದ್ದ ಸೂತಕವನ್ನು ಬಣ್ಣದ ಲೇಪನ ಮಾಡಿಕೊಳ್ಳುವ ಮೂಲಕ ಉದ್ಘಾಟನೆಯಾಗುವ ಮೊದಲು ಹಚ್ಚಿದ ಬಣ್ಣವೂ 10 ವರ್ಷಗಳ ನಂತರ ಬಣ್ಣದ ಬಿಳಿ ಲೇಪನದಿಂದ ಶಾಪವಿಮೋಚನೆ ಅಥವಾ ಸೂತಕವನ್ನು ಕಳೆದು ಕೊಂಡಂತಾಗುತ್ತಿದೆ.


ಹೌದು ಸರ್ಕಾರಿ ಕೆಲಸ ದೇವರ ಕೆಲಸ ಈ ದೇವರ ಕೆಲಸ ಮಾಡುವ ದೇವಾಲಯವು ಯಾವಾಗಲೂ ಸ್ವಚ್ಚವಾಗಿಡುವ ಕೆಲಸ ನಿತ್ಯವೂ ನಡೆಯಬೇಕಾಗಿರುತ್ತದೆ. ಆದರೆ ಈ ಪದಕ್ಕೆ ವಿರೋಧವಾಗಿದ್ದ, ವಿವಿಧ ಸರ್ಕಾರಿ ಇಲಾಖೆಗಳನ್ನೊಳಗೊಂಡಿರುವ  ಆಡಳಿತ ಸೌಧ ಅಸೌಚತೆಯ ಆಗಾರವಾಗಿತ್ತು.
ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ಆಡಳಿತ ಸೌಧದ ನಿರ್ಮಾಣಕ್ಕೆ ಗುದ್ದಲಿ ಪೂಜೆ  ನಡೆಸುವುದರೊಂದಿಗೆ ಚಾಲನೆ ನೀಡಲಾಯಿತು. ನಂತರ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಬರುವ ರೈತರಿಗೆ, ಕೂಲಿಕಾರರಿಗೆ, ವೃದ್ಧರಿಗೆ, ಸಾರ್ವಜನಿಕರಿಗೆ ಅವರು ತಮ್ಮ ಕೆಲಸ ಕಾರ್ಯಗಳಿಗೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಅಲೆದಾಡುವಂತಾಗ ಬಾರದು ಎಂದು ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿ ಅನೇಕ ಇಲಾಖೆಗಳನ್ನು ಒಂದೆಡೆಯೇ ಇರುವಂತೆ ಭವ್ಯವಾದ ಕಟ್ಟಡ ನಿರ್ಮಾಣ ಮಾಡಿಸಿ, 2012 ರಲ್ಲಿ ಸದಾನಂದಗೌಡ ರವರು ಮುಖ್ಯಮಂತ್ರಿಯಾಗಿದ್ದಾಗ ಇದರ ಉದ್ಘಾಟನೆ ನೆರವೇರಿಸಿದ್ದರು. 


