ಬಳ್ಳಾರಿ: ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ 3.58 ಕೋಟಿ ರೂ.ವೆಚ್ಚದಲ್ಲಿ ನೂತನ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅತ್ಯಾಧುನಿಕ ಪೋಲಿಸ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸ್ಮಾರ್ಟ್ ಪೋಲಿಸ್ಸಿಂ ಗ್‍ನಿಂದ ಅಪರಾಧ ತಡೆ, ಜನರ ಸುರಕ್ಷತೆ, ರಸ್ತೆ ಸುರಕ್ಷತೆ ಸೇರಿದಂತೆ ತಮ್ಮ ಕೆಲಸವನ್ನು ಪೋಲಿಸ್ ಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ ಎಂದರು.

ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ಆದಷ್ಟು ಬೇಗ ಉತ್ತಮ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುವುದು. ಜನರು, ಅದರಲ್ಲೂ ಮಹಿಳೆಯರ ಸುರಕ್ಷತೆ ಹಾಗೂ ಅಪರಾಧಗಳ ತಡೆ ನಮ್ಮ ಪ್ರಮುಖ ಅದ್ಯತೆಗಳಲ್ಲಿ ಒಂದಾಗಿದ್ದು, ಅತ್ಯಂತ ಪರಿಣಾಮಕಾರಿಯಾಗಿ ಇದನ್ನ ಮಾಡಬೇಕಿದೆ ಎಂದರು.
ಒಂದು ಪೋಲಿಸ್ ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕಾದರೇ ಅಪರಾಧಗಳ ನಿಯಂತ್ರಣ, ಶಿಕ್ಷೆಯ ಪ್ರಮಾಣ ಹೆಚ್ಚಳ, ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದು ಅತ್ಯಂತ ಅಗತ್ಯವಾಗಿದ್ದು, ಜಿಲ್ಲೆಯಲ್ಲಿರುವ ಪ್ರತಿ ಠಾಣೆಯ ಆದ್ಯತೆ ಆಗಬೇಕು ಎಂದರು. ತಂತ್ರಜ್ಞಾನ ಬಳಕೆಯಿಂದ ಮತ್ತು ಆಧುನಿಕರಣದ ಬಳಕೆಯಿಂದ ಪೋಲಿಸ್ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ ಎಂದರು.

ನಮ್ಮಲ್ಲಿ ಅತ್ಯಂತ ಶ್ರಮ ಜೀವಿಗಳಲ್ಲಿ ಒಬ್ಬರು ಪೋಲಿಸ್ರು.ಸದಾ ಜನರ ಸುರಕ್ಷತೆ ಬಗ್ಗೆ ಕಾಳಜಿ ಮಾಡುವ ಅವರ ಕ್ಷೇಮಾಭಿವೃದ್ಧಿಗೆ ಇಂದು ಹೆಚ್ಚಿನ ಗಮನ ಕೊಡಲಾಗುತ್ತಿದೆ. ರಾಜ್ಯಾದ್ಯಂತ 2ನೇ ಹಂತದ ಪೋಲಿಸ್ ವಸತಿ ಯೋಜನೆಯಲ್ಲಿ ರೂ.2000 ಕೋಟಿ ವೆಚ್ಚದಲ್ಲಿ ಒಟ್ಟು 10,034 ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷದಲ್ಲಿ ರೂ.250 ಕೋಟಿ ನೀಡಲಾಗುತ್ತಿದೆ ಎಂದರು.
ಹೀಗೆ ಇನ್ನಷ್ಟು ಉತ್ತಮ ಹೆಜ್ಜೆಗಳ ಮೂಲಕ ಪೋಲಿಸ್ ಹಾಗೂ ಅವರ ಕುಟುಂಬಗಳ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಿದೆ ಎಂದು ಹೇಳಿದರು.
ಚೋರನೂರು,ಬಳ್ಳಾರಿ ಎಪಿಎಂಸಿ ಪೋಲಿಸ್ ಠಾಣೆ ಕಟ್ಟಡ, ಕಂಪ್ಲಿ ಪೋಲಿಸ್ ಠಾಣೆ ಕಟ್ಟಡ ಸೇರಿದಂತೆ ವಿವಿಧೆಡೆ ಪೋಲಿಸ್ ಠಾಣೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇತ್ತೀಚಿಗೆ ಬಳ್ಳಾರಿಯ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ ನೀಡಿದ್ದು,ಇದರಿಂದ ಪ್ರಕರಣಗಳ ತ್ವರಿತವಾಗಿ ವಿಲೇವಾರಿಗೆ ಸಹಾಯವಾಗಲಿದೆ ಎಂದು ವಿವರಿಸಿದ ಅವರು ಹೀಗೆ ಜಿಲ್ಲಾ ಪೋಲಿಸ್ ವ್ಯವಸ್ಥೆಯನ್ನ ಹಂತ ಹಂತವಾಗಿ ಬಲಪಡಿಸುವ ಕೆಲಸ ಆಗ್ತಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಈ.ತುಕಾರಾಂ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸೇರಿದಂತೆ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು