ಕೋವಿಡ್ ನಂತರ ಮತ್ತೆ ಪುಟಿದೆದ್ದ ಸ್ನೇಹ ರಾಕೇಶ್ : ತಂತ್ರಜ್ಞಾನದ ಸಾಮ್ರಾಜ್ಯ ನಿರ್ಮಾಣಕ್ಕೆ ಸನ್ನದ್ಧ

Kannada Nadu
ಕೋವಿಡ್ ನಂತರ ಮತ್ತೆ ಪುಟಿದೆದ್ದ ಸ್ನೇಹ ರಾಕೇಶ್ : ತಂತ್ರಜ್ಞಾನದ ಸಾಮ್ರಾಜ್ಯ ನಿರ್ಮಾಣಕ್ಕೆ ಸನ್ನದ್ಧ

ನಂಜುಂಡಪ್ಪ.ವಿ.
ಸ್ನೇಹಾ ರಾಕೇಶ್. ಹಾಸನದ ಚೆನ್ನರಾಯಪಟ್ಟಣ ತಾಲ್ಲೂಕಿನ ಹುಲ್ಲೇನಹಳ್ಳಿಯ ಸಾಮಾನ್ಯ ರೈತ ಕುಟುಂಬದವರು. ಅಪ್ಪಟ ಕನ್ನಡತಿ. ಎರಡು ವರ್ಷದವರಿದ್ದಾಗಲೇ ಅಜ್ಜಿ, ತಾತನ ಗರಡಿಯಲ್ಲಿ ಬೆಳೆದು ಓದಿ, ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ. ಹಾಸನದ ಮೊರಾರ್ಜಿ ದೇಸಾಯಿ ವಸತಿನಿಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸರ್ಕಾರಿ ವಸತಿ ನಿಲಯದಲ್ಲಿದ್ದುಕೊಂಡು ಎಸ್.ಎಲ್.ವಿ. ಪಾಲಿಟೆಕ್ನಿಕ್ ನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪಡೆದರು. ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಸ್ನೇಹ ರಾಕೇಶ್, ಸಂಜೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಜೊತೆಗೆ ಶೈಕ್ಷಣಿಕ ಸಾಲ ಯೋಜನೆಯಡಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್, ನಂತರ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಂ.ಎಸ್.ಸಿ ಪದವಿ ಪಡೆದರು. ಕೆಲಸಕ್ಕಾಗಿ ಅಲೆದಾಡಿದಾಗ ಅದರ ಕಷ್ಟ ಅನುಭವಕ್ಕೆ ಬಂತು.

ಆಗಲೇ ಉದ್ಯಮಿಯಾಗಿ ಉದ್ಯೋಗ ನೀಡುವ ಸಂಕಲ್ಪ ತೊಟ್ಟರು. ಶೈಕ್ಷಣಿಕ ಸಾಲದಲ್ಲಿ ಖರೀದಿಸಿದ್ದ ಲ್ಯಾಪ್ ಟಾಪ್ ಇವರಿಗೆ ಅತಿ ದೊಡ್ಡ ಬಂಡವಾಳವಾಯಿತು. ಶಿಕ್ಷಣ ಮತ್ತು ಉದ್ಯಮ ವಲಯದ ಸಮಸ್ಯೆಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳಲಾರಂಭಿಸಿದರು. ಹಳ್ಳಿಗಾಡಿನ ಸ್ನೇಹ ರಾಕೇಶ್ ಅವರಿಗೆ ಇಂಗ್ಲೀಷ್ ಪಾಂಡಿತ್ಯ ಇರಲಿಲ್ಲ. ಹಾಗೆಂದು ಭಾಷಾ ಕೌಶಲ್ಯ ಅವರ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಲಿಲ್ಲ. ಆರಂಭಿಕ ಬದುಕಿನಲ್ಲಿ ಎಡವುತ್ತಾ, ತೊಡರುತ್ತಾ, ಒಂದೊಂದೇ ಹೆಜ್ಜೆ ಇಡಲಾರಂಭಿಸಿದರು. ಹಾಗೂ ಹೀಗೂ ಅಂಬೆಗಾಲಿಡುವ ಹೊತ್ತಿಗೆ ಕಂಪೆನಿ ಸ್ಥಾಪಿಸುವ ಮಹದಾಸೆ ಚಿಗುರೊಡೆಯಿತು. ಆತ್ಮ ವಿಶ್ವಾಸದಿಂದ ಇಟ್ಟ ಒಂದೊಂದು ವಿಶ್ವಾಸದ ಹೆಜ್ಜೆ ಅವರನ್ನು ಮಹತ್ವಾಕಾಂಕ್ಷೆಯ ಮಾರ್ಗದತ್ತ ಕೊಂಡೊಯಿತು.