ಆದರೆ ಈ ಆಡಳಿತ ಸೌಧ ನಿರ್ಮಾಣವಾದ ನಂತರ ಆ ಸಂದರ್ಭದಲ್ಲಿ ಬಿಳಿ ಬಣ್ಣದ ಲೇಪನವಾಗಿತ್ತು. ನಂತರ ದಿನ ಕಳೆದಂತೆ ಕಳೆಗುಂದುತ್ತಾ, ಈ ಕಟ್ಟಡಕ್ಕೆ ಏಳೆಂಟು ವರ್ಷಗಳು ಕಳೆದರೂ ರಂಗು ರಂಗಿನ ಬಣ್ಣವಲ್ಲ, ಬಿಳಿ ಬಣ್ಣದ ಲೇಪನವೂ ಆಗಿರಲಿಲ್ಲ. ಈ ಕಟ್ಟಡಕ್ಕೆ ಬಿಸಿಲು ಮಳೆ ಗಾಳಿಯಿಂದಾಗಿ ಲೇಪನವಾಗಿರುವಂಹ ಕೆಸರು ಅಥವಾ ಧೂಳನ್ನು ತೆಗೆಸಲೂ ಕೂಡ ಯೋಚನಾಸಕ್ತಿ ಇಲ್ಲದಂತಾಗಿತ್ತು. 
ಇಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿತ್ತು.ಈ ಆಡಳಿತ ಸೌಧದ ಸೌಂದರ್ಯ ಮತ್ತು ಬೆಳಕಿಗಾಗಿ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿತ್ತು. ಆದರೆ, ಕಿಟಕಿಗಳ ಗಾಜು ಒಡೆದು ಹೋಗಿದೆಯಲ್ಲದೆ ಕಿಟಕಿಗಳು ಮುರಿದು ಬೀಳುವಂತಾಗಿದೆ. ಇಲ್ಲಿ ಉನ್ನತ ಹುದ್ದೆ ಅಲಂಕರಿಸಿದವರಿಗೆ ಹೊರತು ಪಡಿಸಿ ಇಲಾಖೆಯ ಆಡಳಿತ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಾಣ ಮಾಡಿಸಲಾಗಿದೆ. ಶೌಚಾಲಯದಲ್ಲಿ ಕೆಟ್ಟ ವಾಸನೆಯಾಗಿದೆಯಲ್ಲದೇ, ಇದಕ್ಕೆ ಅಳವಡಿಸಿದ ಪೈಪ್ ಗಳು ಬಾತ್ ರೂಮ್ ನ ಬೇಸಿನ್ ಗಳು ಅದಕ್ಕೆ ಅಳವಡಿಸಿದ್ದ ಪೈಪ್ ಗಳು ಕಿತ್ತು ಹೋಗಿವೆ. ಶೌಚಾಲಯದ ಕಿಟಕಿಗಳ ಬಳಿ ಹೆಂಡ ಸಾರಾಯಿ ಕುಡಿದ ಬಾಟಲಿಗಳು, ಸಿಗರೇಟ್ ಬಿಡಿ ಸೇವನೆ ಮಾಡಿ ಬಿಸಾಡಿದ ಖಾಲಿ ಪಾಕೇಟ್ಗಳು ಜರ್ದಾ ಬೀಡ, ಗುಟ್ಕಾ, ಅಡಕಿ ಎಲೆಗಳನ್ನು ಜಗಿದು ಉಗುಳಿದ ಕಲೆಗಳು ಕಂಡುಬರುತ್ತಿದ್ದವು. ಇವೆಲ್ಲವೂ ಹಗಲು ಹೊತ್ತಿನಲ್ಲೇ ನಡೆಯುವ ಸಂದೇಹ ಸಾರ್ವಜನಿಕರಿಂದ ತಿಳಿದು ಬರುತ್ತಿದೆ.


