62 ಜನ ಅಂಗವಿಕಲರಿಗೆ ನರೇಗಾದಡಿ ಪ್ರತ್ಯೇಕ ಕೆಲಸ

ಕಾರಟಗಿ : ಈ ಅಂಗವಿಕಲರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಅವರ ಎಲ್ಲ ಸಮಸ್ಯೆಗಳ ಪಯಣಕ್ಕೆ ನರೇಗಾ ಯೋಜನೆ ಊರುಗೋಲು ಆಗಿದೆ ! ಕಾರಟಗಿ ತಾಲೂಕಿನ ಯರಡೋಣ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ 62 ಅಂಗವಿಕಲರಿಗೆ ಪ್ರತ್ಯೇಕವಾಗಿ ಎನ್ ಎಂಆರ್ ತೆಗೆದು ಕಾಲುವೆ ಹೂಳೆತ್ತುವ ಕೆಲಸ ನೀಡಲಾಗಿತ್ತು. ಈ ಕೆಲಸದಲ್ಲಿ ದೈಹಿಕ ನ್ಯೂನ್ಯತೆ ಎದುರಿಸುತ್ತಿರುವ ಅಂಧರು, ಬುದ್ಧಿಮಾಂದ್ಯರು, ಕಾಲು ಇಲ್ಲದವರು, ಕುಷ್ಠರೋಗ ನಿವಾರಿತರು, ಮೂಗರು, ಕಿವುಡರು, ಕುಬ್ಜತೆ ಹೊಂದಿದವರು ಹೀಗೆ ಕಷ್ಟದ ಬದುಕು ಸವೆಸುತ್ತಿರುವ ವಿಕಲಚೇತನರು ನರೇಗಾದಡಿ ಕೆಲಸ ನಿರ್ವಹಿಸಿದರು. ಈ ವಿಕಲಚೇತನರು ತಿಂಗಳ ಮಾಸಾಶನದಲ್ಲೇ ನಿತ್ಯವೂ ಕಷ್ಟದ ಜೀವನ ನಡೆಸುತ್ತಿದ್ದರು. ಇವರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಯರಡೋಣ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಐಇಸಿ ಚಟುವಟಿಕೆಯಡಿ ವಿಕಲಚೇತನರಿಗೆ ಇರುವ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಹಾಗೂ ವಿಕಲಚೇತನರ ಸರ್ವೇ ನಡೆಸಿ ಉದ್ಯೋಗ ಚೀಟಿ ಇಲ್ಲದವರಿಗೆ ಉದ್ಯೋಗ ಚೀಟಿ ನೀಡಲಾಗಿತ್ತು. ಇದರಿಂದ ಹೆಚ್ಚಿನ ಜನರು ನರೇಗಾದಡಿ ಕೆಲಸ ಮಾಡಲು ಅನುಕೂಲವಾಯಿತು.


ಒಂದಾಗಿ ಕೆಲಸ, ಒಂದಾಗಿ ಸವಿ ಭೋಜನ
ಈ ವಿಕಲಚೇತನರಲ್ಲಿ ಕೆಲವರಿಗೆ ಮನೆ ಪ್ರೀತಿ, ಕಾಳಜಿ ಇಲ್ಲವಾಗಿದೆ. !, ಇನ್ನೂ ಕೆಲವೊಬ್ಬರಿಗೆ ಯಾರ ಪೋಷಣೆ, ಸಹಾಯ ಸಿಗುತ್ತಿಲ್ಲ. ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ‘ಕಷ್ಟದ ಜೀವನ ನಡೆಸುತ್ತಿರುವ ಕೆಲವರಿಗೆ, ‘ನಾನು ವಿಕಲಾಂಗನಾಗಿ ಹುಟ್ಟಿದ್ದೇ ತಪ್ಪಾಯ್ತಾ’ ? ಎಂಬ ಭಾವ ಮೂಡಿತ್ತು. ಆದರೆ, ನರೇಗಾ ಯೋಜನೆ ಅವರಲ್ಲಿ ಹೊಸ ಬದುಕಿನ ಭರವಸೆ, ಪ್ರೀತಿ ಜೊತೆಗೆ ಕಾಳಜಿ ನೀಡಿದೆ. ಈ ಗ್ರಾಪಂ ವ್ಯಾಪ್ತಿಯ ವಿಕಲಚೇತನರು ಒಟ್ಟಾಗಿ ನರೇಗಾ ಕೆಲಸ ಮಾಡುತ್ತಾರೆ. ನರೇಗಾ ಕೆಲಸ ನೀಡಿದ ದಿನಗಳಲ್ಲಿ ‘ಕೆಲಸ ಮುಗಿದ ನಂತರ ತಲಾ 20 ರೂ. ಹಣ ಹಾಕಿ ತಾವೇ ಊಟ ಸಿದ್ಧಪಡಿಸಿಕೊಂಡು ಗುಂಪಾಗಿ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸುವುದು, ಒಬ್ಬರಿಗೊಬ್ಬರು ಪರಸ್ಪರ ಕಾಳಜಿ ತೋರುತ್ತಾರೆ. ನರೇಗಾ ಯೋಜನೆಯೂ ನಮಗೆ ಕೆಲಸ ಹಾಗೂ ಹೆಚ್ಚಿನ ಕೂಲಿ ನೀಡುವುದರ ಜೊತೆಗೆ ನೆಮ್ಮದಿಯೂ ನೀಡುತ್ತಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಈ ವಿಕಲಚೇತನರು.


