ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ವೀಕ್ಷಿಸಿ ಖುಷಿಪಟ್ಟ ರಾಜ್ಯಪಾಲ ಗೆಹ್ಲೋಟ್

ಬಳ್ಳಾರಿ: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ರಾಬರ್ಟ್‌ ಬ್ರೂಸ್ ಫೂಟ್ ಮ್ಯೂಸಿಯಂ ಗೆ ಮಂಗಳವಾರ ಭೇಟಿ ನೀಡಿ ಪ್ರಾಗೈತಿಹಾಸಿಕ ಕಾಲದ ನೆಲೆಗಳು ಮತ್ತು ಆ ಸಂದರ್ಭದಲ್ಲಿನ ಅಪೂರ್ವ ವಸ್ತುಗಳನ್ನು ವೀಕ್ಷಿಸಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಳ್ಳಾರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮ್ಯೂಸಿಯಂಗೆ ಭೇಟಿ ನೀಡಿ ಮ್ಯೂಸಿಯಂನಲ್ಲಿರುವ ಅಪೂರ್ವ ಪ್ರಾಗೈತಿಹಾಸಿಕ ಕಾಲದ ವಸ್ತುಗಳು ಮತ್ತು ಆ ಸಂದರ್ಭದಲ್ಲಿನ ಮಾಹಿತಿಗಳನ್ನು ತಿಳಿದುಕೊಂಡರು. ಖ್ಯಾತ ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮ್ಯೂಸಿಯಂನಲ್ಲಿರುವ ಸಂಪೂರ್ಣ ಮಾಹಿತಿ ಮತ್ತು ಮ್ಯೂಸಿಯಂ ಸ್ಥಾಪಿಸಿದ ಉದ್ದೇಶ ಹಾಗೂ ಜಿಲ್ಲಾಡಳಿತ ಸಹಕಾರವನ್ನು ಅವರು ವಿವರಿಸಿದರು. ಜಿಲ್ಲೆಯ ಕೆಲವು ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ನೆಲೆಗಳಾಗಿದ್ದವು. ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳು ಇದರಲ್ಲಿವೆ.


ಸಂಗನಕಲ್ಲು ಗ್ರಾಮದ ಬಳಿಯ ಬೆಟ್ಟಗಳು ಪ್ರಾಚೀನ ಮಾನವನ ವಾಸದ ಕುರುಹುಗಳನ್ನು ಹೊಂದಿವೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ ಬೆಟ್ಟಗಳು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೇಳುತ್ತವೆ. ಈ ಬೆಟ್ಟಗಳಲ್ಲಿ ನವಶಿಲಾಯುಗದಿಂದ ಕಬ್ಬಿಣದ ಯುಗದವರೆಗಿನ ಮನುಷ್ಯ ನೆಲೆಯ ಅವಶೇಷಗಳಿವೆ. ಶಿಲಾ ಉಪಕರಣಗಳು, ಮಡಕೆಗಳು, ಉತ್ಖನದ ವೇಳೆ ದೊರೆತ ಇತ್ಯಾದಿ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿಡಲಾಗಿದೆ ಎಂದು ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್ ಅವರು ರಾಜ್ಯಪಾಲರಿಗೆ ವಿವರಿಸಿದರು. ಮ್ಯೂಜಿಯಂ ಕೆಳಮಹಡಿಯಲ್ಲಿರುವ ಮಾನವನ ಜೈವಿಕ, ಸಾಂಸ್ಕೃತಿಕ ವಿಕಸನ ಹಾಗೂ ಆದಿಮಾನವ ಮೂಲ ನೆಲೆಯಾದ ಆಫ್ರಿಕಾದಿಂದ ಜಗತ್ತಿನ ಇತರ ಭೂ ಭಾಗಕ್ಕೆ ವಲಸೆ ಹೋದ ಎಂಬುದರ ಮಾಹಿತಿ, ಆದಿ ಮಾನವನ ವಿಕಸನದ ವಿವಿಧ ಹಂತಗಳ ಬುರುಡೆ ಮಾದರಿಯ ಪ್ರತಿರೂಪಗಳು,ಭಾರತದ ಪ್ರಾಚೀನತೆ, ಸಾಂಸ್ಕೃತಿಕ ಬೆಳವಣಿಗೆ, ಶಿಲಾಯುಗದ ವಿವಿಧ ಹಂತಗಳು ಹಾಗೂ ಕೃಷಿ ಜೀವನದ ಆರಂಭದವರೆಗಿನ ಬೆಳವಣಿಗೆಗಳ ಇತಿಹಾಸ, ಉತ್ತರ ಕರ್ನಾಟಕ ಹಾಗೂ ಆಂಧ್ರದ ರಾಯಲಸೀಮಾ ಭಾಗದಲ್ಲಿ ದೊರೆತಿರುವ ಪ್ರಾಗೈತಿಕಹಾಸದ ವಸ್ತುಗಳು ಬಗ್ಗೆ ಅವರು ವಿವರಣೆ ನೀಡಿದರು. ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬರ್ಟ್ ಬ್ರೂಸ್‌ಫೂಟ್ ಆಗಿದ್ದಾರೆ. ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿದ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ, ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿರ್ಮಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ರಾಬರ್ಟ್ ಬ್ರೂಸ್‌ಫೂಟ್. ಈ ಹಿನ್ನೆಲೆಯಲ್ಲಿ ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲಾಗಿದೆ ಎಂದು ಮ್ಯೂಜಿಯಂ ಸಮಿತಿ ಸದಸ್ಯರು ಹಾಗೂ ಹಿರಿಯ ಸಂಶೋಧಕ ಪ್ರೊ.ಕೋರಿಶೆಟ್ಟರ್ ಅವರು ವಿವರಿಸಿದರು.


ಬ್ರಿಟೀಷ್ ಆಡಳಿತದಲ್ಲಿ ಭೂವಿಜ್ಞಾನಿಯಾಗಿದ್ದ ರಾಬರ್ಟ್ ಬ್ರೂಸ್‌ಫೂಟ್‌ರನ್ನು ಭಾರತೀಯ ಪ್ರಾಗೈತಿಕಹಾಸದ ಪಿತಾಮಹಾ ಹಾಗೂ ಸಂಗನಕಲ್ಲು ನವಶಿಲಾಯುಗದ ಸಂಶೋಧನೆಯ ಪ್ರವರ್ತಕ ಎಂದು ಗುರುತಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮ್ಯೂಜಿಯಂಗೆ ಸಂಬಂಧಿಸಿದ ಮಾಹಿತಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ಆಫ್ರಿಕಾವನ್ನು ಮನಷ್ಯನ ಮೂಲ ನೆಲೆ ಎಂದು ಏಕೆ ಕರೆಯಲಾಗುತ್ತದೆ ಎಂಬುದರಿಂದ ಭೌಗೋಳಿಕವಾಗಿ ಉತ್ತರ ಮೈದಾನ ಪ್ರದೇಶ ಎಂದು ಕರೆಯಲಾಗುವ ಸ್ಥಳದ ನಗರೀಕರಣದವರೆಗಿನ ವಿವಿಧ ಹಂತಗಳು ಹಾಗೂ ಸಂಗನಕಲ್ಲುಗೆ ಸಂಬಂಧಿಸಿದ ವಿಷಯ ವಸ್ತುವನ್ನು ಮ್ಯೂಜಿಯಂನಲ್ಲಿವೆ ಎಂದು ಪ್ರೊ. ರವಿ‌ ಕೋರಿ ಶೆಟ್ಟರ್ ಅವರು ತಿಳಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಡೀ ಮ್ಯೂಸಿಯಂ ಅನ್ನು ವೀಕ್ಷಿಸಿ ಮತ್ತು ಮಾಹಿತಿ ತಿಳಿದುಕೊಂಡು ಸಂತಸಪಟ್ಟರು. ಈ ಮ್ಯೂಸಿಯಂನ ಒಂದೊಂದು ಅಂಶಗಳನ್ನು ತಿಳಿದುಕೊಳ್ಳಬೇಕೆಂದರೇ‌ ಕನಿಷ್ಠ ಮೂರುಗಂಟೆಗಳಾದರೂ ಬೇಕು ಎಂದರು. ಬಿಡುವು ಮಾಡಿಕೊಂಡು ಇನ್ನೊಮ್ಮೆ ಭೇಟಿ ನೀಡುವಂತೆ ಮ್ಯೂಸಿಯಂ ಸಮಿತಿ ಸದಸ್ಯರು ಮನವಿ ಮಾಡಿದಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರಾಬರ್ಟ್ ಬ್ರೂಸ್ ಫೂಟ್ ಮ್ಯೂಸಿಯಂ ವೆಬ್‌ಸೈಟ್ ಅನ್ನು ರಾಜ್ಯಪಾಲರು ಲೋಕಾರ್ಪಣೆಗೊಳಿಸಿದರು. ನಂತರ ಮ್ಯೂಸಿಯಂ ಮುಂಭಾಗದಲ್ಲಿರುವ‌ ಅಶೋಕನ ಶಿಲಾಶಾಸನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಎಡಿಸಿ‌ ಪಿ.ಎಸ್.ಮಂಜುನಾಥ, ಮ್ಯೂಸಿಯಂ ಸಮಿತಿ ಸದಸ್ಯರಾದ ಸಂತೋಷ ಮಾರ್ಟಿನ್, ಎಂ.ಅಹಿರಾಜ್, ಸಮದ್ ಕೊಟ್ಟೂರು ಸೇರಿದಂತೆ ಅನೇಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top