ಕೊಟ್ಟೂರು: ಪಟ್ಟಣಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್ ಹೊಡೆದು ಅಧಿಕ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ನೀರು ಸರಬರಾಜು ಮಾಡುವ ಸಿಬ್ಬಂದಿಗೆ ತಿಳಿಸಿದರು ಯಾರೊಬ್ಬರೂ ಈ ಬಗ್ಗೆ ಗಮನಹರಿಸದಿರುವುದುಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶನಿವಾರ ಪಟ್ಟಣದ ಹ್ಯಾಳ್ಯಾ ರಸ್ತೆಯ ಬನ್ನಿಮಹಾಕಾಳಿ ಕಟ್ಟೆ ಮುಂದೆ ಚರಂಡಿ ಕಾಮಗಾರಿಗಾಗಿ ಗುತ್ತಿಗೆದಾರ ತೇರು ಬಯಲು ಪ್ರದೇಶದಲ್ಲಿ ಮಣ್ಣಿನ ಚರಂಡಿ ನಿರ್ಮಿಸಿದ್ದು ಆ ಚರಂಡಿಯನ್ನು ಸರಿಯಾಗಿ ಮುಚ್ಚದೆ ಇರುವ ಕಾರಣ ವಾಹನಗಳ ಸಂಚಾರದಿಂದ ಕುಡಿಯುವ ನೀರಿನ ಪೈಪ್ ಹೊಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.
ವಾರ್ಡ್ ಗಳಿಗೆ ನೀರುಬಿಡಲು ಪಟ್ಟಣ ಪಂಚಾಯಿತಿ ನೀರು ಸರಬರಾಜು ಸಿಬ್ಬಂದಿಗೆ ಹೇಳಿದರೆ ಮಿಷನ್ ಗಳು ಕೆಟ್ಟಿವೆ, ಕರೆಂಟಿಲ್ಲ, ಪೈಪ್ಲೈನ್ ದುರಸ್ತಿ ಇದೆ ಎಂದು ನಾನಾ ಕಾರಣ ಹೇಳಿ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ನಂತರ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ಈಗ ಬಿಡುತ್ತೇವೆ ಎನ್ನುತ್ತಾರೆ ಈ ಸಮಸ್ಯೆಗೆ ಮುಕ್ತಿ ಯಾವಾಗ ದೊರೆಯುತ್ತದೆ ಎಂದು ಜನರು ಎದುರು ನೋಡುತ್ತಿದ್ದಾರೆ.
ಇನ್ನು ಕೆಲವು ವಾರ್ಡ್ ಗಳಿಗೆ 8 ದಿನಕ್ಕೆ ಅಥವಾ ಹತ್ತು ದಿನಕ್ಕೆ ಒಮ್ಮೆ ನೀರು ಬಿಡುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಳ್ಳಾರಿ ಕ್ಯಾಂಪ್, ಅಂಬೇಡ್ಕರ್ ನಗರ, ಇಂದಿರಾ ನಗರ ಸಂಪರ್ಕ ಕಲ್ಪಿಸುವ ಈ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ಇಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ ಎಂದು ಸ್ಥಳೀಯ ನಿವಾಸಿಗಳಾದ ಬಸವರಾಜ್, ಕೊಟ್ರೇಶ್, ಮಂಜುನಾಥ್, ಕಾರ್ತಿಕ್ ಪತ್ರಿಕೆಗೆ ಮಾಹಿತಿ ನೀಡಿದರು.

ಪ್ರತಿಕ್ರಿಯೆ…..
ಹ್ಯಾಳ್ಯಾ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಾಲ್ಕು ಕಿರು ನೀರಿನ ಟ್ಯಾಂಕ್ ಗಳಿದ್ದು ಅದರಲ್ಲಿ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದ ಎರಡು ಕಿರು ನೀರಿನ ಟ್ಯಾಂಕ್ ಗಳು ಇದ್ದು ಇಲ್ಲದಂತಾಗಿದೆ ಜೊತೆಗೆ ಒಂದು ಶುದ್ಧ ಕುಡಿಯುವ ನೀರಿನ ಘಟಕ ವಿದ್ದು ಕಳೆದ ಐದು ವರ್ಷದಿಂದ ನಮಗೆ ಶುದ್ಧನೀರಿನ ಭಾಗ್ಯವಿಲ್ಲದೆ ಅಶುದ್ಧ ನೀರನ್ನೇ ಬಳಕೆ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಈ ಪೈಪ್ ಲೈನ್ ಹೊಡೆದು ಹೋದರೆ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಪೈಪ್ ಲೈನ್ ದುರಸ್ತಿಯನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
ಅಂಬೇಡ್ಕರ್ ಕಾಲೋನಿ ನಿವಾಸಿಗಳು ಕೊಟ್ಟೂರು