ದುಡಿಯೋಣ ಬಾ ಅಭಿಯಾನ
ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ನಿರಂತರ ನರೇಗಾ ಕೆಲಸ ನೀಡುತ್ತಿದ್ದರಿಂದ ವಿಕಲಚೇತನರಿಗೆ ಇದ್ದೂರಲ್ಲೇ ಕೆಲಸ ಸಿಗುತ್ತಿದೆ. ಜೊತೆಗೆ ಅರ್ಧ ಕೆಲಸ ಪೂರ್ತಿ ಕೂಲಿಯೂ ಸಿಗುತ್ತಿದೆ. ನರೇಗಾ ಕೂಲಿ ದಿನಕ್ಕೆ 309 ರೂ.ಗೆ ಹೆಚ್ಚಿಸಿದ್ದರಿಂದ ಅಂಗವಿಕಲರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಮನೆಯಲ್ಲಿ ನಾನು, 85 ವರ್ಷದ ನಮ್ಮ ತಾಯಿ ಇದ್ದೇವೆ. ಅವ್ವ ಊರಲ್ಲಿ ಕಟ್ಟಿಗೆ ತರಲು ಹೋದಾಗ ಬಿದ್ದು ಗಾಯ ಮಾಡಿಕೊಂಡು ಮನೆಯಲ್ಲೇ ಇದ್ದಾರೆ. ಅಣ್ಣಂದಿರು ಬೇರೆಯಾಗಿದ್ದಾರೆ. ನನಗೆ ಕಾಲುಗಳಿಲ್ಲ, ಎರಡು ಸ್ಟಿಕ್ ನಿಂದಲೇ ನಡೆಯೋದು, ನರೇಗಾ ಯೋಜನೆ ದುಡಿಯಲು ಅವಕಾಶ ನೀಡಿದೆ. ಜೀವನ ನಿರ್ವಹಣೆ ಹಾಗೂ ಅವ್ವನ ಔಷಧಿಗೆ ಕೂಲಿ ಹಣ ಖರ್ಚು ಮಾಡುತ್ತಿರುವೆ.

ನಾನು ವಿಕಲಚೇತನಳಾಗಿದ್ದು, ಡಿಇ.ಡಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಕೋವಿಡ್ ಹಾವಳಿಗೆ ಕೆಲಸ ಹೋಯ್ತು. ಪತಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಅವರ ಸಂಬಳದಲ್ಲೇ ಜೀವನ ನಡೆಯುತ್ತಿತ್ತು. ನಾನು ಮನೆಯಲ್ಲಿ ಖಾಲಿ ಇರುತ್ತಿದ್ದೆ. ನರೇಗಾದಡಿ ವಿಕಲಚೇತನರಿಗೆ ದುಡಿಯಲು ಅವಕಾಶ ಕಲ್ಪಿಸಿದ್ದರಿಂದ ನಾನು ಕೆಲಸ ಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿರುವೆ.

  • ಶೋಭಾ, ವಿಕಲಚೇತನ ಮಹಿಳೆ, ಯರಡೋಣ
    ಕಾರಟಗಿ ತಾಲೂಕಿನ ಯರಡೋಣ ಗ್ರಾಪಂ ವ್ಯಾಪ್ತಿಯ ವಿಕಲಚೇತನರಿಗೆ ನರೇಗಾದಡಿ ಪ್ರತ್ಯೇಕ ಎನ್ ಎಂಆರ್ ತೆಗೆದು ಕೆಲಸ ನೀಡಲಾಗಿದೆ. ವಿಕಲಚೇತನರು ಖುಷಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ವಿಕಲಚೇತನರು ಮಾಡಬಹುದಾದ ಕೆಲಸಗಳನ್ನು ಮಾತ್ರ ನರೇಗಾದಡಿ ನೀಡಲಾಗುತ್ತಿದೆ. ಅವರ ಸ್ವಾವಲಂಬಿ ಜೀವನಕ್ಕೆ ನರೇಗಾ ಆಸರೆಯಾಗಿದೆ.

Leave a Comment

Your email address will not be published. Required fields are marked *

Translate »
Scroll to Top