ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ ಮಕ್ಕಳಿಗೆ ಸಿಎಂ ಬುದ್ಧಿಮಾತು

ತುಮಕೂರು: ಮಕ್ಕಳು ತಮ್ಮ ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು. ವಿದ್ಯಾದೇವತೆ ಸರಸ್ವತಿಯ ವಾಹನ ಹಂಸದಂತೆ, ಮಕ್ಕಳು ಜ್ಞಾನದ ತೂಕವನ್ನು ಪಡೆದು, ಯಶಸ್ಸಿನ ಎತ್ತರಕ್ಕೆ ಹಾರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಕ್ಕಳಿಗೆ ಬುದ್ಧಿಮಾತು ಹೇಳಿದರು. ಅವರು ಇಂದು 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ಕಲಿಕಾ ಚೇತರಿಕೆ ವರ್ಷದ ಪ್ರಾರಂಭೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಜ್ಞಾನದ ಬಾಗಿಲನ್ನು ತೆರೆದಿಟ್ಟುಕೊಳ್ಳುವ ಮೂಲಕ ಅವರಲ್ಲಿ ಕಲಿಕೆ ನಿರಂತರವಾಗುತ್ತದೆ. ಅಂತೆಯೇ ಬದುಕಿನಲ್ಲಿ ಯಶಸ್ಸೂ ನಿರಂತರವಾಗಿರುತ್ತದೆ. ಜೀವನ ಪ್ರತಿದಿನ ಹೊಸ ಸವಾಲುಗಳನ್ನು ನೀಡುತ್ತದೆ. ಅದನ್ನು ದಾಟಿದಾಗಲೇ ಯಶಸ್ಸನ್ನು ಪಡೆಯಲು ಸಾಧ್ಯ. ಜ್ಞಾನವನ್ನು ಹಂಚಿಕೊಂಡರೆ ಜ್ಞಾನ ಹೆಚ್ಚುತ್ತದೆ. ಶಿಕ್ಷಣದಲ್ಲಿ ಮೊದಲು ಓದು ನಂತರ ಪರೀಕ್ಷೆ , ಆದರೆ ನಿಜಜೀವನದಲ್ಲಿ ಮೊದಲು ಪರೀಕ್ಷೆ ನಂತರ ಕಲಿಕೆ. ಕೋವಿಡ್ ನಂತರ ಹೊಸ ಪ್ರಯೋಗವಾದ ಕಲಿಕಾ ಚೇತರಿಕೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಿಳಿಸಿದರು.

ಮಕ್ಕಳಲ್ಲಿ ತರ್ಕಬದ್ಧ ಚಿಂತನೆಗೆ ಪುಷ್ಟಿ ನೀಡಬೇಕು
ಮಕ್ಕಳಲ್ಲಿ ಮುಗ್ಧತೆ ಹಾಗೂ ಕುತೂಹಲಗಳಿರುತ್ತವೆ. ಈ ಗುಣಗಳನ್ನು ಜೀವಂತವಾಗಿಡುವವನೇ ಉತ್ತಮ ಶಿಕ್ಷಕ. ಮಕ್ಕಳಿಗೆ ಪ್ರಶ್ನೆ ಕೇಳುವ ಹಕ್ಕಿದೆ. ಮಕ್ಕಳಲ್ಲಿ ತರ್ಕಬದ್ಧ ಚಿಂತನೆಗೆ ಪುಷ್ಟಿ ನೀಡಬೇಕು ಎಂದು ಶಿಕ್ಷಕರಿಗೆ ತಿಳಿಸಿದರು. ನಮ್ಮ ಮಕ್ಕಳ ಸಾಮಾನ್ಯ ಜ್ಞಾನ ವಿದೇಶೀಯರ ಜ್ಞಾನಕ್ಕಿಂತ ಕಡಿಮೆಯೇನಿಲ್ಲ. ನಮ್ಮ ಹಳ್ಳಿಯ ಮಕ್ಕಳ ಅಕ್ಷರ ಮತ್ತು ಸಂಖ್ಯಾ ಜ್ಞಾನದಿಂದ 2ನೇ ತರಗತಿಗೇ ಗುಣಾಕಾರ, ಭಾಗಾಕಾರ ಮಾಡುವುದನ್ನು ವಿದೇಶದಲ್ಲಿನ ಮಕ್ಕಳು 6-7 ನೇ ತರಗತಿಯಲ್ಲಿ ಮಾಡುತ್ತಾರೆ. ನಮ್ಮ ಮಕ್ಕಳು ಬುದ್ಧಿವಂತರಾಗಿದ್ದು, ಅವರನ್ನು ಗುರುತಿಸಿ, ಒಳ್ಳೆಯ ಅವಕಾಶವನ್ನು ನೀಡಬೇಕು ಎಂದರು.

ಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕುವ ಕಲಿಕಾ ಚೇತರಿಕೆ ಕಾರ್ಯಕ್ರಮ ಎರಡು ವರ್ಷದ ನಂತರ ಪೂರ್ಣಪ್ರಮಾಣದ ಶಾಲೆ ಪ್ರಾರಂಭವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಕಾಪಾಡುವಂತಹ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಪರ್ಧಾತ್ಮಕ ಕಾಲದಲ್ಲಿ ಮೂಲಭೂತ ಶಿಕ್ಷಣದಲ್ಲಿ ಕೊರತೆ ಆಗಬಾರದು. ಅಕ್ಷರ ಮತ್ತು ಸಂಖ್ಯಾ ಜ್ಞಾನದಿಂದ ತರ್ಕಬದ್ಧವಾದ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಕೋವಿಡ್‍ನಿಂದಾಗಿ ಎರಡು ವರ್ಷಗಳಿಂದ ಕಲಿಸಲಾಗದ ಪಠ್ಯವನ್ನು ಮೂರು ತಿಂಗಳ ಕಾಲ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿ ಕಲಿಸುವ ಕಲಿಕಾ ಚೇತರಿಕೆ ವಿಶೇಷ ಕಾರ್ಯಕ್ರಮವಾಗಿದೆ. ಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕುವಂತಹ ಹಾಗೂ ನಾಡು ಕಟ್ಟುವಂತಹ ಕಾರ್ಯಕ್ರಮವಾಗಿದೆ ಎಂದರು.

ಶಿಕ್ಷಣಕ್ಕೆ ಒತ್ತು
ಮಕ್ಕಳ ಶಿಕ್ಷಣದ ಮಹತ್ವವನ್ನು ಅರಿತಿರುವ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 7000 ಶಾಲಾಕೊಠಡಿಗಳ ನಿರ್ಮಾಣ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಿಕ್ಷಣದ ಕೊರತೆಯನ್ನು ನೀಗಿಸಲಾಗುತ್ತಿದೆ. 15000 ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಮೇಲೆ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಗಳಿಕೆಯಿಂದ ವಿಶ್ವವೇ ಬದಲಾಗುತ್ತಿದೆ. ಮಕ್ಕಳಿಗೆ ವ್ಯಕ್ತಿವಿಕಸನ, ಭದ್ರ ಭವಿಷ್ಯಕ್ಕೆ ವಿಫುಲ ಅವಕಾಶಗಳ ಬಗ್ಗೆ ಪರಿಚಯಿಸಬೇಕು. ಜಗತ್ತನ್ನು ಗೆಲ್ಲುವ ಶಕ್ತಿ ನಮ್ಮ ಮಕ್ಕಳಿದೆ. ಆದ್ದರಿಂದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಶಿಶುವಿಹಾರದ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top