ಮಕ್ಕಳಲ್ಲಿ ನೀರಿನ ಉಳಿತಾಯದ ಅರಿವು ಮೂಡಿಸುವ ಕಾರ್ಯಕ್ರಮಗಳ ಆಯೋಜನೆಗೆ ಚಿಂತನೆ

ಬೆಂಗಳೂರು:  ನೀರಿನ ಬಳಕೆ ಮತ್ತು ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಸ್ರೇಲ್ ದೇಶ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಉತ್ತಮ ಫಲಿತಾಂಶವನ್ನು ಕಂಡುಕೊಂಡಿದೆ. ಇದೇ ಮಾದರಿಯಲ್ಲಿ ರಾಜ್ಯ ಅಂತರ್ಜಲ ಅಭಿವೃದ್ದಿ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸುವುದಾಗಿ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಬೋಸರಾಜು ತಿಳಿಸಿದರು.

 

        ಇಂದು ವಿಕಾಸಸೌಧದಲ್ಲಿ ಇಸ್ರೇಲ್ ಕೌನ್ಸಲ್ ಜನರಲ್ ಟಾಮ್ಮಿ ಬೆನ್-ಹೈಮ್ ಅವರ ನಿಯೋಗದ ಜೊತೆ ಸೌಜನ್ಯದ ಭೇಟಿಯ ನಂತರ ಮಾತನಾಡಿದರು.

ಇಸ್ರೇಲ್ ದೇಶದಲ್ಲಿ ನೀರಿನ ಲಭ್ಯತೆ ಬಹಳ ಕಡಿಮೆ. ಈ ನಿಟ್ಟಿನಲ್ಲಿ ಇಸ್ರೇಲ್ ದೇಶದ ಪ್ರಜೆಗಳಲ್ಲಿ ನೀರಿನ ಉಳಿತಾಯ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಅವರ ಮೂಲಕ ಪೋಷಕರು ನೀರನ್ನ ಪೋಲು ಮಾಡದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ನಮ್ಮ ಅಂತರ್ಜಲ ನಿರ್ದೇಶನಾಲಯದ ಅಡಿಯಲ್ಲಿರುವ ಯೋಜನೆಗಳ ಮೂಲಕ ಕೈಗೊಳ್ಳುವ ಸಾಧ್ಯತೆಗಳಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

 

        ರಾಜ್ಯದ ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲೂ ಪಾಲುದಾರಿಕೆಗೆ ಅವಕಾಶಗಳಿದ್ದು ಈ ಬಗ್ಗೆ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇಸ್ರೇಲ್ ಕೌನ್ಸಲ್ ಜನರಲ್ ಟಾಮ್ಮಿ ಬೆನ್-ಹೈಮ್  ಅವರು ಮಾತನಾಡಿ, ಇಸ್ರೇಲ್ ದೇಶ ಕೃಷಿ, ನೀರಾವರಿ ಮತ್ತು ನೀರಿನ ಬಳಕೆಯ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ನಮ್ಮ ದೇಶಗಳು ಉತ್ತಮ ಭಾಂಧವ್ಯ ಹೊಂದಿವೆ. ನೀರಿನ ಸಮರ್ಥ ಬಳಕೆಯ ನಿಟ್ಟಿನಲ್ಲಿ ಇಸ್ರೇಲ್ ದೇಶದಲ್ಲಿನ ನೂತನ ಅವಿಷ್ಕಾರಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಇಲಾಖೆಗೆ ಒದಗಿಸಲಾಗುವುದು ಎಂದರು.

        ಇದೇ ರೀತಿ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೈನ್ಸ್ ಸಿಟಿಯ ಬಗ್ಗೆ ಆಸಕ್ತಿ ವ್ಯಕ್ತಪಡಿಸರು.

 

ಸಭೆಯಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top