ಯಾವುದೇ ಅಡ್ಡಿ ಆತಂಕಗಳು. ಕೊಂಕು ಮಾತುಗಳು ಅವರ ಗುರಿಗೆ ಅಡ್ಡಿಯಾಗಲಿಲ್ಲ. ಸರೋವರಗಳು ನದಿ ಸೇರುವಂತೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆದರು. 2012 ರಲ್ಲಿ ಕೇವಲ 22 ನೇ ವಯಸ್ಸಿನಲ್ಲಿ 12 ಲಕ್ಷ ರೂಪಾಯಿ ಸಾಲ ಪಡೆದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ “ವಿ ಕ್ರಿಯೇಟ್ ಸಾಪ್ಟ್ ವೇರ್” ಕಂಪೆನಿ ಆರಂಭಿಸಿ, ವೆಬ್ ಡವಲಪ್ ಮೆಂಟ್, ಸಾಪ್ಟ್ ವೇರ್ ಸರ್ವೀಸ್, ಡಿಜಿಟಲ್ ಮಾರ್ಕೇಟಿಂಗ್ ಚಟುವಟಿಕೆಗಳನ್ನು ಆರಂಭಿಸಿದರು. 2015 ರ ವೇಳೆಗೆ ಆಕಾರ್ ಮ್ಯಾಕ್ಸ್ ಟೆಕ್ ಪ್ರವೈಟ್ ಲಿಮಿಟೆಡ್ ಎಂದು ಸಂಸ್ಥೆಯ ಹೆಸರನ್ನು ಮರು ನಾಮಕರಣ ಮಾಡಿದರು. ಕಂಪೆನಿ ಕಟ್ಟಿದಾಗ ಅಸಾಧಾರಣ ಸವಾಲುಗಳು ಎದುರಾದವು. ಎಲ್ಲವನ್ನು ಮೆಟ್ಟಿ ನಿಂತು ಭದ್ರ ಬುನಾದಿ ಹಾಕಿದರು. ಸಮರ್ಥ ಮತ್ತು ದಕ್ಷತೆಯಿಂದ ಸಂಸ್ಥೆಯ ಆಡಳಿತ ನಡೆಸಿದರು. ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ ಬೆಂಗಳೂರು, ದುಬೈ, ಲಂಡನ್, ಸಿಂಗಾಪುರ್ ನಲ್ಲಿಯೂ ಕಂಪೆನಿಯ ಶಾಖೆಗಳನ್ನು ಪ್ರಾರಂಭಿಸಿದರು. 2020 ರಲ್ಲಿ ಫಾರ್ಚೂನ್ ಇಂಡಿಯಾ ನಿಯತಕಾಲಿಕೆಯ ದೇಶದ 50 ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಸ್ನೇಹ ರಾಕೇಶ್ ಸ್ಥಾನ ಪಡೆದುಕೊಂಡರು.

