ಬಳ್ಳಾರಿ: ನಗರದ ಬಿಡಿಎಎ ಫುಟ್‌ಬಾಲ್ ಕ್ರೀಡಾ ತರಬೇತಿ ವಸತಿ ಶಾಲೆ ಹಾಗೂ ವಿಮ್ಸ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಡಿಎಎ ಫುಟ್‌ಬಾಲ್ ಕ್ರೀಡಾಂಗಣದ ವಸತಿ ನಿಲಯಕ್ಕೆ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದಲ್ಲಿನ ಸ್ನಾನದ ಕೋಣೆ ಹಾಗೂ ಶೌಚಾಲಯಗಳ ವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಬಳಿಕ ವಸತಿ ನಿಲಯದಲ್ಲಿನ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಬಳಿಕ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿದರು. ವಸತಿ ನಿಲಯದಲ್ಲಿ ಪೌಷ್ಠಿಕ ಆಹಾರ ನೀಡದಿರುವುದು, ಅಲ್ಲಿನ ಕುಂದು ಕೊರತೆಗಳ ಕುರಿತು ವಿದ್ಯಾರ್ಥಿಗಳು ಆಯೋಗದ ಸದಸ್ಯರ ಗಮನಸೆಳೆದರು.
ಇದಕ್ಕೂ ಮುನ್ನ ವಿಮ್ಸ್ ಆಸ್ಪತ್ರೆಯ ಮಕ್ಕಳ ಎನ್‌ಎಸ್‌ಯುಐ ವಿಭಾಗಕ್ಕೆ ಭೇಟಿ ನೀಡಿದ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು, ಒಂದೇ ಬೆಡ್‌ನಲ್ಲಿ ಮೂರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಕಂಡು ವೈದ್ಯಾಧಿಕಾರಿಗಳಿಗೆ, ವಿಮ್ಸ್ ಅಸಮಧಾನ ವ್ಯಕ್ತ ಪಡಿಸಿದರು. ಬಳಿಕ ಹೆರಿಗೆ ವಾರ್ಡ್‌ಗೆ ಭೇಟಿ ಅಲ್ಲಿನ ಶೌಚಾಲಯದ ನಿರ್ವಹಣೆ ಕೊರತೆ, ಚಿಕಿತ್ಸಾ ವಿಧಾನ ಕುರಿತು ಗರ್ಭಿಣಿ, ಬಾಣಂತಿಯರಿಂದ ಮಾಹಿತಿ ಪಡೆದರು.

ಬಳಿಕ, ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಮಾತನಾಡಿ, ವಿಮ್ಸ್‌ನ ಮಕ್ಕಳ ಎನ್‌ಐಸಿಯು ಚಿಕಿತ್ಸಾ ವಿಭಾಗದಲ್ಲಿ 6೦ಬೆಡ್‌ಗಳಲ್ಲಿ ಕೇವಲ 3೦ ಬೆಡ್‌ಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಬೆಡ್‌ಗಳ ಕೊರತೆಯಿಂದ ಒಂದೇ ಬೆಡ್‌ನಲ್ಲಿ ಮೂರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಸೋಂಕು ತಗಲುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ. ಕೂಡಲೇ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡುವಂತೆ ಹಾಗೂ ಹೆರಿಗೆ ವಾರ್ಡ್‌ಗಳಲ್ಲಿ ಶೌಚಾಲಯದ ಸ್ವಚ್ಛತೆ, ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ದೂರವಾಣಿ ಮೂಲಕ ವಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಇಲ್ಲವಾದಲ್ಲಿ ಆಯೋಗದಿಂದ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ತರಬೇತಿಗಾಗಿ ರಾಜ್ಯದ ನಾನಾ ಭಾಗದ ವಿದ್ಯಾರ್ಥಿಗಳು ದಾಖಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಕ್ರೀಡಾ ವಸತಿ ಶಾಲೆ 5-7ನೇ ತರಗತಿವರೆಗೆ ಮಾತ್ರವಿದ್ದು, ಮುಂದಿನ ಅಭ್ಯಾಸಕ್ಕಾಗಿ ತರಗತಿಗಳನ್ನು ತೆರೆಯಲು ಮುಂದಾಗಬೇಕು. ಈ ಬಗ್ಗೆ ಕ್ರೀಡಾ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಭರವಸೆಯಿದೆ ಎಂದರು.