ಕೆಲವು ಇಲಾಖೆಗಳಲ್ಲಿ ಕೆಲಸದ ಒತ್ತಡದಿಂದಾಗಿ ರಾತ್ರಿ ಎಂಟು ಗಂಟೆಯವರೆಗೂ ಕೆಲಸ ಮಾಡುವ ಅನಿವಾರ್ಯತೆ ಎದ್ದು ಕಾಣುತ್ತದೆ. ಆದರೆ ವಿವಿಧ ಇಲಾಖೆಗಳಲ್ಲಿ ರಾತ್ರಿ ಎಂಟು ಗಂಟೆಯ ನಂತರವೂ ಲೈಟ್ ಆಫ್ ಆಗದೇ ಬೆಳಗ್ಗಿನವರೆಗೂ ಹೊತ್ತಿಯೇ ಇರುತ್ತವೆ. ಇನ್ನೂ ವಾರದ ರಜೆ ಹಾಗೂ ಎರಡನೇ ಶನಿವಾರ ಬಂದರೆ ಅದರ ಹಿಂದಿನ ದಿನದ ಸಂಜೆ ಹೊತ್ತಿಸಿದ ಲೈಟ್ ಗಳು ಸೋಮವಾರದವರೆಗೆ ಹಗಲು ರಾತ್ರಿ ಹೊತ್ತಿಕೊಂಡೇ ಇರುತ್ತವೆ.
2017 ರ ಮೊದಲು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆಯಲ್ಲಿದ್ದ ಈ ಆಡಳಿತ ಸೌಧ ಒಂದು ದಿನವೂ ಇದರ ಸ್ವಚ್ಛತೆ ಬಗ್ಗೆ ಗಮನ ಹರಿಸಲಿಲ್ಲ. ಇಲ್ಲಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಆಡಳಿತ ವರ್ಗದವರು ಸೌಚಾಲಯವನ್ನು ಸ್ವಚ್ಚವಾಗಿಡುವದಕ್ಕಾಗಿ ಎರಡು ಮಹಿಳೆಯರನ್ನು ನೇಮಿಸಲಾಗಿತ್ತು. ಇವರಿಗೆ ಪ್ರತೀ ತಿಂಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಸ್ವತಃ ತಾವೇ ಹಣನೀಡುವುದರ ಮೂಲಕ ಸ್ವಚ್ಚತಾ ನಿರ್ವಹಣೆ ಮಾಡಿಸಲಾಗುತ್ತಿತ್ತು. 2017 ರ ನಂತರ ತಹಶೀಲ್ದಾರ್ ರವರಿಗೆ ಹಸ್ತಾಂತರಿಸಲಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಆದರೂ ಇಲ್ಲಿ ಸ್ವಚ್ಛತೆಯಿಲ್ಲದೆ ರೋಗಾಣುಗಳು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. 
ಈ ಕಟ್ಟದ ಸ್ವಚ್ಛತೆ ಬಗ್ಗೆ ಹಲವು ಬಾರಿ ವಿವಿಧ ಪತ್ರಿಕೆಗಳಲ್ಲಿ ಸುದ್ದಿಗಳು ಆಗಿ, ಕೆಲ ವರ್ಷಗಳ ಹಿಂದೆ ಒಂದೊಮ್ಮೆ ಪುರಸಭಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದರ ಸ್ವಚ್ಛತೆ ಮಾಡಿಸಲಾಗಿತ್ತು. ತಾಲ್ಲೂಕಿನ ರೈತರಿಗೆ, ಕೂಲಿಕಾರರಿಗೆ, ಸಾರ್ವಜನಿಕರ ಹಿತಾಸಕ್ತಿಗಾಗಿ ಒಂದೇ ಸೂರಿನಡಿ ಹಲವು ಸೇವೆಗೆ ಕಾರಣವಾದ ಹಾಗೂ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರ ಬಹು ಆಶಾದಾಯಕವಾದ ವಿವಿಧ ಇಲಾಖೆಗಳ ಸರ್ಕಾರಿ ಕಛೇರಿಗಳ ಸಂಕೀರ್ಣವಾದ ಈ ಆಡಳಿತ ಸೌಧದ ಹೊರಗಡೆ ಹಾಗೂ ಇಲ್ಲಿನ ವಿವಿಧ ಇಲಾಖೆಗಳ ಪ್ರತೀ ಕೊಠಡಿಗಳಿಗೆ ಬಣ್ಣದ ಲೇಪನ ಮತ್ತು ವಿದ್ಯುತ್ತಿನ ಸ್ವಿಚ್ ಗಳ ಮರು ಜೋಡಣೆ ಕಾರ್ಯ ಭರದಿಂದ ಸಾಗಿದೆ.


ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದು ಈಗ ಈ ಆಡಳಿತ ಸೌಧದ ಹೊರಗೆ ಒಳಗೆ ಮತ್ತು ವಿವಿಧ ಇಲಾಖೆಗಳ ಪ್ರತೀ ಕೊಠಡಿಗಳಿಗೆ ಬಣ್ಣದ ಲೇಪನ ಮತ್ತು ವಿದ್ಯುತ್ತಿನ ಸ್ವಿಚ್ ಗಳ ಮರು ಜೋಡಣೆ ಸೇರಿದಂತೆ ವಿವಿಧ ಕೆಲಸಗಳಿಗೆ 32 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಅದೇನೇ ಇರಲಿ ಒಟ್ಟಿನಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿ ನಿರ್ಮಾಣ ಮಾಡಿರೋ ಆಡಳಿತ ಸೌಧದಲ್ಲಿ ಇನ್ನಾದರೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ವ್ಯವಸ್ಥೆ ಆಗಬೇಕಿದೆಯಲ್ಲದೇ, ವಿವಿಧ ಇಲಾಖೆಗಳ ಆಡಳಿತ ಅಧಿಕಾರಿಗಳಾಗಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಆಡಳಿತ ವರ್ಗದವರು, ಸಿಬ್ಬಂದಿಗಳು, ಸಾರ್ವಜನಿಕರು ಇದರ ಸ್ವಚ್ಛತೆ ಬಗ್ಗೆ ಗಮನ  ಹರಿಸಲು ಮುಂದಾಗಬೇಕಾಗಿದೆ.

Leave a Comment

Your email address will not be published. Required fields are marked *

Translate »
Scroll to Top