ನಿತಾ ಅಂಬಾನಿ, ಕಿರಣ್ ಮುಜುಂದಾರ್ ಷಾ ಅಂತಹ ಪ್ರಭಾವಿಗಳ ಜೊತೆ ಗುರುತಿಸಿಕೊಂಡು ತಂತ್ರಜ್ಞಾನ ಕೈಗಾರಿಕಾ ವಲಯದಲ್ಲಿ ಮುಂಚೂಣಿ ಘಟ್ಟಕ್ಕೆ ತಲುಪಿದರು. ಹತ್ತು ಹಲವು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದವು. ಯೂರೋಪ್ ಸಂಸತ್ತಿನಲ್ಲಿ ಮಾತನಾಡಿದ ಮೊದಲ ಭಾರತೀಯ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು ಸ್ನೇಹ ರಾಕೇಶ್. ಬ್ಯುಸಿನೆಸ್ ಟುಡೆ ಪತ್ರಿಕೆಯ ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಎರಡನೆಯವರಾಗಿ ಗುರುತಿಸಿಕೊಂಡರು. ಫೋಬ್ಸ್ ಇಂಡಿಯಾ ಬ್ಯುಸಿನೆಸ್ ಐಕಾನ್ ನ ಹತ್ತು ಉದ್ಯಮಿಗಳಲ್ಲಿ ಒಬ್ಬರಾದರು. ಔಟ್ ಲುಕ್ ಬ್ಯುಸಿನೆಸ್ ವಲಯ ಕೂಡ ಇವರನ್ನು ಗುರುತಿಸಿತು. ಒಂದು ಸಣ್ಣ ಲ್ಯಾಪ್ ಟಾಪ್ ಮೂಲಕ ಆರಂಭಿಸಿದ ಕಂಪೆನಿ ಬೆರಗು ಮೂಡಿಸುವ ರೀತಿಯಲ್ಲಿ 250 ಕೋಟಿ ರೂಪಾಯಿ ಮೌಲ್ಯದವರೆಗೆ ಅಗಾಧ ಬೆಳವಣಿಗೆ ಕಂಡಿತು. ಸಿ.ಎಸ್.ಆರ್ ನಡಿ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡರು. ಸಹಸ್ರಾರು ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಿದರು. ತನ್ನಂತೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಕೆಯಲ್ಲಿ ಹಿಂದುಳಿಯ ಬಾರದು ಎಂದು ಸುಲಭವಾಗಿ ಇಂಗ್ಲೀಷ್ ಕಲಿಯುವ ಪುಸ್ತಕಗಳನ್ನು ಮುದ್ರಿಸಿ ವಿತರಿಸಿದರು. 2014 ರಲ್ಲಿ ರಾಕೇಶ್ ಅವರ ಜೊತೆ ವಿವಾಹವಾದ ಸ್ನೇಹ ಹೆಣ್ಣು ಮಗುವಿನ ತಾಯಿಯಾಗಿ ಸಂಸಾರ ಮತ್ತು ಉದ್ಯಮ ಜಗತ್ತು ಎಂಬ ಎರಡು ದೋಣಿಗಳ ಸಾರಥಿಯಾಗಿದರು.

ಕೋವಿಡ್ ಬಳಿಕ ಇನ್ಪ್ಲುಯೆನ್ಸ್ ಮಾರ್ಕೆಟಿಂಗ್ ಮತ್ತು “ಕನೆಕ್ಟ್ ಪ್ರೋ” ಎಂಬ ಸಂಸ್ಥೆಗಳನ್ನು ಹುಟ್ಟುಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಕಂಪೆನಿಗಳನ್ನು ಶುಭಾರಂಭ ಮಾಡಿದರು. ಅತ್ಯಾಧುನಿಕ ಕ್ಯಾಮರಾ, ಹೊಸ ತಲೆಮಾರಿನ ಸವಲತ್ತುಗಳನ್ನೊಳಗೊಂಡ ಸ್ಟುಡಿಯೋ ಸಜ್ಜುಗೊಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ಮೂಲಕ ಉತ್ಪನ್ನಗಳ ಮಾರಾಟ ಮಾಡುವ ವಿನೂತನ ಪರಿಕಲ್ಪನೆಯ ಸಂಸ್ಥೆ ಆರಂಭಿಕ ಹೆಜ್ಜೆ ಇಡುವಾಗಲೇ ಕೋವಿಡ್ ನಿಂದ ಜರ್ಝರಿತವಾಗಿದ್ದ ಮಾರುಕಟ್ಟೆ ಹಾಗೂ ಮತ್ತಿತರೆ ಕಾರಣಗಳಿಂದ ಅಷ್ಟೇನು ಬೆಳವಣಿಗೆ ಕಾಣಲಿಲ್ಲ.

ಇದು ಸ್ನೇಹಾ ರಾಕೇಶ್ ಅವರ ಆರಂಭಿಕ ಸವಾಲುಗಳು. ಸಾಧನೆಗಳು. ಯಾವುದೇ ಚಿತ್ರಕಥೆಗಿಂತ ಭಿನ್ನವೇನಲ್ಲ ಇವರ ಬದುಕು. ಕೋವಿಡ್ ವರೆಗೆ ಎಲ್ಲವೂ ಸುಗಮವಾಗಿಯೇ ನಡೆಯುತ್ತಿತ್ತು. ಕೋವಿಡ್ ಮಹಾಮಾರಿ ಇವರ ಉದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುವಂತಾಯಿತು. ಆಕಾರ್ ಮ್ಯಾಕ್ಸ್ ಟೆಕ್ ಪ್ರವೈಟ್ ಲಿಮಿಟೆಡ್ ಚಟುವಟಿಕೆ ಸ್ಥಗಿತಗೊಂಡಿತು. ಸೇವೆ ಒದಗಿಸಿದ ಕಂಪೆನಿಗಳಿಂದ ಹಣ ಬರಲಿಲ್ಲ. ಕೋಟ್ಯಂತರ ಮೊತ್ತ ಬಾಕಿ ಉಳಿದುಕೊಂಡಿತು. ಹಾಗೆಂದು ಕಂಪೆನಿಯ ನೌಕರರ ವೇತನ, ಸವಲತ್ತುಗಳಿಗೆ ತೊಂದರೆಯಾಗಲಿಲ್ಲ. ಅನ್ಯ ಮೂಲಗಳಿಂದ ಹಣ ತಂದು ನೌಕರರ ವೇತನ ಪಾವತಿಸಿದರು. ನೌಕರರ ಹಿತಾಸಕ್ತಿಗೆ ಎಂದೂ ಕುಂದು ತರಲಿಲ್ಲ.

ಒಂದು ಸಣ್ಣ ವಿರಾಮದ ನಂತರ ಇದೀಗ ಮತ್ತೆ ಸಮರೋತ್ಸಾಹದಿಂದ ಪುಟಿದೆದ್ದಿದ್ದಾರೆ ಸ್ನೇಹ ರಾಕೇಶ್. ಆಕಾರ್ ಮ್ಯಾಕ್ಸ್ ಟೆಕ್ ಪ್ರವೈಟ್ ಲಿಮಿಟೆಡ್ ಗೆ ಹೊಸ ಸ್ವರೂಪ, ಹೊಸ ತಿರುವು ನೀಡಿದ್ದಾರೆ. “ಆಕಾರ್ ಸ್ವಿಪ್ಟ್ ಗ್ಲೋಬಲ್ ಪ್ರವೈಟ್ ಲಿಮಿಟೆಡ್” ಹೆಸರಿನಡಿ ಇದೀಗ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದಿನ ತಂತ್ರಜ್ಞಾನ ನಾಳೆಗೆ ಹಳತಾಗಿರುತ್ತದೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನ, ಸುಗಮ ಜೀವನಕ್ಕೆ ಪೂರಕವಾದ ಇತ್ತೀಚಿನ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. “ಆಕಾರ್ ಸ್ವಿಪ್ಟ್ ಗ್ಲೋಬಲ್ ಪ್ರವೈಟ್ ಲಿಮಿಟೆಡ್” ಇದೀಗ ಶಿಕ್ಷಣ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಸುರಕ್ಷತಾ ಅಂಶಗಳನ್ನು ಒಳಗೊಂಡ ಪ್ರಮಾಣಪತ್ರಗಳ ಸೇವೆ ಒದಗಿಸಲು ಕಾರ್ಯೋನ್ಮುಖರಾಗಿದೆ. “ಸ್ಮಾರ್ಟ್ ಟೆಕ್ನಾಲಜಿ ಸಲ್ಯೂಷನ್ ಸರ್ಟಿಫಿಕೇಟ್ ಪ್ರಿಟಿಂಗ್” ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇಡೀ ದೇಶದಲ್ಲಿಯೇ ಅತ್ಯಂತ ವಿನೂತನ, ಸುರಕ್ಷಿತ, ವೈಶಿಷ್ಟ್ಯಪೂರ್ಣ ಪ್ರಮಾಣ ಪತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಪ್ರಮಾಣ ಪತ್ರಗಳಿಗೂ ಕ್ಯೂಆರ್ ಕೋಡ್ ಸುರಕ್ಷತೆ, ನೀರು, ಧೂಳು, ತೈಲ, ರಸಾಯನಿಕಗಳು ಬಿದ್ದರೂ ಹಾಳಾಗದ 19 ವೈಶಿಷ್ಟ್ಯಪೂರ್ಣ ಸುರಕ್ಷತಾ ಅಂಶಗಳನ್ನು ಇದು ಒಳಗೊಂಡಿದೆ. ನಕಲಿ ಅಂಕಪಟ್ಟಿ, ನಕಲಿ ಪ್ರಮಾಣ ಪತ್ರಗಳ ಪಿಡುಗನ್ನು ಈ ಅತ್ಯಾಧುನಿಕ ವ್ಯವಸ್ಥೆ ಮುಕ್ತಗೊಳಿಸಲಿದೆ. ಯಾವುದೇ ರೀತಿಯ ಪ್ರಕೃತಿ ವಿಕೋಪ, ಮಳೆ, ಪ್ರವಾಹದಿಂದ ಬಾಧಿತವಾದರೂ ಪ್ರಮಾಣ ಪತ್ರಗಳು ಹರಿಯುವುದಿಲ್ಲ. ಹಾಳಾಗುವುದಿಲ್ಲ. ಈ ಸಂಬಂಧ ಅಖಿಲ ಭಾರತ ತಾಂತ್ರಿಕ ಮಂಡಳಿ – ಎಐಸಿಟಿಇ ನಿಂದ ಸುರಕ್ಷತಾ ಪ್ರಮಾಣ ಪತ್ರಗಳಿಗೆ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇವರ “ಆಕಾರ್ ಸ್ವಿಪ್ಟ್ ಗ್ಲೋಬಲ್ ಪ್ರವೈಟ್ ಲಿಮಿಟೆಡ್” ಮೂಲಕ ಈಗಾಗಲೇ ಮಧ್ಯಪ್ರಾಚ್ಯ ದೇಶಗಳು ಒಳಗೊಂಡಂತೆ ಹಲವು ರಾಷ್ಟ್ರಗಳಿಗೆ ತರಕಾರಿ, ಅಗತ್ಯ ವಸ್ತುಗಳನ್ನು ರಫ್ತು ಚಟುವಟಿಕೆಗಳು ನಡೆಯುತ್ತಿವೆ.
ಇದೀಗ ಕನೆಕ್ಟ್ ಪ್ರೋ ಸಂಸ್ಥೆ ಮೂಲಕ ಜಾಗತಿಕವಾಗಿ ಹಲವಾರು ಸೇವೆಗಳನ್ನು ಒದಗಿಸಲು ಸಜ್ಜಾಗಿದ್ದಾರೆ ಸ್ನೇಹ ರಾಕೇಶ್. ವಿಮಾನ ಟಿಕೆಟ್ ಮುಂಗಡ ಕಾಯ್ದಿರಿಸುವ ಜೊತೆಗೆ ವಿಮಾನ ಪ್ರಯಾಣಕ್ಕೆ ಓಲಾ, ಉಬರ್ ಕ್ಯಾಬ್ ಜೊತೆಗೆ ಸಂಚರಿಸಬೇಕಾದ ಸ್ದಳ, ದರ ಸೇರಿದಂತೆ ಸಮಗ್ರ ಸೇವೆಗಳನ್ನು ಒದಗಿಸುತ್ತಿದ್ದಾರೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ರಾಜ್ಯದಿಂದ ರಾಜ್ಯ, ನಗರದಿಂದ ನಗರಗಳು ಸೇರಿದಂತೆ ವಿವಿಧೆಡೆ ಸರಕು ಸಾಗಾಣೆ ಸೇವೆಯನ್ನು ಕನೆಕ್ಟ್ ಪ್ರೋ ಮೂಲಕ ಒದಗಿಸುತ್ತಿದ್ದಾರೆ. ಕ್ಯಾಬ್, ಲಾಜಿಸ್ಟಿಕ್ ಒಳಗೊಂಡಂತೆ ಇವೆಲ್ಲವೂ ಒಂದೇ ಕಡೆ ಸಿಗುವಂತೆ ವಿಶಿಷ್ಟ ಆಪ್ ಸಿದ್ಧಪಡಿಸುತ್ತಿದ್ದಾರೆ. ಕನೆಕ್ಟ್ ಪ್ರೋ ಅಗ್ರಿಗೇಟರ್ ನ ಪಾತ್ರ ವಹಿಸಲಿದ್ದು, ಸೇವೆಗಾಗಿ ಸಂಬಂಧಟ್ಟ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಇನ್ಪ್ಲುಯೆನ್ಜಾ ಮಾರುಕಟ್ಟೆ ಚಟುವಟಿಕೆಯನ್ನು ಪುನರಾರಂಭಿಸಿದ್ದಾರೆ. ಫ್ಯೂಚರ್ ಮೈಂಡ್ ಎಂಬ ಪರಿಕಲ್ಪನೆಯಡಿ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು ಹೊಸ ಹೊಸ ಆಲೋಚನೆಗಳನ್ನು ಒಳಗೊಂಡಿರುವ ನವೋದ್ಯಮಗಳಿಗೆ ಬಂಡವಾಳ ದೊರಕಿಸಿಕೊಡಲು ವೇದಿಕೆ ಸಿದ್ಧಪಡಿಸಿದ್ದಾರೆ. ಉತ್ತಮ ಪರಿಕಲ್ಪನೆ ಹೊಂದಿರುವ ನವೋದ್ಯಮಗಳಿಗೆ ಬಂಡವಾಳ ಲಭ್ಯವಾಗುವಂತೆ ಮಾಡಿ, ಉದ್ದಿಮೆದಾರರು ಮತ್ತು ಹೂಡಿಕೆದಾರರು ಇಬ್ಬರಿಗೂ ಅನುಕೂಲವಾಗುವಂತೆ ಸಂಬಂಧ ಸೇತುವಾಗಿ ಸ್ನೇಹ ರಾಕೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸ್ನೇಹ ರಾಕೇಶ್ ಅಮಿತೋತ್ಸಾಹದಿಂದ ಪುಟಿದೆದ್ದಿದ್ದಾರೆ. ಅವರ ಬೆನ್ನ ಹಿಂದೆ ಅಪಾರ ಅನುಭವವಿದೆ. ಕೋವಿಡ್ ನಂತರದ ಜಗತ್ತು ಹೊಸ ಸವಾಲುಗಳು, ಹೊಸ ಕೌಶಲ್ಯ, ಹೊಸ ಉದ್ಯಮವಲಯದತ್ತ ಮುಖ ಮಾಡುತ್ತಿದೆ. ಈ ದಿಸೆಯಲ್ಲಿ ಅವರು ಎಲ್ಲಾ ರೀತಿಯ ತರಬೇತಿ, ಅನುಭವ ಮತ್ತು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಸಣ್ಣ ಸಣ್ಣ ವಿಚಾರಗಳನ್ನು ಸಹ ಅಳವಡಿಸಿಕೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಏರುವುದು ಅವರಿಗೆ ಕರಗತವಾಗಿದೆ. “ದೊಡ್ಡ ಕನಸು ಕಾಣಬೇಕು – ಏಕೆಂದರೆ ಜಗತ್ತು ನಮ್ಮದು” ಎಂಬ ಮಂತ್ರವನ್ನು ಮೈಗೂಡಿಸಿಕೊಂಡಿದ್ದಾರೆ. ಮೂಲಭೂತವಾಗಿ ಮಾರುಕಟ್ಟೆ ತಂತ್ರಗಾರಿಕೆಗಳನ್ನು ಬಲ್ಲ, ಉತ್ತಮ ಬ್ರ್ಯಾಂಡ್ ನಿರ್ಮಿಸುವ, ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದಾರೆ. ದುಃಖದಲ್ಲೂ, ಸಂಕಷ್ಟದಲ್ಲೂ ವಿಚಲಿತರಾಗದೇ ಆತ್ಮ ವಿಶ್ವಾಸದಿಂದ ನಗು ನಗುತ್ತಾ ಇರುವುದೇ ಇವರ ಯಶಸ್ಸಿನ ಮೆಟ್ಟಿಲು. ಎಲ್ಲಿ ನಗುವಿರುತ್ತದೆಯೋ, ಎಲ್ಲಿ ಛಲ ಇರುತ್ತದೆಯೋ ಅಲ್ಲಿ ಗೆಲುವಿರುತ್ತದೆ ಎಂಬ ಮಾತಿದೆ. ಇದಕ್ಕೆ ಜ್ವಲಂತ ಉದಾಹರಣೆ ಸ್ನೇಹ ರಾಕೇಶ್. ರಾಣಿ ಜೇನಿನಂತೆ ನಾಯಕತ್ವ ವಹಿಸಿಕೊಂಡು, ಎಲ್ಲರನ್ನು ಒಟ್ಟೊಟ್ಟಿಗೆ ಕರೆದೊಯ್ಯುವ, ಜೇನುಗೂಡು ಕಟ್ಟುವ, ಯಶಸ್ಸಿನ ತುತ್ತ ತುದಿಯತ್ತ ಸಾಗಲು ಮುನ್ನಡೆಯುತ್ತಿರುವ, ತಂತ್ರಜ್ಞಾನದ ಸಾಮ್ರಾಜ್ಯ ನಿರ್ಮಿಸಲು ಸನ್ನದ್ಧರಾಗಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";